ಸ್ವರ್ಣಾ ನದಿಯಲ್ಲಿ ಅಕ್ರಮ ಮರಳು ಸಾಗಾಟ: ಎಸಿಬಿಗೆ ದೂರು

Update: 2020-05-26 16:21 GMT

ಉಡುಪಿ, ಮೇ 26: ಹಿರಿಯಡ್ಕ ಸಮೀಪದ ಸ್ವರ್ಣಾ ನದಿಯಿಂದ ಬಜೆ ಅಣೆಕಟ್ಟಿನ ಪ್ರದೇಶದವರೆಗೆ ಅಕ್ರಮವಾಗಿ ನಡೆಯುತ್ತಿರುವ ಮರಳುಗಾರಿಕೆ ವಿರುದ್ಧ ಸೂಕ್ತ ತನಿಖೆ ನಡೆಸುವಂತೆ ಆಗ್ರಹಿಸಿ ಉಡುಪಿ ನಗರಸಭಾ ಸದಸ್ಯ ರಮೇಶ್ ಕಾಂಚನ್ ಉಡುಪಿ ಜಿಲ್ಲಾಧಿಕಾರಿ, ಭ್ರಷ್ಟಾಚಾರ ನಿಗ್ರಹ ದಳ ಹಾಗೂ ಲೋಕಾಯುಕ್ತಕ್ಕೆ ಇಂದು ದೂರು ನೀಡಿದ್ದಾರೆ.

ಉಡುಪಿ ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ಸ್ವರ್ಣಾ ನದಿಯಿಂದ ಹೂಳೆತ್ತುವ ಬಗ್ಗೆ ಮಂಗಳೂರಿನ ಯೋಜಕ್ ಸಂಸ್ಥೆಗೆ ಕಾನೂನು ಬಾಹಿರವಾಗಿ ಗುತ್ತಿಗೆ ನೀಡಲಾಗಿದ್ದು, ಟೆಂಡರ್ ಷರತ್ತಿನಂತೆ ಹೂಳೆತ್ತುವ ಕಾಮಗಾರಿಯನ್ನು ನಿರ್ವಹಿಸುವ ಬಗ್ಗೆ ಎಡಿಸಿ ಅಧ್ಯಕ್ಷತೆಯಲ್ಲಿ ಸಮಿತಿ ಯನ್ನು ರಚಿಸಲಾಗಿದೆ. ಆದರೆ ಸಮಿತಿಯ ಅಧ್ಯಕ್ಷರು, ಸದಸ್ಯರು ಮತ್ತು ಇತರ ಅಧಿಕಾರಿ ಗಳು, ಕೆಲಜನಪ್ರತಿನಿಧಿಗಳು ಮತ್ತು ಪ್ರಭಾವಿ ವ್ಯಕ್ತಿಗಳೊಂದಿಗೆ ಶಾಮಿಲಾಗಿ ಬಜೆ ಅಣೆಕಟ್ಟಿನಿಂದ ಮಾಣೆಯವರೆಗೆ ಹಾಗೂ ಮಾಣೆಯಿಂದ ಶೀರೂರಿನ ವರೆಗೆ ಹೂಳೆತ್ತುವ ನೆಪದಲ್ಲಿ ಮರಳನ್ನು ಕಳ್ಳತನ ಮಾಡಿ ಅಕ್ರಮ ಸಾಗಾಟ ಮಾಡಿದ್ದಾರೆ ಎಂದು ದೂರಲಾಗಿದೆ.

ಲಾಕ್‌ಡೌನ್ ದುರ್ಲಾಭ ಪಡೆದು ಅಕ್ರಮ ಮರಳುಗಾರಿಕೆ ರಾಜಾರೋಷ ವಾಗಿ ನಡೆಯುತ್ತಿದೆ. ಸಮಿತಿಯ ಸದಸ್ಯರು ತಮ್ಮ ಕರ್ತವ್ಯ ನಿರ್ವಹಣೆ ಯಲ್ಲಿ ಸಂಪೂರ್ಣ ವಿಫಲರಾಗಿ ಅಕ್ರಮ ಮರಳುಗಾರಿಕೆ ವ್ಯಾಪಕವಾಗಿ ನಡೆಯುತ್ತಿದ್ದು, ಅವರುಗಳೇ ಭ್ರಷ್ಟಾಚಾರದಲ್ಲಿ ತೊಡಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಇದರ ವಿರುದ್ಧ ಜಿಲ್ಲಾಧಿಕಾರಿ ಅಥವಾ ಇತರ ಯಾವುದೇ ಅಧಿಕಾರಿ ಗಳು ಕಾನೂನು ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಲಾಗಿದೆ.

ಆದುದರಿಂದ ಈ ಅಕ್ರಮ ಮರಳುಗಾರಿಕೆಯ ಬಗ್ಗೆ ಸೂಕ್ತ ತನಿಖೆಯನ್ನು ನಡೆಸಿ, ಭ್ರಷ್ಟಾಚಾರದಲ್ಲಿ ತೊಡಗಿರುವ ಗುತ್ತಿಗೆದಾರರು ಮತ್ತು ಅವರೊಂದಿಗೆ ಶಾಮೀಲಾಗಿರುವ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಇತರ ಪ್ರಭಾವಿ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳ ಬೇಕೆಂದು ಮತ್ತು ಅಕ್ರಮವಾಗಿ ಸಂಗ್ರಹಿಸಿಟ್ಟ ಮರಳನ್ನು ಸರಕಾರಕ್ಕೆ ಮುಟ್ಟುಗೋಲು ಹಾಕಲು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಒತ್ತಾಯಿಸಲಾಗಿದೆ.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ, ಕಾಂಗ್ರೆಸ್ ನಾಯಕರಾದ ಮುರಳಿ ಶೆಟ್ಟಿ, ಹರೀಶ್ ಕಿಣಿ, ಸತೀಶ್ ಅಮೀನ್, ವಿಶ್ವಾಸ್ ಅಮೀನ್, ಪ್ರಶಾಂತ್ ಪೂಜಾರಿ, ಆರ್.ಕೆ.ರಮೇಶ್, ಯತೀಶ್ ಕರ್ಕೇರಾ, ಚರಣ್, ಸಂಜಯ್ ಆಚಾರ್ಯ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News