ಉಳ್ಳಾಲ: ದಿನಸಿ ಕಿಟ್ ನೀಡಿದ್ದಲ್ಲದೆ ರಮಝಾನ್ ತಿಂಗಳ ಬಾಡಿಗೆಯನ್ನೂ ಮನ್ನಾ ಮಾಡಿದ ಮನೆ ಮಾಲಕ ಬಶೀರ್

Update: 2020-05-25 17:12 GMT
ಅಬ್ದುಲ್ ಬಶೀರ್

ಮಂಗಳೂರು, ಮೇ 25: ಕೊರೋನ-ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ಮನೆಮಂದಿಗೆ ಸಾಧ್ಯವಿರುವ ನೆರವು ನೀಡಬೇಕು ಎಂಬ ಸದುದ್ದೇಶದಿಂದ ಉಳ್ಳಾಲ ಹಳೆಕೋಟೆಯ ಯುಎಂ ಅಬ್ದುಲ್ ಬಶೀರ್  ಅವರು ದಿನಸಿ ಕಿಟ್ ನೀಡಿದ್ದಲ್ಲದೆ, ಪವಿತ್ರ ರಮಝಾನ್ ತಿಂಗಳ ಮನೆ ಬಾಡಿಗೆಯನ್ನೂ ಮನ್ನಾ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

ಎನ್‌ಎಂಪಿಟಿಯ ಉದ್ಯೋಗಿಯಾಗಿದ್ದ ಅಬ್ದುಲ್ ಬಶೀರ್ ಅವರು ಸ್ವಯಂ ನಿವೃತ್ತಿ ಪಡೆದಿದ್ದು, ಕೊರೋನ-ಲಾಕ್‌ಡೌನ್ ಸಂದರ್ಭ ತನ್ನ ವಸತಿ ಸಂಕೀರ್ಣದಲ್ಲಿ ಮನೆಗಳ ಮಾಸಿಕ ಬಾಡಿಗೆಯನ್ನೂ ಮನ್ನಾ ಮಾಡಿದ್ದಾರೆ. ಈ ವಸತಿ ಸಂಕೀರ್ಣದಲ್ಲಿ 9 ಮನೆಗಳಿವೆ. ಎಲ್ಲರೂ ಮಧ್ಯಮ ವರ್ಗದವರು. ಮಾಸಿಕವಾಗಿ 60 ಸಾವಿರ ರೂ. ಬಾಡಿಗೆ ಬರುತ್ತಿದೆ. ಕೊರೋನ-ಲಾಕ್‌ಡೌನ್ ಸಂದರ್ಭ ಸಂಕಷ್ಟದಲ್ಲಿರುವವರಿಗೆ ನೆರವು ನೀಡಬೇಕು ಎಂದು ಉದ್ದೇಶಿಸಿದ ಬಶೀರ್ ಅವರು, ತನ್ನ ವಸತಿ ಸಂಕೀರ್ಣದಲ್ಲಿ ನೆಲೆಸಿರುವವರ ನೆರವಿಗೆ ಧಾವಿಸಿ ಸ್ಥಳೀಯರ ಶ್ಲಾಘನೆಗೆ ಪಾತ್ರರಾಗಿದ್ದಾರೆ.

ರಮಝಾನ್‌ನ ಆರಂಭದಲ್ಲೇ ದಿನಸಿ ಕಿಟ್ ವಿತರಿಸಿದರು. ಅಲ್ಲದೆ, ಬಾಡಿಗೆಯನ್ನೂ ನೀಡುವುದು ಬೇಡ ಎಂದು ಹೇಳಿ ಔದಾರ್ಯ ಮೆರೆದರು.
ಈ ಬಗ್ಗೆ ‘ವಾರ್ತಾಭಾರತಿ’ಯ ಜೊತೆ ಮಾತನಾಡಿದ ಬಶೀರ್, ‘13 ವರ್ಷದ ಹಿಂದೆ ನಾನು ಈ ವಸತಿ ಸಂಕೀರ್ಣ ನಿರ್ಮಿಸಿದೆ. 9 ಮನೆಗಳಿಂದ ಸದ್ಯ 60 ಸಾವಿರ ರೂ. ಬಾಡಿಗೆ ಬರುತ್ತಿದೆ. ಎಲ್ಲರೂ ಮಧ್ಯಮ ವರ್ಗದವರು. ಕೊರೋನ-ಲಾಕ್‌ಡೌನ್ ಸಂದರ್ಭ ಹೆಚ್ಚಿನವರು ಸಂಕಷ್ಟ ಕ್ಕೊಳಗಾಗಿರುವುದನ್ನು ತಿಳಿದುಕೊಂಡೆ. ಹಾಗೇ ಅವರಿಗೆ ದಿನಸಿ ಕಿಟ್ ವಿತರಿಸಿದೆ. ಇದೀಗ ಬಾಡಿಗೆ ಮನ್ನಾ ಮಾಡಿರುವೆ. ಪವಿತ್ರ ರಮಝಾನ್‌ನಲ್ಲೇ ಬಾಡಿಗೆ ಮನ್ನಾ ಮಾಡುವ ಅವಕಾಶ ಸಿಕ್ಕಿರುವುದಕ್ಕೆ ನನಗೆ ತುಂಬಾ ಸಂತೋಷವಾಗುತ್ತಿದೆ’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News