​ಶ್ರಮಿಕ್ ಎಕ್ಸ್‌ಪ್ರೆಸ್‌ನಲ್ಲಿ ಹಸಿವಿನಿಂದ ವಲಸೆ ಕಾರ್ಮಿಕ ಸಾವು

Update: 2020-05-26 03:48 GMT
ಸಾಂದರ್ಭಿಕ ಚಿತ್ರ

ಲಕ್ನೋ: 60 ಗಂಟೆಗಳ ರೈಲು ಪ್ರಯಾಣದ ಅವಧಿಯಲ್ಲಿ ಕುಡಿಯಲು ಅಥವಾ ತಿನ್ನಲು ಏನೂ ಸಿಗದೇ 46 ವರ್ಷ ವಯಸ್ಸಿನ ವಲಸೆ ಕಾರ್ಮಿಕನೊಬ್ಬ ಧಾರಣ ಅಂತ್ಯ ಕಂಡ ಹೃದಯ ವಿದ್ರಾವಕ ಘಟನೆ ವರದಿಯಾಗಿದೆ.

ರೈಲ್ವೆ ನಿಯಮಾವಳಿಗೆ ವಿರುದ್ಧವಾಗಿ ರೈಲಿನಲ್ಲಿ ಆಹಾರ ಅಥವಾ ನೀರು ಕೂಡಾ ಇರಲಿಲ್ಲ ಎಂದು ಕಾರ್ಮಿಕನ ಜತೆಗಿದ್ದ ಆತನ ಅಳಿಯ ದೂರಿದರು. ರವೀಶ್ ಯಾದವ್ ಹಾಗೂ ಮಾವ ಜೋಕನ್ ಯಾದವ್, ಉತ್ತರ ಪ್ರದೇಶದ ಜಾನುಪುರ ಜಿಲ್ಲೆಯ ಮಚಲಿಶಹರ್‌ನಲ್ಲಿದ್ದ ತಮ್ಮ ಮನೆಗೆ ಬರಲು ಮುಂಬೈನಿಂದ ಈ ರೈಲು ಏರಿದ್ದರು.

ಕಟ್ಟಡ ಕಾರ್ಮಿಕರಾಗಿ ದುಡಿಯುತ್ತಿದ್ದ ಇಬ್ಬರು ಮುಂಬೈನ ಲೋಕಮಾನ್ಯ ಟರ್ಮಿನಲ್‌ನಿಂದ ಮೇ 20ರಂದು ಸಂಜೆ 7ಕ್ಕೆ ರೈಲಿನಲ್ಲಿ ಪ್ರಯಾಣ ಆರಂಭಿಸಿದ್ದರು. ವಾರಣಾಸಿ ಕಂಟೋನ್ಮೆಂಟ್ ರೈಲು ನಿಲ್ದಾಣಕ್ಕೆ ಮೇ 23ರಂದು ಬೆಳಗ್ಗೆ 7.30ಕ್ಕೆ ರೈಲು ಆಗಮಿಸಿತು. ಆದರೆ ಪ್ರಯಾಣ ದುದ್ದಕ್ಕೂ ಮಾವ ಹಸಿವು ಹಾಗೂ ಮೈ ಕೈ ನೋವಿನಿಂದ ನರಳುತ್ತಿದ್ದರು. ವಾರಣಾಸಿಗೆ ಆಗಮಿಸುವ ಅರ್ಧ ಗಂಟೆ ಮೊದಲು ಮೂರ್ಚೆ ತಪ್ಪಿ ಬಿದ್ದು ಮೃತಪಟ್ಟರು ಎಂದು ರವೀಶ್ (25) ವಿವರಿಸಿದರು.

ರೈಲಿನಲ್ಲಿ ಆಹಾರ ಪೊಟ್ಟಣ ಹಾಗೂ ನೀರು ಕೊಡಲಾಗುತ್ತದೆ ಎಂದು ಕೇಳಲ್ಪಟ್ಟಿದ್ದ ಹಿನ್ನೆಲೆಯಲ್ಲಿ ನಾವು ಯಾವುದೇ ಆಹಾರ ತೆಗೆದುಕೊಂಡಿ ರಲಿಲ್ಲ. ನಮ್ಮ ಕಂಪಾರ್ಟ್‌ಮೆಂಟ್‌ನಲ್ಲಿದ್ದ ಇತರ ಹಲವು ಮಂದಿಯ ಸ್ಥಿತಿಯೂ ಇದೇ ಆಗಿತ್ತು. ಆದ್ದರಿಂದ ಯಾರೂ ನೆರವಿಗೆ ಬರಲು ಸಾಧ್ಯವಾಗಿರಲಿಲ್ಲ. ರೈಲಿನಲ್ಲಿ ನೀರು ಕೂಡಾ ಇರಲಿಲ್ಲ ಎಂದು ಹೇಳಿದರು.

ಆದರೆ ಈ ಆರೋಪವನ್ನು ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ರವಿಪ್ರಕಾಶ್ ಚತುರ್ವೇದಿ ನಿರಾಕರಿಸಿದ್ದಾರೆ. ಈ ವ್ಯಕ್ತಿ ವಾರಣಾಸಿಗೆ ರೈಲು ಬರುವ ಮುನ್ನವೇ ಮೃತಪಟ್ಟಿದ್ದರು. ಕುಟುಂಬದವರ ಪ್ರಕಾರ ಅವರು ಹೃದ್ರೋಗಿಯಾಗಿದ್ದರು ಎಂದು ಚತುರ್ವೇದಿ ಹೇಳಿದ್ದಾರೆ.
940 ರೂ. ನೀಡಿ ಟಿಕೆಟ್ ಖರೀದಿಸಿ, ಹಸಿವೆಯಿಂದಲೇ ರೈಲು ಏರಿದ್ದೆವು. ನಮ್ಮಲ್ಲಿ ಹಣ ಇದ್ದರೂ ಎಲ್ಲೂ ಆಹಾರ ಸಿಗಲಿಲ್ಲ ಎಂದು ರವೀಶ್ ದೂರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News