ಕೊರೋನ ವೈರಸ್ ಒಂದೇ ಅಲ್ಲ, ಹಲವು ಸಾಂಕ್ರಾಮಿಕಗಳು ಬರಲಿವೆ: ಚೀನಾದ ವೈರಾಣು ಪರಿಣತೆ ಎಚ್ಚರಿಕೆ

Update: 2020-05-26 15:10 GMT

ಬೀಜಿಂಗ್, ಮೇ 26: ಈಗ ಪತ್ತೆಯಾಗುತ್ತಿರುವ ವೈರಸ್‌ಗಳು ನೀರಿನಡಿಯ ಮಂಜುಗಡ್ಡೆಯ ಮೇಲ್ಭಾಗದಲ್ಲಿ ಕಾಣುವ ತುದಿ ಮಾತ್ರ ಎಂದು ಚೀನಾದ ಖ್ಯಾತ ವೈರಾಣು ತಜ್ಞೆ ಶಿ ಝೇಂಗ್ಲಿ ಎಚ್ಚರಿಸಿದ್ದಾರೆ ಹಾಗೂ ಸಾಂಕ್ರಾಮಿಕಗಳ ವಿರುದ್ಧದ ಹೋರಾಟದಲ್ಲಿ ಅಂತರ್‌ರಾಷ್ಟ್ರೀಯ ಭಾಗೀದಾರಿಕೆಯ ಅಗತ್ಯವನ್ನು ಪ್ರತಿಪಾದಿಸಿದ್ದಾರೆ.

ಬಾವಲಿಗಳಲ್ಲಿರುವ ಕೊರೋನ ವೈರಸ್ ಬಗ್ಗೆ ಮಾಡಿರುವ ಸಂಶೋಧನೆಗಳಿಗಾಗಿ ಪ್ರಸಿದ್ಧಿ ಪಡೆದಿರುವ ಅವರು, ಚೀನಾದ ಸರಕಾರಿ ಟೆಲಿವಿಶನ್‌ಗೆ ನೀಡಿರುವ ಸಂದರ್ಶನವೊಂದರಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬಾವಲಿಗಳ ವಿಷಯದಲ್ಲಿ ಅವರು ಮಾಡಿರುವ ಸಂಶೋಧನೆಗಳಿಗಾಗಿ ಅವರನ್ನು ‘ಬ್ಯಾಟ್‌ವುಮನ್’ ಎಂಬುದಾಗಿ ಅಡ್ಡ ಹೆಸರಿನಿಂದ ಕರೆಯಲಾಗುತ್ತಿದೆ.

ವೈರಸ್‌ಗಳ ಬಗ್ಗೆ ಮಾಡುವ ಸಂಶೋಧನೆಗಳಲ್ಲಿ ವಿಜ್ಞಾನಿಗಳು ಮತ್ತು ಸರಕಾರಗಳು ಪಾರದರ್ಶಕ ಹಾಗೂ ಸಹಕಾರ ಮನೋಭಾವ ಹೊಂದಿರುವ ಅಗತ್ಯವಿದೆ ಹಾಗೂ ವಿಜ್ಞಾನವನ್ನು ರಾಜಕೀಯಗೊಳಿಸುವುದು ತುಂಬಾ ವಿಷಾದನೀಯ ಎಂದು ವುಹಾನ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಯ ಉಪ ನಿರ್ದೇಶಕರೂ ಆಗಿರುವ ಶಿ ಝೇಂಗ್ಲಿ ಹೇಳಿದರು.

ಚೀನಾದ ವುಹಾನ್ ನಗರದಲ್ಲಿ ಕಳೆದ ವರ್ಷದ ಕೊನೆಯಲ್ಲಿ ಕೊರೋನ ವೈರಸ್ ಸಾಂಕ್ರಾಮಿಕ ಸ್ಫೋಟಗೊಂಡಂದಿನಿಂದ ಅದೇ ನಗರದಲ್ಲಿರುವ ಈ ವೈರಸ್ ಸಂಶೋಧನಾ ಸಂಸ್ಥೆಯು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಭಾರೀ ವಿವಾದಕ್ಕೆ ಸಿಲುಕಿಕೊಂಡಿದೆ. ನೋವೆಲ್-ಕೊರೋನ ವೈರಸನ್ನು ಅದೇ ಪ್ರಯೋಗಾಲಯದಲ್ಲಿ ಅಭಿವೃದ್ಧಿಪಡಿಸಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಇತರ ದೇಶಗಳ ನಾಯಕರು ಆರೋಪಿಸಿದ್ದಾರೆ.

ಮುಂದಿನ ಸಂಭಾವ್ಯ ಸಾಂಕ್ರಾಮಿಕ ರೋಗ ಸ್ಫೋಟದಿಂದ ಮಾನವರು ನರಳುವುದನ್ನು ತಪ್ಪಿಸಲು ನಾವು ಬಯಸಿದರೆ, ಪ್ರಕೃತಿಯಲ್ಲಿರುವ ಕಾಡು ಪ್ರಾಣಿಗಳು ಹೊತ್ತಿರುವ ಈ ಅಜ್ಞಾತ ವೈರಸ್‌ಗಳ ಬಗ್ಗೆ ತಿಳಿಯಲು ಹಾಗೂ ಆರಂಭದಲ್ಲೇ ಮುನ್ನೆಚ್ಚರಿಕೆ ಕೊಡಲು ನಾವು ಈಗಲೇ ಸಂಶೋಧನೆಗೆ ಇಳಿಯಬೇಕಾಗುತ್ತದೆ ಎಂದು ಸಿಜಿಟಿಎನ್‌ಗೆ ನೀಡಿದ ಸಂದರ್ಶನದಲ್ಲಿ ಶಿ ನುಡಿದರು.

ಈಗಲೇ ನಾವು ಅಧ್ಯಯನಕ್ಕೆ ಮುಂದಾಗದಿದ್ದರೆ ಮುಂದೊಂದು ದಿನ ಇನ್ನೊಂದು ಸಾಂಕ್ರಾಮಿಕ ಕಾಯಿಲೆಯು ಸ್ಫೋಟಗೊಳ್ಳುತ್ತದೆ ಎಂದು ಅವರು ಎಚ್ಚರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News