ಕಾಸರಗೋಡು ಜಿಲ್ಲೆಯಲ್ಲಿ ಇಂದು ಮೂವರಿಗೆ ಕೊರೋನ ಸೋಂಕು ದೃಢ

Update: 2020-05-26 12:51 GMT

ಕಾಸರಗೋಡು: ಜಿಲ್ಲೆಯಲ್ಲಿ ಮಂಗಳವಾರ ಮೂವರಿಗೆ ಕೊರೋನ ಸೋಂಕು ದ್ರಢಪಟ್ಟಿದ್ದು, ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು  ಗುಣಮುಖರಾಗಿದ್ದಾರೆ.

ಮಹಾರಾಷ್ಟ್ರ ದಿಂದ ಆಗಮಿಸಿದ ಮಧೂರು ನಿವಾಸಿಗಳಾದ ಇಬ್ಬರು, ಕೊಲ್ಲಿ ರಾಷ್ಟ್ರ ದಿಂದ ಆಗಮಿಸಿದ ಮಡಿಕೈ ನಿವಾಸಿಗೂ ಕೊರೋನ ಸೋಂಕು ಖಚಿತವಾಗಿದೆ. ಮಧೂರು ನಿವಾಸಿಗಳಾದ 28 ವರ್ಷದ ಪುರುಷ ಮತ್ತು 25 ವರ್ಷದ ಮಹಿಳೆ (ದಂಪತಿ), ಮಡಿಕೈ ನಿವಾಸಿ 28 ವರ್ಷದ ವ್ಯಕ್ತಿಗೆ ಸೋಂಕು ದೃಢವಾಗಿದೆ.

ಮಧೂರು ನಿವಾಸಿಗಳು ಮೇ 22 ರಂದು ಮುಂಬೈಯಿಂದ ಬಸ್ ನಲ್ಲಿ ಹೊರಟು, 23ರಂದು ತಲಪ್ಪಾಡಿಗೆ ಆಗಮಿಸಿದ್ದರು. ರೋಗ ಲಕ್ಷಣ ಕಂಡು ಬಂದ ಹಿನ್ನೆಲೆಯಲ್ಲಿ ಇವರನ್ನು ಅದೇ ದಿನ ಕಾಸರಗೋಡು ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೋಂಕು ಖಚಿತಗೊಂಡ ಹಿನ್ನೆಲೆಯಲ್ಲಿ ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಯುತ್ತಿದೆ.

ಮಡಿಕೈ ನಿವಾಸಿ ಮೇ 19ರಂದು ಕತರ್ ನಿಂದ ಕಣ್ಣೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಆಗಮಿಸಿದ ದಿನದಿಂದಲೇ ಕಾಞಂಗಾಡಿನ ಸರಕಾರಿ ಕ್ವಾರೆಂಟೈನ್ ನಲ್ಲಿ ದಾಖಲಿಸಲಾಗಿತ್ತು. ಸೋಂಕು ಖಚಿತಗೊಂಡ ಹಿನ್ನೆಲೆಯಲ್ಲಿ ಇವರನ್ನು ಉಕ್ಕಿನಡ್ಕದ ಕಾಸರಗೋಡು ಮೆಡಿಕಲ್ ಕಾಲೇಜಿಗೆ ದಾಖಲಿಸಲಾಗುವುದು ಎಂದು ಜಿಲ್ಲಾ ವೈದ್ಯಾಧಿಕಾರಿ (ಆರೋಗ್ಯ) ಡಾ.ಎಂ.ವಿ.ರಾಮದಾಸ್ ತಿಳಿಸಿದ್ದಾರೆ.

ಇದೇ ವೇಳೆ ಸೋಂಕು ಖಚಿತಗೊಂಡು ಉಕ್ಕಿನಡ್ಕದ ಕಾಸರಗೋಡು ಮೆಡಿಕಲ್ ಕಾಲೇಜಿನಲ್ಲಿ ದಾಖಲಾಗಿದ್ದ ಪೈವಳಿಕೆ ನಿವಾಸಿಯಾದ 51 ವರ್ಷದ ವ್ಯಕ್ತಿ, ಕುಂಬಳೆ ನಿವಾಸಿ 49 ವರ್ಷದ ವ್ಯಕ್ತಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.  ಜಿಲ್ಲೆಯಲ್ಲಿ ಒಟ್ಟು 3205 ಮಂದಿ ನಿಗಾದಲ್ಲಿದ್ದಾರೆ. ಮನೆಗಳಲ್ಲಿ 2624 ಮಂದಿ, ಆಸ್ಪತ್ರೆಗಳಲ್ಲಿ 581 ಮಂದಿ ನಿಗಾದಲ್ಲಿದ್ದಾರೆ. 340 ಮಂದಿ ಮಂಗಳವಾರ ತಮ್ಮ ನಿಗಾ ಅವಧಿ ಪೂರ್ಣಗೊಳಿಸಿದ್ದಾರೆ. ಮಂಗವಾರ ನೂತನವಾಗಿ 32 ಮಂದಿಯನ್ನು ಐಸೊಲೇಷನ್ ವಾರ್ಡಿಗೆ ದಾಖಲಿಸಲಾಗಿದೆ.

ಜಿಲ್ಲೆಯಲ್ಲಿ 6332 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 5722 ಮಂದಿಯ ಫಲಿತಾಂಶ ನೆಗೆಟಿವ್ ಆಗಿದೆ. 181 ಮಂದಿಯ ಫಲಿತಾಂಶ  ಲಭಿಸಬೇಕಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News