'ಉಡುಪಿ: ಕೊರೋನ ಭೀತಿಯ ಮಧ್ಯೆ ಇತರ ಸಾಂಕ್ರಾಮಿಕ ರೋಗಗಳ ಸಂಖ್ಯೆ ಇಳಿಕೆ'

Update: 2020-05-26 14:48 GMT

ಉಡುಪಿ, ಮೇ 26: ಕೊರೋನ ಭೀತಿಯ ಮಧ್ಯೆ ಉಡುಪಿ ಜಿಲ್ಲೆಯಲ್ಲಿ ಸೊಳ್ಳೆಗಳಿಂದ ಹರಡುವ ಸಾಂಕ್ರಾಮಿಕ ರೋಗಗಳಾದ ಮಲೇರಿಯಾ, ಡೆಂಗ್, ಚಿಕುನ್‌ಗುನ್ಯಾ, ಮೆದುಳು ಜ್ವರ ಪ್ರಕರಣಗಳ ಸಂಖ್ಯೆ ತೀರಾ ಇಳಿಮುಖವಾಗಿದೆ.

ಜಿಲ್ಲೆಯಲ್ಲಿ ಕಳೆದ ಎಂಟು ವರ್ಷಗಳಿಂದ ಮಲೇರಿಯಾ ಪ್ರಕರಣಗಳು ತೀವ್ರ ಇಳಿಕೆಯಾಗಿದ್ದು, 2012ರಲ್ಲಿ 2217 ಪ್ರಕರಣಗಳಿದ್ದರೆ 2019ರ ಡಿಸೆಂಬರ್ ಅಂತ್ಯದ ವೇಳೆ 150 ಪ್ರಕರಣಗಳೊಂದಿಗೆ 14 ಪಟ್ಟು ಇಳಿಕೆಯಾಗಿತ್ತು. 2019ರ ಎಪ್ರಿಲ್‌ವರೆಗೆ 28 ಮತ್ತು 2020ರ ಎಪ್ರಿಲ್‌ವರೆಗೆ ಕೇವಲ 17 ಪ್ರಕರಣಗಳು ಮಾತ್ರ ದಾಖಲಾಗಿವೆ. 2018ರ ಡಿಸೆಂಬರ್ ಅಂತ್ಯದವರೆಗೆ ಒಟ್ಟು 228 ಹಾಗೂ 2019ರಲ್ಲಿ ಡಿಸೆಂಬರ್ ಅಂತ್ಯದವರೆಗೆ 280 ಡೆಂಗ್ ಪ್ರಕರಣಗಳು ದಾಖಲಾಗಿವೆ. 2019ರ ಎಪ್ರಿಲ್ ಅಂತ್ಯದವರೆಗೆ 43 ಹಾಗೂ 2020ನೆ ಎಪ್ರಿಲ್ ಅಂತ್ಯದ ವರೆಗೆ 48 ಪ್ರಕರಣಗಳು ದಾಖಲಾಗಿವೆ.

ಜಿಲ್ಲೆಯಲ್ಲಿ 2008ರಲ್ಲಿ ಆರು ಪ್ರಕರಣ ಹಾಗೂ ಎರಡು ಮರಣ, 2019ರಲ್ಲಿ ಐದು ಪ್ರಕರಣ ಹಾಗೂ ನಾಲ್ಕು ಮರಣ, 2020ರ ಎಪ್ರಿಲ್‌ವರೆಗೆ ಎರಡು ಪ್ರಕರಣಗಳು ದಾಖಲಾಗಿವೆ. ಎಲ್ಲ ಪ್ರಕರಣಗಳು ವಯಸ್ಕರಲ್ಲಿಯೇ ಕಂಡುಬರುತ್ತಿವೆ. ಕಾಯಿಲೆಯ ನಿಯಂತ್ರಣ ಕ್ರಮವಾಗಿ ಜ್ವರ ಸಮೀಕ್ಷಾ ಕಾರ್ಯ, ಸೊಳ್ಳೆ ಉತ್ಪತ್ತಿ ತಾಣಗಳ ನಾಶ ಕಾರ್ಯ, ಹೊರಾಂಗಣ ಧೂಮೀ ಕರಣವನ್ನು ವ್ಯವಸ್ಥಿತವಾಗಿ ಸಮಸ್ಯಾತ್ಮಕ ಪ್ರದೇಶಗಳಲ್ಲಿ ನಡೆಸಲಾಗುತ್ತಿದೆ.

ಉಡುಪಿ ಹೆಲ್ಪ್ ಆ್ಯಪ್: ಕಳೆದ ವರ್ಷದಿಂದ ಪ್ರಾರಂಭಿಸಲಾದ ಉಡುಪಿ ಹೆಲ್ಪ್ ಆ್ಯಪ್‌ನಲ್ಲಿ ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ಕೀಟಜನ್ಯ ರೋಗ ಗಳ ಶೀಘ್ರ ಪತ್ತೆಗೆ ಹಾಗೂ ಸೊಳ್ಳೆ ಉತ್ಪತ್ತಿ ತಾಣಗಳ ನಿರ್ಮೂಲನೆಗೆ ಅನುಕೂಲ ವಾಗುವಂತೆ ಮಾಹಿತಿಗಳನ್ನು ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ.

ಮಲೇರಿಯಾ ಪ್ರಕರಣಗಳ ಮೇಲೆ ಹಿಡಿತ ಸಾಧಿಸಲು ಆರೋಗ್ಯ ಇಲಾಖೆ, ನಗರಸಭೆ ಹಾಗೂ ಮೀನುಗಾರಿಕಾ ಇಲಾಖೆಗಳ ಸಮನ್ವಯ ದೊಂದಿಗೆ ಮಲ್ಪೆ ಬಂದರಿನಲ್ಲಿ ಸೊಳ್ಳೆಗಳ ನಿಯಂತ್ರಣ, ತ್ವರಿತ ರೋಗ ಪತ್ತೆ ಹಾಗೂ ಚಿಕಿತ್ಸೆ, ನಿಂತ ನೀರಿನ ಸೂಕ್ತ ವಿಲೇವಾರಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಉಡುಪಿ ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಪ್ರಶಾಂತ್ ಭಟ್ ತಿಳಿಸಿದ್ದಾರೆ.

ಮಳೆಗಾಲದ ಯಾವುದೇ ಸಾಂಕ್ರಾಮಿಕ ರೋಗಗಳನ್ನು ಶೀಘ್ರವಾಗಿ ಪತ್ತೆ ಹಚ್ಚಲು ಹಾಗೂ ಸಂಪೂರ್ಣ ಚಿಕಿತ್ಸೆ ನೀಡಲು ಆರೋಗ್ಯ ಇಲಾಖೆ ಯಲ್ಲಿ ಪರೀಕ್ಷಾ ಕಿಟ್‌ಗಳು, ಔಷಧಿ, ರಾಸಾಯನಿಕಗಳು ಹಾಗೂ ಉಪಕರಣಗಳು ಸುಸ್ಥಿತಿಯಲ್ಲಿದ್ದು, ಸಾಕಷ್ಟು ಸಂಖ್ಯೆಯಲ್ಲಿ ದಾಸ್ತಾನು ಇರುತ್ತದೆ ಎಂದು ಅವರು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಕೀಟ ಜನ್ಯ ರೋಗಗಳು ಹತೋಟಿಯಲ್ಲಿದ್ದು, ಜನರು ಆತಂಕ ಪಡುವ ಕಾರಣ ಇಲ್ಲ. ಆದರೂ ಯಾವುದೇ ರೀತಿಯಲ್ಲಿ ಜ್ವರ ಅಥವಾ ಇನ್ನಿತರ ಸಾಂಕ್ರಾಮಿಕ ರೋಗಗಳ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ಹತ್ತಿರದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದವರು ತಿಳಿಸಿದರು.

ಉಡುಪಿ ‘ಫೈಲೇರಿಯಾ ಮುಕ್ತ ಜಿಲ್ಲೆ’

ಉಡುಪಿ ಜಿಲ್ಲೆಯಲ್ಲಿ ಕಳೆದ ಹಲವು ವರ್ಷಗಳಿಂದ ಸ್ಥಳೀಯವಾಗಿ ಫೈಲೇರಿಯಾ ಪ್ರಕರಣಗಳು ವರದಿಯಾಗಿರುವುದಿಲ್ಲ. ಈ ವಿಚಾರವಾಗಿ ಈಗಾಗಲೇ ಮೂರು ಹಂತದ ಸರ್ವೆಯನ್ನು ಯಶಸ್ವಿಯಾಗಿ ಮಾಡಲಾಗಿದೆ. ಆದುದರಿಂದ ಉಡುಪಿ ‘ಫೈಲೇರಿಯಾ ಮುಕ್ತ ಜಿಲ್ಲೆ’ ಎಂಬ ಪ್ರಮಾಣ ಪತ್ರ ಪಡೆಯುವ ನಿರೀಕ್ಷೆಯಲ್ಲಿದೆ.

ಆದರೂ ಆರೋಗ್ಯ ಇಲಾಖೆಯಿಂದ ಜಿಲ್ಲೆಯಲ್ಲಿ ಫೈಲೇರಿಯಾ ರೋಗ ಪತ್ತೆಗಾಗಿ ನಿಯಮಿತವಾಗಿ ರಾತ್ರಿ ರಕ್ತಲೇಪನಗಳ ಸಂಗ್ರಹ ಹಾಗೂ ಪರೀಕ್ಷೆ ಯನ್ನು ವಲಸೆ ಕಾರ್ಮಿಕರಲ್ಲಿ ಹಾಗೂ ಸ್ಥಳೀಯರಲ್ಲಿ ನಡೆಸಲಾಗುತ್ತಿದೆ. ಸೊಳ್ಳೆ ಗಳಲ್ಲೂ ಕೂಡ ಈ ರೋಗಾಣುವಿನ ಪರೀಕ್ಷಾ ಕಾರ್ಯ ನಿಯಮಿತವಾಗಿ ನಡೆಯುತ್ತಿದೆ ಎಂದು ಡಾ. ಪ್ರಶಾಂತ್ ಭಟ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News