ಮಹಾರಾಷ್ಟ್ರ ಸರಕಾರ ಸುಭದ್ರ: ಶಿವಸೇನೆ

Update: 2020-05-26 15:38 GMT

ಮುಂಬೈ,ಮೇ 26: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಅವರು ಸೋಮವಾರ ರಾತ್ರಿ ಪರಸ್ಪರ ಭೇಟಿಯಾಗಿ ಸುಮಾರು ಒಂದೂವರೆ ಘಂಟೆ ಕಾಲ ಮಾತುಕತೆ ನಡೆಸಿದ್ದಾರೆ ಎಂದು ಮಂಗಳವಾರ ಇಲ್ಲಿ ತಿಳಿಸಿದ ಹಿರಿಯ ಶಿವಸೇನೆ ನಾಯಕ ಸಂಜಯ ರಾವತ್ ಅವರು,ಠಾಕ್ರೆ ನೇತೃತ್ವದ ಸರಕಾರದ ಸ್ಥಿರತೆಯ ಕುರಿತು ಊಹಾಪೋಹಗಳನ್ನು ತಳ್ಳಿಹಾಕಿದರು. ರಾಜ್ಯ ಸರಕಾರವು ಸುಭದ್ರವಾಗಿದೆ ಎಂದು ಅವರು ಒತ್ತಿ ಹೇಳಿದರು. ಆದರೆ ಉಭಯ ನಾಯಕರ ನಡುವಿನ ಮಾತುಕತೆಗಳ ವಿವರಗಳನ್ನು ಅವರು ನೀಡಲಿಲ್ಲ.

ಪವಾರ್ ಅವರು ಸೋಮವಾರ ಬೆಳಿಗ್ಗೆ ರಾಜ್ಯಪಾಲ ಬಿ.ಕೆ.ಕೋಷಿಯಾರಿ ಅವರನ್ನು ಭೇಟಿಯಾಗಿದ್ದರು. ರಾಜ್ಯಪಾಲರ ಆಹ್ವಾನದ ಮೇರೆಗೆ ಈ ಭೇಟಿ ನಡೆದಿದ್ದು,ಯಾವುದೇ ರಾಜಕೀಯ ವಿಷಯಗಳು ಚರ್ಚೆಯಾಗಿಲ್ಲ ಎಂದು ಎನ್‌ಸಿಪಿ ಬಳಿಕ ಸುದ್ದಿಗಾರರಿಗೆ ತಿಳಿಸಿತ್ತು.

 ಮಹಾರಾಷ್ಟ್ರ ವಿಕಾಸ ಅಘಾಡಿ (ಎಂವಿಎ) ಸರಕಾರದ ನೇತೃತ್ವ ವಹಿಸಿರುವ ಶಿವಸೇನೆ ಮತ್ತು ರಾಜಭವನದ ನಡುವಿನ ಸಂಬಂಧಗಳು ಹಳಸಿರುವ ಸಮಯದಲ್ಲಿಯೇ ಪವಾರ್ ಅವರು ರಾಜ್ಯಪಾಲರನ್ನು ಭೇಟಿಯಾಗಿದ್ದು ಮಹತ್ವಪೂರ್ಣವಾಗಿದೆ.

ಮಹಾರಾಷ್ಟ್ರದ ಪ್ರಮುಖ ನಾಯಕರಲ್ಲೊಬ್ಬರಾಗಿರುವ ಪವಾರ್ ಅವರು ರಾಜ್ಯ ಸರಕಾರದ ಕಾರ್ಯ ನಿರ್ವಹಣೆಯಲ್ಲಿ ಕೋಷಿಯಾರಿಯವರ ಹಸ್ತಕ್ಷೇಪ ಬಗ್ಗೆ ಬಹಿರಂಗವಾಗಿ ದೂರಿದ್ದರು.

ಹಿರಿಯ ಬಿಜೆಪಿ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಕೋವಿಡ್-19 ಬಿಕ್ಕಟ್ಟನ್ನು ನಿಭಾಯಿಸುವಲ್ಲಿ ಠಾಕ್ರೆ ಸರಕಾರದ ವೈಫಲ್ಯದ ಬಗ್ಗೆ ಇತ್ತೀಚಿಗೆ ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದರು.

ಸರಕಾರವನ್ನು ಬೆಂಬಲಿಸುತ್ತಿದ್ದೇವೆಯಷ್ಟೇ: ರಾಹುಲ್ ಗಾಂಧಿ

ಮಹಾರಾಷ್ಟ್ರದಲ್ಲಿ ಕೋವಿಡ್-19 ಬಿಕ್ಕಟ್ಟು ನಿರ್ವಹಣೆಯಲ್ಲಿ ವಿಫಲಗೊಂಡಿದೆ ಎಂದು ಆರೋಪಿಸಿರುವ ಪ್ರತಿಪಕ್ಷಗಳು ರಾಜ್ಯ ಸರಕಾರದ ವಜಾಕ್ಕೆ ಆಗ್ರಹಿಸುತ್ತಿರುವ ಮಧ್ಯೆಯೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು.ಮಹಾರಾಷ್ಟ್ರ ಸರಕಾರವನ್ನು ನಡೆಸುವಲ್ಲಿ ತನ್ನ ಪಕ್ಷವು ಪ್ರಮುಖ ಪಾತ್ರವನ್ನು ವಹಿಸಿಲ್ಲ. ಅದು ಸರಕಾರವನ್ನು ಬೆಂಬಲಿಸುತ್ತಿದೆ ಅಷ್ಟೇ ಎಂದು ಮಂಗಳವಾರ ದಿಲ್ಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ಹೇಳಿದರು.

ಕಾಂಗ್ರೆಸ್ ಎಂವಿಎದ ಭಾಗವಾಗಿದ್ದು,ಪ್ರಮುಖ ಖಾತೆಗಳನ್ನು ಹೊಂದಿದೆ.

ರಾಜ್ಯ ಸರಕಾರವನ್ನು ಸಮರ್ಥಿಸಿಕೊಂಡ ರಾಹುಲ್,ಮುಂಬೈ ಎಲ್ಲ ಕಡೆಗಳಿಂದಲೂ ಸಂಪರ್ಕಗಳನ್ನು ಹೊಂದಿದೆ ಮತ್ತು ಕೋವಿಡ್-19 ಬಿಕ್ಕಟ್ಟು ತೀವ್ರಗೊಳ್ಳಲು ಇದು ಕಾರಣವಾಗಿದೆ ಎಂದರು.

ಬಿಜೆಪಿ ವದಂತಿಗಳನ್ನು ಹಬ್ಬಿಸುತ್ತಿದೆ:ಎನ್‌ಸಿಪಿ

ಬಿಜೆಪಿಯು ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ ಹೇರಲಾಗುತ್ತದೆ ಎಂಬ ವದಂತಿಯನ್ನು ಹರಡುತ್ತಿದೆ ಎಂದು ಮಂಗಳವಾರ ಮುಂಬೈನಲ್ಲಿ ಆರೋಪಿಸಿದ ರಾಜ್ಯದ ಸಚಿವ ಹಾಗೂ ಎನ್‌ಸಿಪಿ ನಾಯಕ ನವಾಬ್ ಮಲಿಕ್ ಅವರು,ರಾಜ್ಯ ಸರಕಾರವು ಸುಭದ್ರ ಮತ್ತು ಸ್ಥಿರವಾಗಿದೆ ಹಾಗೂ ತನ್ನ ಅಧಿಕಾರಾವಧಿಯನ್ನು ಪೂರ್ಣಗೊಳಿಸಲಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News