‘ನಮಸ್ತೇ ಟ್ರಂಪ್’ ಕಾರ್ಯಕ್ರಮದ ಕಾರಣ ಗುಜರಾತ್‍ನಲ್ಲಿ ಕೊರೋನಗೆ 800ಕ್ಕೂ ಅಧಿಕ ಮಂದಿ ಬಲಿ: ಕಾಂಗ್ರೆಸ್ ಆರೋಪ

Update: 2020-05-26 10:02 GMT

ಅಹ್ಮದಾಬಾದ್ : ಗುಜರಾತ್ ರಾಜ್ಯದಲ್ಲಿ ಕೋವಿಡ್-19 ಸೋಂಕಿನಿಂದಾಗಿ 800ಕ್ಕೂ ಅಧಿಕ ಮಂದಿ ಸಾವನ್ನಪ್ಪಲು ಫೆಬ್ರವರಿಯಲ್ಲಿ ಆಯೋಜಿಸಲಾಗಿದ್ದ ನಮಸ್ತೇ ಟ್ರಂಪ್ ಕಾರ್ಯಕ್ರಮ ಕಾರಣ ಎಂದು ರಾಜ್ಯ ಕಾಂಗ್ರೆಸ್ ಆರೋಪಿಸಿದೆ. ಆದರೆ ಬಿಜೆಪಿ ಈ ಆರೋಪಗಳನ್ನು ನಿರಾಧಾರ ಎಂದು ಬಣ್ಣಿಸಿದೆಯಲ್ಲದೆ ಇಂತಹ ಒಂದು ಸಂಕಷ್ಟಕರ ಸಮಯದಲ್ಲಿ ರಾಜಕೀಯ ಮಾಡುವುದರಿಂದ ದೂರವಿರಬೇಕೆಂದು ಹೇಳಿದೆ.

ಗುಜರಾತ್‍ ನಲ್ಲಿ ಕೊರೋನವೈರಸ್ ಸೋಂಕು ಹರಡಿರುವ ಹಿಂದೆ ‘ನಮಸ್ತೇ ಟ್ರಂಪ್' ಕಾರ್ಯಕ್ರಮ ಅತಿ ದೊಡ್ಡ ಅಪರಾಧಿ ಎಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಅಮಿತ್ ಚಾವ್ಡ ಆರೋಪಿಸಿದ್ದಾರೆ. ವಿಶೇಷ ತನಿಖಾ ತಂಡದಿಂದ ಈ ಕುರಿತು ಸ್ವತಂತ್ರ ತನಿಖೆ ನಡೆಸುವಂತೆ ಕೋರಿ ತಮ್ಮ ಪಕ್ಷ ಸದ್ಯದಲ್ಲಿಯೇ ಗುಜರಾತ್ ಹೈಕೋರ್ಟಿನಲ್ಲಿ ಅಪೀಲು ಸಲ್ಲಿಸುವುದಾಗಿಯೂ ಅವರು ತಿಳಿಸಿದರು.

“ವಿಶ್ವ ಆರೋಗ್ಯ ಸಂಸ್ಥೆ ಜನವರಿಯಲ್ಲಿಯೇ ಕೋವಿಡ್-19 ಕುರಿತು ಎಚ್ಚರಿಕೆ ನೀಡಿರುವ ಹೊರತಾಗಿಯೂ ಭಾರತ ಸರಕಾರವು ನಮಸ್ತೇ ಟ್ರಂಪ್ ಕಾರ್ಯಕ್ರಮ ನಡೆಸಲು ನಿರ್ಧರಿಸಿತ್ತು. ಇದರಿಂದಾಗಿಯೇ ರಾಜ್ಯದಲ್ಲಿ 800ಕ್ಕೂ ಅಧಿಕ ಮಂದಿ ಈ ಸೋಂಕಿಗೆ ಬಲಿಯಾಗಿದ್ದಾರೆ'' ಎಂದು ಚಾವ್ಡಾ ದೂರಿದರು.

“ಗುಜರಾತ್ ರಾಜ್ಯ ಆರೋಗ್ಯ ಇಲಾಖೆ ಜನವರಿ 22ರಂದೇ ಕೊರೋನವೈರಸ್ ಕುರಿತು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಎಲ್ಲಾ ಜಿಲ್ಲಾ ಕಚೇರಿಗಳಿಗೆ ಸೂಚಿಸಿತ್ತು. ಹೀಗಿರುವಾಗ ಅಗತ್ಯ ಪಿಪಿಇ ಕಿಟ್‍ಗಳನ್ನು ಹಾಗೂ ವೆಂಟಿಲೇರ್‍ಗಳನ್ನು ಮೊದಲೇ ಏಕೆ ತರಿಸಲಾಗಿಲ್ಲ?'' ಎಂದು ಅವರು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯಿಸಿದ ರಾಜ್ಯ ಬಿಜೆಪಿ ವಕ್ತಾರ ಭರತ್ ಪಾಂಡ್ಯಾ, “ನಮಸ್ತೇ ಟ್ರಂಪ್ ಕಾರ್ಯಕ್ರಮಕ್ಕೂ ಕೊರೋನಾ ಹರಡುವಿಕೆಗೂ ಸಂಬಂಧವಿಲ್ಲ ಎಂದು ರಾಜ್ಯದ ಜನರಿಗೆ ಗೊತ್ತು. ದಿಲ್ಲಿಯ ತಬ್ಲೀಗಿ ಜಮಾತ್ ಕಾರ್ಯಕ್ರಮದ ನಂತರ ಎಲ್ಲಿ ಹೇಗೆ ಸೋಂಕು ಹರಡಿತು ಎಂಬ ವಿವರಗಳನ್ನು ಮಾಧ್ಯಮಗಳು ನೀಡಿವೆ'' ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News