​ಜೂ.1ರಿಂದ ದ.ಕ. ಜಿಲ್ಲೆಯಲ್ಲಿ ಖಾಸಗಿ ಬಸ್ ಸಂಚಾರ ಆರಂಭ

Update: 2020-05-25 15:36 GMT

ಮಂಗಳೂರು : ದ.ಕ. ಜಿಲ್ಲೆಯಲ್ಲಿ ಜೂನ್ 1ರಿಂದ ಖಾಸಗಿ ಮತ್ತು ಸಿಟಿ ಬಸ್‌ಗಳು ಸಂಚರಿಸಲಿದ್ದು, ಮೊದಲನೇ ಹಂತದಲ್ಲಿ ಶೇ.50ರಷ್ಟು ಬಸ್‌ಗಳನ್ನು ರಸ್ತೆಗಿಳಿಸಲು ಮಾಲಕರ ಸಂಘ ನಿರ್ಧರಿಸಿದೆ.

ಸಾಮಾನ್ಯ ದಿನಗಳಲ್ಲಿ ಮಂಗಳೂರಿಂದ ಬೆಳಗ್ಗೆ 6 ಗಂಟೆಯಿಂದ ರಾತ್ರಿ ಸುಮಾರು 10ರವರೆಗೆ 325ಕ್ಕೂ ಅಧಿಕ ಸಿಟಿ ಬಸ್‌ಗಳು ವಿವಿಧ ಪ್ರದೇಶಗಳಿಗೆ ತೆರಳುತ್ತಿದ್ದು, ಇದರಲ್ಲಿ ಸುಮಾರು 150 ಬಸ್‌ಗಳನ್ನು ಜೂನ್ 1 ರಿಂದ ಕಾರ್ಯಾಚರಣೆ ಮಾಡಲು ನಿರ್ಧರಿಸಿದೆ. ಈ ಬಗ್ಗೆ ಬುಧವಾರ ಬಸ್ ಮಾಲಕರ ಸಭೆ ನಡೆಯಲಿದ್ದು, ಇಲ್ಲಿ ಅಂತಿಮ ನಿರ್ಧಾರ ಹೊರ ಬೀಳಲಿದೆ. ಅದೇ ರೀತಿ ಸುಮಾರು 450 ರಷ್ಟು ಸರ್ವಿಸ್ ಬಸ್‌ಗಳು, ಸುಮಾರು 70 ರಷ್ಟು ಒಪ್ಪಂದದ ಮೇರೆಗಿನ ಸಾರಿಗೆ (ಕಾಂಟ್ರಾಕ್ಟ್ ಕ್ಯಾರೇಜ್) ಮತ್ತು 150ಕ್ಕೂ ಮಿಕ್ಕಿ ಟೂರಿಸ್ಟ್ ಬಸ್‌ಗಳು ಸಂಚರಿಸುತ್ತದೆ.

ಜೂನ್ 1ರಿಂದ ಆರಂಭ

‘ಜೂನ್ 1ರಿಂದ ಶೇ.50ರಷ್ಟು ಸಿಟಿ ಬಸ್‌ಗಳು ರಸ್ತೆಗಿಳಿಯಲಿವೆ. ಅಂದರೆ 1 ರೂಟ್‌ನಲ್ಲಿ ಸರಾಸರಿ 4 ಬಸ್‌ಗಳು ಸಂಚರಿಸಲಿವೆ. ಯಾವ ರೀತಿ ಬಸ್ ಕಾರ್ಯಾಚರಣೆ ನಡೆಸಬೇಕು ಎಂಬುವುದರ ಬಗ್ಗೆ ಜಿಲ್ಲಾಡಳಿತದ ಮಾರ್ಗಸೂಚಿಯನ್ನು ನಿರೀಕ್ಷಿಸುತ್ತಿದ್ದೇವೆ’ ಎಂದು ಸಿಟಿ ಬಸ್ ಮಾಲಕರ ಸಂಘದ ಅಧ್ಯಕ್ಷ ದಿಲ್‌ರಾಜ್ ಆಳ್ವ ತಿಳಿಸಿದ್ದಾರೆ.

ಸದ್ಯದಲ್ಲೇ ನರ್ಮ್ ಬಸ್ ಸಂಚಾರ

‘ಈಗಾಗಲೇ ಮುಡಿಪು ಭಾಗಕ್ಕೆ ನರ್ಮ್ ಬಸ್ ಕಾರ್ಯಚರಣೆ ನಡೆಸಲಾಗಿದೆ. ಉಳಿದ ರೂಟ್‌ಗಳಲ್ಲಿ ಯಾವ ರೀತಿ, ಎಷ್ಟು ಬಸ್‌ಗಳ ಕಾರ್ಯಾಚರಣೆ ನಡೆಸಬೇಕು ಎಂಬುವುದರ ಬಗ್ಗೆ ಒಂದೆರಡು ದಿನಗಳಲ್ಲಿ ತೀರ್ಮಾನಿಸಲಾಗುವುದು’ ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗದ ನಿಯಂತ್ರಣಾಧಿಕಾರಿ ಅರುಣ್ ಕುಮಾರ್ ಎಂದು ತಿಳಿಸಿದ್ದಾರೆ.

ಸದ್ಯದಲ್ಲೇ ಮಾರ್ಗಸೂಚಿ

ಖಾಸಗಿ ಬಸ್ ಓಡಾಟದ ಹಿನ್ನೆಲೆಯಲ್ಲಿ ಆರ್‌ಟಿಒ ಹಾಗೂ ಬಸ್ ಮಾಲಕರ ಜೊತೆ ಸಭೆ ನಡೆಸಲಾಗುವುದು. ಬಸ್ ಚಾಲಕರು, ನಿರ್ವಾಹಕರು ಹಾಗೂ ಪ್ರಯಾಣಿಕರು ಪಾಲಿಸಬೇಕಾದ ನಿಯಮಾವಳಿಗಳ ಬಗ್ಗೆ ಸೂಕ್ತ ನಿರ್ದೇಶನಗಳನ್ನು ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News