ತೆಲಂಗಾಣದಲ್ಲಿ 9 ಜನರನ್ನು ಕೊಂದು ಬಾವಿಗೆ ಎಸೆದ ಪ್ರಕರಣ ಭೇದಿಸಿದ ಪೊಲೀಸರು

Update: 2020-05-26 05:58 GMT

ಹೈದರಾಬಾದ್,ಮೇ 26: ಕಳೆದ ವಾರ ತೆಲಂಗಾಣದ ವಾರಂಗಲ್‌ನಲ್ಲಿ 9 ಜನರನ್ನು ಕೊಲೆಗೈದು ಬಾವಿಗೆ ಬಿಸಾಡಿದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು 24ರ ವಯಸ್ಸಿನ ವ್ಯಕ್ತಿಯೊಬ್ಬನನ್ನು ಸೋಮವಾರ ಬಂಧಿಸಿದ್ದಾರೆ.

ಒಂದೇ ಕುಟುಂಬದ ಆರು ಜನ ಹಾಗೂ ಬಿಹಾರದ ಇಬ್ಬರು ಹಾಗೂ ತ್ರಿಪುರಾದ ಒಬ್ಬನ ಮೃತದೇಹ ಹೈದರಾಬಾದ್‌ನಿಂದ 150 ಕಿ.ಮೀ. ದೂರದ ಹಳ್ಳಿಯೊಂದರ ಬಾವಿಯೊಳಗೆ ಪತ್ತೆಯಾಗಿತ್ತು. ಆರೋಪಿಯು ತಾನು ಮಾಡಿದ್ದ ಮಹಿಳೆಯ ಕೊಲೆ ಕೃತ್ಯವನ್ನು ಮುಚ್ಚಿಹಾಕಲು 9 ಜನರನ್ನು ಸಾಯಿಸಿದ್ದಾಗಿ ಬಾಯಿ ಬಿಟ್ಟಿದ್ದಾನೆ. ಮಹಿಳೆಯು ಮಾರ್ಚ್‌ನಿಂದ ನಾಪತ್ತೆಯಾಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಸಂಜಯಕುಮಾರ್ ಯಾದವ್ ಊಟದಲ್ಲಿ ನಿದ್ದೆ ಮಾತ್ರೆ ಬೆರಸಿ ಕೊಲೆಗೈದಿದ್ದ. ಬಳಿಕ ಎಲ್ಲರನ್ನು ಬಾವಿಗೆ ಎಸೆದಿದ್ದ. ತನ್ನ ಕುಟುಂಬದ ಸಂಬಂಧಿ ಮಹಿಳೆಯೊಬ್ಬಳ ಕೊಲೆ ಕೃತ್ಯ ಮುಚ್ಚಿಹಾಕಲು ಯಾದವ್ 9 ಜನರನ್ನು ಸಾಯಿಸಿದ್ದ ಎಂದು ವಾರಂಗಲ್ ಪೊಲೀಸ್ ಕಮಿಶನರ್ ರವಿಂದರ್ ವರದಿಗಾರರಿಗೆ ತಿಳಿಸಿದ್ದಾರೆ.

ಮಕ್ಸೂದ್, ಆತನ ಪತ್ನಿ,ಇಬ್ಬರು ಪುತ್ರರು,ಪುತ್ರಿ ಹಾಗೂ ಮೊಮ್ಮಗಳು ಸಹಿತ ಒಂದೇ ಕುಟುಂಬದ ಆರು ಜನ ಹಾಗೂ ಇತರ ಮೂವರು ಕಳೆದ ವಾರ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಮೃತಪಟ್ಟ ಏಳು ಜನ ಗೋಣಿಚೀಲ ಹೊಲಿಗೆ ಘಟಕದಲ್ಲಿ ಕೆಲಸ ಮಾಡುತ್ತಿದ್ದರು. 20 ವರ್ಷಗಳ ಹಿಂದೆ ಪಶ್ಚಿಮಬಂಗಾಳದಿಂದ ವಲಸೆ ಬಂದಿದ್ದ ಮಕ್ಸೂದ್ ವಾರಂಗಲ್‌ನಲ್ಲಿ ನೆಲೆ ನಿಂತಿದ್ದರು. ಘಟಕದ ಆವರಣದ ಕೊಠಡಿಯಲ್ಲಿ ವಾಸವಾಗಿದ್ದರು.

ಬಿಹಾರದ ಯಾದವ್‌ಗೆ ಮಕ್ಸೂದ್ ಪತ್ನಿಯು ಮಹಿಳೆ ನಾಪತ್ತೆಯಾಗಿರುವ ವಿಚಾರವನ್ನು ಪೊಲೀಸರಿಗೆ ತಿಳಿಸುವುದಾಗಿ ಬೆದರಿಕೆ ಹಾಕುತ್ತಿದ್ದರು. ಹೀಗಾಗಿ ಯಾದವ್ ಕೊಲೆಯ ಪಿತೂರಿ ನಡೆಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

 ಬಾವಿಯಲ್ಲಿ 9 ಜನರ ಶವ ಕಂಡುಬಂದಾಗ ಆರಂಭದಲ್ಲಿ ಅದನ್ನು ಸಾಮೂಹಿಕ ಆತ್ಮಹತ್ಯೆ ಎಂದು ಭಾವಿಸಲಾಗಿತ್ತು. ಮೃತದೇಹದಲ್ಲಿ ಯಾವುದೇ ಗಾಯದ ಗುರುತು ಇರಲಿಲ್ಲ. ಆದರೆ, ಶವದ ಮೇಲೆ ಗೀಚಿದ ಗುರುತು ಪತ್ತೆಯಾದ ಕಾರಣ ಪೊಲೀಸರ ಆರು ವಿಶೇಷ ತಂಡ ಕೊಲೆಯ ರಹಸ್ಯ ಬೇಧಿಸಿದೆ. ಆರೋಪಿ ಯಾದವ್ ಹತ್ಯೆಯ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News