ಉಡುಪಿ: ಶತಕದ ಗಡಿ ದಾಟಿದ ಕೊರೋನ ಪಾಸಿಟಿವ್ ಪ್ರಕರಣಗಳ ಸಂಖ್ಯೆ

Update: 2020-05-25 15:05 GMT

ಉಡುಪಿ, ಮೇ 25: ಉಡುಪಿ ಜಿಲ್ಲೆಯಲ್ಲೀಗ ನೋವೆಲ್ ಕೊರೋನ ವೈರಸ್ ಸೋಂಕಿತರ ಸಂಖ್ಯೆ ಶರವೇಗದಲ್ಲಿ ಮೇಲಕ್ಕೇರುತ್ತಿದೆ. ಸೋಮವಾರ ಒಂದೇ ದಿನದಲ್ಲಿ 32 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ ಶತಕದ ಗಡಿ (108) ದಾಟಿ ಮುಂದಕ್ಕೆ ಧಾವಿಸುತ್ತಿದೆ.

ಇಂದು ವರದಿಯಾದ 32 ಮಂದಿಯಲ್ಲಿ ಓರ್ವ ಪೊಲೀಸ್ ಹೆಡ್‌ಕಾನ್‌ಸ್ಟೇಬಲ್, ಜಿಪಂನ ಸ್ವಚ್ಛತಾ ಅಭಿಯಾನ ವಿಭಾಗದಲ್ಲಿ ಕೆಲಸ ಮಾಡುವ 30ರ ಹರೆಯದ ಯುವಕನೂ ಸೇರಿದ್ದಾರೆ. ಇಂದು ಸಹ 10 ಮಂದಿ ಮಕ್ಕಳಲ್ಲಿ ಕೊರೋನ ಪಾಸಿಟಿವ್ ಕಂಡುಬಂದಿದೆ. ಈ ಮೂಲಕ ಜಿಲ್ಲೆಯಲ್ಲಿ ಇದುವರೆಗೆ 30ಕ್ಕೂ ಅಧಿಕ ಮಕ್ಕಳು ಕೊರೋನಕ್ಕೆ ಪಾಸಿಟಿವ್ ಆದಂತಾಗಿದೆ. ಉಳಿದಂತೆ ಇಂದು 10 ಮಂದಿ ಮಹಿಳೆಯರು ಹಾಗೂ 12 ಮಂದಿ ಪುರುಷರಲ್ಲಿ ಸೋಂಕು ಕಂಡು ಬಂದಿದೆ ಎಂದು ಮಾಹಿತಿಯನ್ನು ನೀಡಿದ ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದರು.

ಸೋಮವಾರ ರಾಜ್ಯದಲ್ಲಿ ಒಟ್ಟು 93 ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಇವುಗಳಲ್ಲಿ ಅತ್ಯಧಿಕ ವರದಿ ಬಂದಿರುವುದು ಉಡುಪಿಯಿಂದ. ಮೇ 15ರಂದು ಉಡುಪಿಯಲ್ಲಿದ್ದ ಪಾಸಿಟಿವ್ ಸಂಖ್ಯೆ ಕೇವಲ ಮೂರು. ಆದರೆ ಅಲ್ಲಿಂದ ಇಂದಿಗೆ ಸರಿಯಾಗಿ 10 ದಿನಗಳಲ್ಲಿ 105 ಪ್ರಕರಣಗಳು ವರದಿಯಾಗಿವೆ. ಮಾ. 29ರಂದು ಕೊನೆಯ ಪಾಸಿಟಿವ್ ಪ್ರಕರಣ ಬಂದ ನಂತರ ಮೇ 15ರಿಂದ ಪ್ರತಿದಿನ ಸರಾಸರಿ 10 ಪ್ರಕರಣ ವರದಿಯಾದಂತಾಗಿದೆ.

ಉಡುಪಿ ಜಿಲ್ಲೆ ನಿನ್ನೆ 12ನೇ ಸ್ಥಾನದಲ್ಲಿದ್ದರೆ, ಇಂದು 32 ಹೊಸ ಪ್ರಕರಣಗಳ ಸೇರ್ಪಡೆಯಿಂದ ರಾಜ್ಯದಲ್ಲಿ ಎಂಟನೇ ಸ್ಥಾನಕ್ಕೆ ನೆಗೆದಿದೆ. ಈ ಮೂಲಕ ತನ್ನ ಪಕ್ಕದ ಉತ್ತರ ಕನ್ನಡ (14ನೇ) ಹಾಗೂ ದಕ್ಷಿಣ ಕನ್ನಡ (16) ಜಿಲ್ಲೆಗಳನ್ನು ಹಿಂದಕ್ಕೆ ಬಿಟ್ಟು ಸಾಗಿದೆ.
ಉಡುಪಿಯಲ್ಲಿ ವರದಿಯಾದ ಪ್ರಕರಣಗಳ ಸಿಂಹಪಾಲು ಮುಂಬೈ ಸೇರಿ ದಂತೆ ಮಹಾರಾಷ್ಟ್ರ ರಾಜ್ಯದಿಂದ ಬಂದವರದ್ದು. ಇಂದು ಸಹ ಬಂದ 32 ಪ್ರಕರಣಗಳಲ್ಲಿ 27 ಮಹಾರಾಷ್ಟ್ರ-ಮುಂಬೈಯಿಂದ ಬಂದವರದ್ದೇ ಆಗಿವೆ. ಉಳಿದಂತೆ ಇಬ್ಬರು ದುಬೈನಿಂದ ಬಂದವರಾದರೆ, ಒಬ್ಬರು ಕಂಟೈನ್‌ಮೆಂಟ್ ಝೋನ್‌ನಲ್ಲಿ ಕರ್ತವ್ಯ ನಿರ್ವಹಿಸಿದ ಪೊಲೀಸ್ ಸಿಬ್ಬಂದಿಯದ್ದು. ಮತ್ತೊಬ್ಬರು ಶೀತಜ್ವರ ಹಾಗೂ ಉಸಿರಾಟದ ತೊಂದರೆ ಇದ್ದ ಜಿಪಂ ಸಿಬ್ಬಂದಿಯದ್ದು. ಇನ್ನೂ ಒಬ್ಬರು ಮೇ 20ರಂದು ಪಾಸಿಟಿವ್ ಆದ ಮಹಾರಾಷ್ಟ್ರದಿಂದ ಬಂದ ಬೈಂದೂರಿನ 74 ವರ್ಷ ಪ್ರಾಯದ ವೃದ್ಧರ ಸಂಪರ್ಕಕ್ಕೆ ಬಂದವರದ್ದಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸುಧೀರ್ ‌ಚಂದ್ರ ಸೂಡ ತಿಳಿಸಿದರು.

ಇಬ್ಬರು ಸ್ಥಳೀಯರು: ಇಂದು ಪಾಸಿಟಿವ್ ಬಂದವರಲ್ಲಿ 31 ಮಂದಿ ಜಿಲ್ಲೆಯ ಹೊರಗಿನಿಂದ ಬಂದವರದ್ದಾಗಿದ್ದರೆ, ಪೊಲೀಸ್ ಸಿಬ್ಬಂದಿ ಹಾಗೂ ಜಿಪಂ ಸಿಬ್ಬಂದಿ ಸ್ಥಳೀಯರು.30ರ ಹರೆಯದ ಜಿಪಂ ಸಿಬ್ಬಂದಿ ಕಟಪಾಡಿ ಸಮೀಪದ ಕುರ್ಕಾಲಿ ನವರು. ಅವರು ಮೇ 19ರಂದು ಕೊನೆಯ ಬಾರಿಗೆ ಕಚೇರಿಗೆ ಆಗಮಿಸಿದ್ದು, ಅಂದು ಶೀತಜ್ವರವಿದ್ದ ಕಾರಣ, ಬಂದ ತಕ್ಷಣ ಅವರನ್ನು ಗಂಟಲುದ್ರವದ ಮಾದರಿ ಪರೀಕ್ಷೆಗೆ ಕಳುಹಿಸಲಾಗಿತ್ತು ಎಂದು ಜಿಪಂ ಸಿಇಓ ಪ್ರೀತಿ ಗೆಹ್ಲೋಟ್ ತಿಳಿಸಿದ್ದಾರೆ.

ಮಾದರಿಯ ವರದಿ ಇಂದು ಬಂದಿದ್ದು, ಅದು ಪಾಸಿಟಿವ್ ಆಗಿದೆ. ಮೇ 19ರಂದೇ ಅವರು ಕೆಲಸ ಮಾಡುತಿದ್ದ ಪ್ರದೇಶವನ್ನು ಸ್ಯಾನಟೈಸ್ ಮಾಡಿದ್ದು, ಬಳಿಕ ಇಡೀ ಕಚೇರಿಯನ್ನು ಸ್ಯಾನಟೈನ್ ಮಾಡಲಾಗಿದೆ. ಇಂದು ವರದಿ ಬಂದಿದ್ದು, ರಜೆಯಾಗಿರುವುದರಿಂದ ಕಚೇರಿಯನ್ನು ಸೀಲ್‌ ಡೌನ್ ಮಾಡಿಲ್ಲ. ನಾಳೆ ಆ ಕಚೇರಿಯನ್ನು ಮುಚ್ಚುತ್ತೇವೆ ಎಂದವರು ತಿಳಿಸಿದ್ದಾರೆ.

ಪಾಸಿಟಿವ್ ಬಂದ ಸಿಬ್ಬಂದಿ ನಾಲ್ವರು ಹೈರಿಸ್ಕ್ ಸಂಪರ್ಕಿತರನ್ನು ಹೊಂದಿದ್ದು, ಅವರನ್ನೆಲ್ಲಾ ಈಗಾಗಲೇ ಪರೀಕ್ಷೆಗೆ ಒಳಪಡಿಸಿದ್ದೇವೆ. ಇನ್ನು ಅವರ ಪ್ರಾಥಮಿಕ ಸಂಪರ್ಕಿತರನ್ನು ನಾಳೆ ಗುರುತಿಸಿ ಅವರನ್ನೂ ಪರೀಕ್ಷೆಗೊಳಪಡಿಸಿ ಕ್ವಾರಂಟೈನ್ ಮಾಡುತ್ತೇವೆ ಎಂದು ಗೆಹ್ಲೋಟ್ ತಿಳಿಸಿ ದರು. ಇವರ ವರದಿಯ ಬಳಿಕ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.

ಹೆಬ್ರಿ ಠಾಣೆಗೆ ಬೀಗ: ನಿನ್ನೆ ಪಾಸಿಟಿವ್ ಬಂದ ಅಜೆಕಾರು ಠಾಣೆಯ ಎಎಸ್‌ಐ ಅವರೊಂದಿಗೆ ಸೋಮೇಶ್ವರ ಚೆಕ್‌ಪೋಸ್ಟ್‌ನಲ್ಲಿ ಕರ್ತವ್ಯ ನಿರ್ವಹಿ ಸಿದ ಹೆಬ್ರಿ ಠಾಣೆಯ 25 ಮಂದಿ ಪೊಲೀಸರನ್ನು ಇಂದು ಹೆಬ್ರಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕ್ವಾರಂಟೈನ್‌ನಲ್ಲಿರಿಸಲಾಗಿದೆ. ಹೆಬ್ರಿ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಅವರಿಗೆ ಅವರ ಮನೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ.

ಇದೀಗ ಹೆಬ್ರಿ ಠಾಣೆಯ ಗೇಟಿಗೆ ಬೀಗ ಹಾಕಲಾಗಿದೆ. ಇಲ್ಲಿನ ಠಾಣೆಗೆ ಜಿಲ್ಲೆಯ ಇತರೆಡೆಯ ಸಿಬ್ಬಂದಿಗಳನ್ನು ನೇಮಿಸಲಾಗಿದೆ. ಉಡುಪಿ ಸೆನ್ ಠಾಣೆಯ ಇನ್‌ಸ್ಪೆಕ್ಟರ್ ಸೀತಾರಾಮ್ ತಾತ್ಕಾಲಿಕವಾಗಿ ಇಲ್ಲಿ ಠಾಣಾಧಿಕಾರಿಯಾಗಿ ಹಾಗೂ ನಾಲ್ವರು ಪೊಲೀಸರು ಕರ್ತವ್ಯ ನಿರ್ವಹಿಸುತಿ ದ್ದಾರೆ. ಹೆಬ್ರಿ ಪೊಲೀಸ್ ಠಾಣೆ ಎದುರಿನ ರಾಮಮಂಟಪಕ್ಕೆ ಅದನ್ನು ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News