ಉಡುಪಿ ಕೊರೋನ ಸೋಂಕಿತರು: ಮುಂಬೈ ಮೂಲದವರೇ ಸಿಂಹಪಾಲು

Update: 2020-05-25 16:08 GMT

ಉಡುಪಿ, ಮೇ 25: ಜಿಲ್ಲೆಯಲ್ಲಿ ಏರುತ್ತಿರುವ ಕೊರೋನ ಸೋಂಕಿತರ ಉದ್ದದ ಪಟ್ಟಿಯಲ್ಲಿ ಮಹಾರಾಷ್ಟ್ರದಿಂದ ಅದರಲ್ಲೂ ಮುಖ್ಯವಾಗಿ ಮುಂಬೈಯಿಂದ ಬಂದವರ ಸಿಂಹಪಾಲಿದೆ. ಜಿಲ್ಲೆಯಲ್ಲಿ ಇದುವರೆಗೆ 108 ಮಂದಿ ಸೋಂಕಿತರು ಕಂಡುಬಂದಿದ್ದಾರೆ. ಇವರಲ್ಲಿ ಸುಮಾರು 75 ಮಂದಿ ಮಹಾರಾಷ್ಟ್ರದಿಂದ ಬಂದವರು.

ಇಂದು ಸಹ ಪಾಸಿಟಿವ್ ಬಂದ 32 ಮಂದಿಯಲ್ಲಿ 28 ಮಂದಿ ಮಹಾರಾಷ್ಟ್ರ ದೊಂದಿಗೆ ನಂಟನ್ನು ಹೊಂದಿದ್ದಾರೆ. 27 ಮಂದಿ ನೇರವಾಗಿ ಮುಂಬೈಯಿಂದ ಬಂದವರಾದರೆ, 65 ವರ್ಷ ಪ್ರಾಯದ ಮಹಿಳೆ, ಮೇ 20ರಂದು ಪಾಸಿಟಿವ್ ಬಂದ ಬೈಂದೂರಿನ 74 ವರ್ಷದ ವೃದ್ಧರ ಸಂಪರ್ಕಕ್ಕೆ ಬಂದವರಾಗಿದ್ದಾರೆ ಎಂದು ಡಿಎಚ್‌ಓ ಡಾ.ಸುಧೀರ್‌ಚಂದ್ರ ಸೂಡ ತಿಳಿಸಿದರು.

ಮೇ 20ರಂದು ಸೌದಿ ಅರೇಬಿಯಾದಿಂದ ಉಡುಪಿಗೆ ಬಂದ ಇಬ್ಬರು ಮಹಿಳೆಯರು ಸಹ ಇಂದು ಪಾಸಿಟಿವ್ ಬಂದವರಲ್ಲಿ ಸೇರಿದ್ದಾರೆ. 47ಮತ್ತು 21 ವರ್ಷ ಪ್ರಾಯದ ಈ ಮಹಿಳೆಯರು ಉಡುಪಿಯವರು ಎಂದು ಹೇಳಲಾಗಿದ್ದು, ಉಡುಪಿಯಲ್ಲೇ ಕ್ವಾರಂಟೈನ್‌ನಲ್ಲಿದ್ದರು.

ಇಂದು ಉಡುಪಿಯ 14 ಮಂದಿ, ಕುಂದಾಪುರದ 9 ಮಂದಿ, ಕಾರ್ಕಳದ ನಾಲ್ವರು ಹಾಗೂ ಬೈಂದೂರಿನ ಐವರು ಪಾಸಿಟಿವ್ ಬಂದವರಲ್ಲಿ ಸೇರಿದ್ದಾರೆ. ಇವರನ್ನೆಲ್ಲಾ ಚಿಕಿತ್ಸೆಗಾಗಿ ನಗರದ ಡಾ.ಟಿಎಂಎ ಪೈ ಕೋವಿಡ್ ಆಸ್ಪತ್ರೆಗೆ ದಾಖಲಿ ಸಲಾಗಿದೆ ಎಂದು ಅವರು ತಿಳಿಸಿದರು.

ಗರ್ಭಿಣಿಗೆ ಮರುಪರೀಕ್ಷೆ: ನಡುವೆ ನಿನ್ನೆ ಪಾಸಿಟಿವ್ ಆದ ಕಾರ್ಕಳದ 22ರ ಹರೆಯದ ತುಂಬು ಗರ್ಭಿಣಿಗೆ ಇಂದು ಮರು ಪರೀಕ್ಷೆ ನಡೆಸಿದ್ದು, ಇದರ ಫಲಿತಾಂಶವನ್ನು ನಾಳೆ ನಿರೀಕ್ಷಿಸಲಾಗಿದೆ. ಹೆಚ್ಚಾಗಿ ಗರ್ಭಿಣಿ ಮಹಿಳೆಯರಿಗೆ ನಾವು ಮರುಪರೀಕ್ಷೆ ನಡೆಸುತ್ತೇವೆ. ಅದರಂತೆ ಇವರಿಗೂ ಮರು ಪರೀಕ್ಷೆ ನಡೆದಿದೆ ಎಂದ ಡಾ. ಸೂಡ, ಇವರಿಗೆ ಸೋಂಕು ಹೇಗೆ ಬಂದಿದೆ ಎಂಬ ಬಗ್ಗೆ ಯಾವುದೇ ಕುರುಹು ಇನ್ನೂ ಸಿಕ್ಕಿಲ್ಲ ಎಂದರು.

ಈ ನಡುವೆ ಗರ್ಭಿಣಿ ಕೋವಿಡ್ ಆಸ್ಪತ್ರೆಗೆ ಸೇರಲು ನಿರಾಕರಿಸುತಿದ್ದು, ಮನೆಯಲ್ಲೇ ಇರುವುದಾಗಿ ಹಟ ಹಿಡಿದ್ದಾರೆ. ಹೀಗಾಗಿ ಮರು ಪರೀಕ್ಷೆಯ ವರದಿ ಬರುವವರೆಗೆ ಕಾಯಲಾಗುವುದು. ಅಲ್ಲಿಯವರೆಗೆ ಅವರು ಮನೆಯಲ್ಲಿ ಇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮಂಗಳವಾರ ಜಿಪಂ ಕಚೇರಿ ಕ್ಲೋಸ್:  ಜಿಪಂನ ಹೊರಗುತ್ತಿಗೆ ನೌಕರನಲ್ಲಿ ಕೊರೋನ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ನಾಳೆ ಜಿಪಂ ಕಚೇರಿ ಮುಚ್ಚಿರುತ್ತದೆ. ಸಿಇಓ ಸಹಿತ ಎಲ್ಲಾ ಸಿಬ್ಬಂದಿಗಳು ನಾಳೆ ಕಚೇರಿಗೆ ಬರುವುದಿಲ್ಲ. ಜಿಪಂ ಕಚೇರಿಯನ್ನು ಸ್ಯಾನಟೈಸ್ ಮಾಡಿದ ಬಳಿಕ ಮತ್ತೆ ಕಾರ್ಯ ನಿರ್ವಹಿಸಲಿದೆ ಎಂದು ಜಿಪಂ ಸಿಇಓ ಪ್ರೀತಿ ಗೆಹ್ಲೋಟ್ ಮಾಹಿತಿ ನೀಡಿದ್ದಾರೆ.

30 ವರ್ಷ ಪ್ರಾಯದ ಸೋಂಕಿತ ವ್ಯಕ್ತಿ ಮೇ 19ರಂದು ಕೊನೆಯ ಬಾರಿ ಜಿಪಂ ಕಚೇರಿಗೆ ಕೆಲಸಕ್ಕೆ ಬಂದಿದ್ದು, ಶೀತ,ಜ್ವರವಿದ್ದ ಕಾರಣ ಸ್ವಾಬ್ ಪರೀಕ್ಷೆಗೆ ಕಳುಹಿಸಲಾಗಿತ್ತು. ಅನಂತರ ಆತ ಕಚೇರಿಗೆ ಬಂದಿಲ್ಲ. ಆ ಬಳಿಕ ಹಲವು ಬಾರಿ ಜಿಪಂ ಕಚೇರಿಯನ್ನು ಸ್ಯಾನಟೈಸ್ ಮಾಡಲಾಗಿದೆ. ನಾಳೆ ಮತ್ತೊಮ್ಮೆ ಇಡೀ ಜಿಪಂ ಕಚೇರಿಯನ್ನು ಸ್ಯಾನಟೈಸ್ ಮಾಡಲಾಗುವುದು ಎಂದವರು ಹೇಳಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News