ಉಡುಪಿ ನಗರದಲ್ಲಿ ಉಚಿತ ಸಿಟಿ ಬಸ್ ಸೇವೆಗೆ ಚಾಲನೆ

Update: 2020-05-25 17:31 GMT

ಉಡುಪಿ, ಮೇ 25: ಕಡಿಯಾಳಿ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ ಹಾಗೂ ಆಸರೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆರು ದಿನಗಳ ಕಾಲ ನಡೆಯುವ ಉಚಿತ ಸಿಟಿ ಬಸ್ ಸೇವೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲು ಇಂದು ಉಡುಪಿ ಸಿಟಿ ಬಸ್ ನಿಲ್ದಾಣದಲ್ಲಿ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಕೋವಿಡ್ ನಿಯಂತ್ರಣದಲ್ಲಿ ಅಮೆರಿಕಾ, ರಷ್ಯಾ, ಫ್ರಾನ್ಸ್ ಸಹಿತ ಮುಂದುವರಿದ ರಾಷ್ಟ್ರಗಳು ಸೋತಿದ್ದರೂ, ಭಾರತ ಮಾತ್ರ ಈ ಹೋರಾಟದಲ್ಲಿ ಗೆಲುವು ಸಾಧಿಸಿದೆ. ಮರಣಗಳ ಸಂಖ್ಯೆ ನಮ್ಮಲ್ಲಿ ಕಡಿಮೆ ಇದೆ. ನಮ್ಮಲ್ಲಿ ತೆಗೆದುಕೊಂಡ ಲಾಕ್‌ಡೌನ್ ನಿರ್ಧಾರಗಳು ಕೋವಿಡ್ ನಿಯಂತ್ರಣಕ್ಕೆ ಪೂರಕವಾಗಿದ್ದವು ಎಂದರು.

ಉಡುಪಿ ಶಾಸಕ ಕೆ.ರಘುಪತಿ ಭಟ್ ಮಾತನಾಡಿ, ಇಂದಿನಿಂದ ಮೇ 30ರವರೆಗೆ ಒಟ್ಟು 7 ಮಾರ್ಗಗಳಲ್ಲಿ 12 ಬಸ್‌ಗಳು ಓಡಾಟ ನಡೆಸಲಿವೆ. ಉಚಿತ ಸೇವೆಯಾಗಿರುವುದರಿಂದ ಈ ಬಸ್‌ಗಳಲ್ಲಿ ನಿರ್ವಾಹಕರು ಇರುವು ದಿಲ್ಲ. ಬದಲು ನಗರಸಭೆ ಸದಸ್ಯರು, ಸ್ವಯಂ ಸೇವಕರು ಕಾರ್ಯ ನಿರ್ವಹಿಸಲಿದ್ದಾರೆ. ಬಸ್‌ಗಳಲ್ಲಿ ಪ್ರಯಾಣಿಕರಿಗೆ ಸ್ಯಾನಿಟೈಸರ್ ಸಹಿತ ಮುಂಜಾಗ್ರತಾ ಕ್ರಮಗಳ ಅರಿವು ವುೂಡಿಸಲಾಗುತ್ತದೆ ಎಂದು ತಿಳಿಸಿದರು.

ಸಿಟಿ ಬಸ್ ಮಾಲಕರ ಸಂಘದ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಪಂ ಅಧ್ಯಕ್ಷ ದಿನಕರ ಬಾಬು, ಗಣೇಶೋತ್ಸವ ಸಮಿತಿ ಅಧ್ಯಕ್ಷ ವಸಂತ ಭಟ್, ಉದಯಕುಮಾರ ಶೆಟ್ಟಿ, ಮಹೇಶ್ ಠಾಕೂರ್, ಯಶ್‌ಪಾಲ್ ಸುವರ್ಣ ಮೊದಲಾದವರು ಉಪಸ್ಥಿತರಿದ್ದರು. ಸಮಿತಿ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಕಿಣಿ ಕಾರ್ಯಕ್ರಮ ನಿರೂಪಿಸಿದರು.

ಕೋವಿಡ್ ನಿಯಮ ಉಲ್ಲಂಘನೆ

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಭಾಗವಹಿಸಿದ್ದ ಈ ಕಾರ್ಯ ಕ್ರಮದಲ್ಲಿ ಸುರಕ್ಷಿತ ಅಂತರ ಕಾಪಾಡದೇ ಕೋವಿಡ್ -19 ನಿಯಮಾವಳಿಯನ್ನು ಗಾಳಿಗೆ ತೂರಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.

ಬಿಜೆಪಿಯ ನೂರಾರು ಕಾರ್ಯಕರ್ತರ ಮಧ್ಯೆ ಗುಂಪು ಸೇರಿ ನಳಿನ್ ಕುಮಾರ್ ಕಟೀಲ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಯಾರು ಕೂಡ ಸುರಕ್ಷಿತ ಅಂತರವನ್ನು ಪಾಲನೆ ಮಾಡದಿರುವುದು ಕಂಡುಬಂತು. ಸುರಕ್ಷಿತ ಅಂತರವೇ ಇಲ್ಲದ ಈ ಕಾರ್ಯಕ್ರಮದಲ್ಲಿ ಸುರಕ್ಷಿತ ಅಂತರದ ಬಗ್ಗೆ ಭಾಷಣ ಬಿಗಿದಿರುವುದು ಸೋಜಿಗ ಎನಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News