ಕುಂದಾಪುರ ಉಪವಿಭಾಗದ 191 ಪೊಲೀಸರ ಕೊರೋನ ಪರೀಕ್ಷೆ: 48 ಮಂದಿಯ ವರದಿ ನೆಗೆಟಿವ್ - ಎಎಸ್ಪಿ ಹರಿರಾಂ ಶಂಕರ್

Update: 2020-05-25 17:05 GMT

ಕುಂದಾಪುರ, ಮೇ 25: ಕುಂದಾಪುರ ಉಪ ವಿಭಾಗದಲ್ಲಿ 300ಕ್ಕೂ ಅಧಿಕ ಮಂದಿ ಪೊಲೀಸರು ಹಾಗೂ ಗೃಹರಕ್ಷಕ ಸಿಬಂದಿ ಕರ್ತವ್ಯ ನಿರ್ವಹಿಸುತ್ತಿದ್ದು, ಇವರಲ್ಲಿ 191 ಮಂದಿಯ ಗಂಟಲ ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸ ಲಾಗಿದೆ. ಈ ಪೈಕಿ ಈವರೆಗೆ 48 ಮಂದಿಯ ವರದಿ ನೆಗೆಟಿವ್ ಎಂಬುದಾಗಿ ಬಂದಿದೆ. ಉಳಿದವರ ವರದಿ ಇನ್ನು ಒಂದೆರಡು ದಿನಗಳಲ್ಲಿ ಬರಲಿದೆ. ಉಳಿದಂತೆ ಶೇ.25ರಷ್ಟು ಪೊಲೀಸರ ಪರೀಕ್ಷೆ ಬಾಕಿ ಇದ್ದು, ಶೀಘ್ರ ಎಲ್ಲರ ಪರೀಕ್ಷೆ ಯನ್ನು ಮಾಡಲಾಗುವುದು ಎಂದು ಕುಂದಾಪುರ ಸಹಾಯಕ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ತಿಳಿಸಿದ್ದಾರೆ.

ಕುಂದಾಪುರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೊರೊನಾ ವಾರಿಯರ್ಸ್‌ ಆಗಿ ದುಡಿಯುತ್ತಿರುವ ಪೊಲೀಸರ ಸಹಿತ ರಕ್ಷಣೆಗೆ ಪೊಲೀಸ್ ಇಲಾಖೆ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಎಲ್ಲ ಪೊಲೀಸರಿಗೂ ಮಾಸ್ಕ್, ಫೇಸ್ ಶೀಲ್ಡ್ ಸಹಿತ ಎಲ್ಲ ರೀತಿಯ ಸುರಕ್ಷತಾ ಸಲಕರಣೆಗಳನ್ನು ನೀಡಲಾಗಿದೆ ಎಂದರು.

ಪೊಲೀಸರು, ಗೃಹ ರಕ್ಷಕ ಸಿಬ್ಬಂದಿ, ಜಿಲ್ಲಾ ಮೀಸಲು ಪಡೆ ಪೊಲೀಸರಿಗೆ ಎನ್-95 ಮಾಸ್ಕ್‌ಗಳು, ಸಾಮಾನ್ಯ ಮಾಸ್ಕ್, ಎಲ್ಲರಿಗೂ ಫೇಸ್‌ಶೀಲ್ಡ್, ಕೈಗವಸುಗಳನ್ನು ವಿತರಿಸಲಾಗಿದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಮಾತ್ರೆ ಗಳನ್ನು ಪೊಲೀಸರು ಮತ್ತು ಅವರ ಕುಟುಂಬ ದವರಿಗೆ ನೀಡಲಾಗಿದೆ. ಬಹುತೇಕ ಪೊಲೀಸ್ ಠಾಣೆಗಳನ್ನು ಸ್ಯಾನಿಟೈಸ್ ಮಾಡಲಾಗಿದ್ದು, ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.

55ವರ್ಷ ಮೇಲ್ಪಟ್ಟವರು ಠಾಣೆಯೊಳಗೆ ಕರ್ತವ್ಯ

ಮೇಲಾಧಿಕಾರಿಗಳ ಮಾರ್ಗದರ್ಶನದಂತೆ ಪೊಲೀಸರ ಆರೋಗ್ಯ ಕಾಪಾ ಡುವ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕುಂದಾಪುರ ಉಪ ವಿಭಾಗ ವ್ಯಾಪ್ತಿಯ ಗಡಿಗಳಲ್ಲಿ ಅಥವಾ ಕ್ವಾರಂಟೈನ್ ಕೇಂದ್ರಗಳಲ್ಲಿ ಸಾಕಷ್ಟು ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇಲಾಖೆಯ ಸೂಚನೆಯನ್ನು ಪಾಲಿಸದೆ ಯಾರು ಕೂಡ ಕರ್ತವ್ಯಕ್ಕೆ ಹಿಂದೇಟು ಹಾಕಿಲ್ಲ. 55 ವರ್ಷ ಮೇಲ್ಪಟ್ಟ ಪೊಲೀಸರಿಗೆ ಠಾಣೆಯೊಳಗೆ ಕರ್ತವ್ಯ ನಿರ್ವಹಿಸಲು ನಿಯೋಜಿಸಲಾಗಿದೆ ಎಂದು ಕುಂದಾಪುರ ಸಹಾಯಕ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News