ಕೊರೋನ ಸೋಂಕಿನ ನಡುವೆ ಅಸ್ಸಾಂಗೆ ಪ್ರವಾಹ ಭೀತಿ

Update: 2020-05-26 04:13 GMT

ಗುವಾಹತಿ: ರಾಜ್ಯದಲ್ಲಿ ಕೋವಿಡ್-19 ಸೋಂಕು ಪ್ರಕರಣಗಳ ಸಂಖ್ಯೆ ಸೋಮವಾರ 500ರ ಗಡಿ ದಾಟಿರುವ ನಡುವೆಯೇ ಅಸ್ಸಾಂ ಈ ವರ್ಷದ ಮೊದಲ ಹಂತದ ಪ್ರವಾಹದಿಂದ ಕಂಗೆಟ್ಟಿದೆ.

ಅಂಫಾನ್ ಚಂಡಮಾರುತದ ಪರಿಣಾಮವಾಗಿ ವ್ಯಾಪಕ ಮಳೆ ಬಿದ್ದಿರುವ ಹಿನ್ನೆಲೆಯಲ್ಲಿ ಐದು ಜಿಲ್ಲೆಗಳಲ್ಲಿ ದಿಢೀರ್ ಪ್ರವಾಹ ಪರಿಸ್ಥಿತಿ ಉದ್ಭವಿಸಿದೆ. ಲಖೀಂಪುರ, ಧೇಮಜಿ, ದಿಬ್ರೂಗಢ, ದರ್ರಾಂಗ್ ಮತ್ತು ಗೋಕ್‌ಪಾರಾ ಜಿಲ್ಲೆಗಳ 30 ಸಾವಿರಕ್ಕೂ ಹೆಚ್ಚು ಮಂದಿ ಪ್ರವಾಹದಿಂದ ಸಂತ್ರಸ್ತರಾಗಿದ್ದಾರೆ. 127 ಗ್ರಾಮಗಳು ಜಲಾವೃತವಾಗಿದ್ದು, 579 ಹೆಕ್ಟೇರ್ ಬೆಳೆ ನಾಶವಾಗಿದೆ ಎಂದು ಸರ್ಕಾರ ಹೇಳಿದೆ. ರಾಜ್ಯದಲ್ಲಿ ಒಂದೇ ದಿನ 134 ಹೊಸ ಕೊರೋನ ಪ್ರಕರಣಗಳು ಬೆಳಕಿಗೆ ಬಂದಿದ್ದು, ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 526ಕ್ಕೇರಿದೆ. 62 ಮಂದಿ ಗುಣಮುಖರಾಗಿದ್ದು, ನಾಲ್ವರು ಮೃತಪಟ್ಟಿದ್ದಾರೆ.

ಗೋಲ್‌ಪಾರ ಜಿಲ್ಲೆಯ 89ಕ್ಕೂ ಹೆಚ್ಚು ಗ್ರಾಮಗಳು ಪ್ರವಾಹದಿಂದ ಹಾನಿಗೀಡಾಗಿದ್ದು, 23 ಸಾವಿರ ಮಂದಿ ಸಂತ್ರಸ್ತರಾಗಿದ್ದಾರೆ. ಜಿಲ್ಲೆಯಲ್ಲಿ ಮೂರು ಪರಿಹಾರ ಕೇಂದ್ರಗಳನ್ನು ಆರಂಭಿಸಲಾಗಿದ್ದು, 8000 ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

ಕೊರೋನ ವೈರಸ್ ಮತ್ತು ಪ್ರವಾಹ ಭೀತಿಯ ಹಿನ್ನೆಲೆಯಲ್ಲಿ ಹೊರ ರಾಜ್ಯಗಳಲ್ಲಿ ಸಿಕ್ಕಿಹಾಕಿಕೊಂಡಿರುವ ಅಸ್ಸಾಂ ಜನತೆ ಜೂನ್ 10ರ ಬಳಿಕ ರಾಜ್ಯಕ್ಕೆ ಮರಳುವುದು ಸೂಕ್ತ ಎಂದು ಆರೋಗ್ಯ ಸಚಿವ ಹಿಮಾಂತ ಬಿಸ್ವ ಶರ್ಮಾ ಸಲಹೆ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News