ಕೊರೋನ ಭೀತಿ: ಉಡುಪಿ ಜಿಲ್ಲೆಯ ಹಲವೆಡೆ ಸೆಲೂನ್ ಬಂದ್

Update: 2020-05-26 16:22 GMT

ಉಡುಪಿ, ಮೇ 26: ಕೊರೋನ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿರುವ ಭೀತಿಯಲ್ಲಿ ಉಡುಪಿ ಜಿಲ್ಲೆಯ ಹಲವು ಕಡೆಗಳಲ್ಲಿ ಸೆಲೂನ್‌ಗಳನ್ನು ನಾಳೆ ಯಿಂದ 10 ದಿನಗಳ ಕಾಲ ಬಂದ್ ಮಾಡಲು ಆಯಾ ತಾಲೂಕು ಹಾಗೂ ವಲಯಗಳ ಸವಿತಾ ಸವಾಜ ಸಮಿತಿ ನಿರ್ಧಾರ ತೆಗೆದುಕೊಂಡಿದೆ.

ಕುಂದಾಪುರ ತಾಲೂಕಿನ ಗಂಗೊಳ್ಳಿ, ಗುಜ್ಜಾಡಿ, ತ್ರಾಸಿ, ಮುಳ್ಳಿಕಟ್ಟೆ, ಬಂಟ್ವಾಡಿ, ಅಲೂರು ಹಾಗೂ ಹೆಮ್ಮಾಡಿಯಲ್ಲಿರುವ ಎಲ್ಲ ಸೆಲೂನ್ ಅಂಗಡಿ ಗಳನ್ನು ಮೇ27ರಿಂದ ಮುಂದಿನ 10 ದಿನಗಳವರೆಗೆ ಸ್ವಯಂ ಪ್ರೇರಿತವಾಗಿ ಬಂದ್ ಮಾಡುವ ನಿರ್ಧಾರವನ್ನು ಗಂಗೊಳ್ಳಿ ವಲಯದ ಸವಿತಾ ಸಮಾಜ ಸಮಿತಿ ಕೈಗೊಂಡಿದೆ.

ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿರುವುದ ರಿಂದ, ಹೊರ ರಾಜ್ಯ, ವಿದೇಶದಿಂದ ಬಂದವರು ಕೂಡ ತಮ್ಮ ಅಂಗಡಿಗಳಿಗೆ ಬರುವುದರಿಂದ ತಮ್ಮ ಸಂಘದ ಸದಸ್ಯರ ಆರೋಗ್ಯದ ದೃಷ್ಟಿಯಿಂದ ಸಂಘದ ಪದಾಧಿಕಾರಿಗಳೊಂದಿಗೆ ಚರ್ಚಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ದಿನೇಶ್ ಭಂಡಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಕೊರೋನ ಸೋಂಕಿನ ಭಯದಿಂದ ಬ್ರಹ್ಮಾವರ ತಾಲೂಕು ಸವಿತಾ ಸಮಾಜ ಜೂನ್ 2ರವರೆಗೆ ಎಲ್ಲಾ ಸೆಲೂನುಗಳು ಬಂದ್ ಮಾಡಲು ನಿರ್ಧರಿಸಿದೆ ಎಂದು ಬ್ರಹ್ಮಾವರ ತಾಲೂಕು ಸಂಘದ ಅಧ್ಯಕ್ಷ ಶಿವರಾಮ ಭಂಡಾರಿ ಹಂದಾಡಿ ತಿಳಿಸಿದ್ದಾರೆ. ಸರಕಾರದ ಆದೇಶದಂತೆ ಹಲವು ಮಾರ್ಪಾಡು ಮಾಡಿ ಕೆಲ ದಿನದಿಂದ ವೃತ್ತಿ ಮಾಡುತ್ತಿದ್ದ ನಮಗೆ ಇದೀಗ ಕೊರೋನ ಸೊಂಕಿತರು ಯಾರು ಎಂಬುದು ತಿಳಿಯುತ್ತಿಲ್ಲ. ನಮ್ಮ ಕುಟುಂಬದ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಂಡಿದ್ದೇವೆ. ಬ್ರಹ್ಮಾವರ ಭಾಗದ ಸುಮಾರು 250 ಸೆಲೂನುಗಳು ಜೂ.2ರವರೆಗೆ ತೆರೆಯುವುದಿಲ್ಲ ಎಂದವರು ತಿಳಿಸಿದ್ದಾರೆ.

ಅದೇ ರೀತಿ ಮುಂಜಾಗ್ರತೆಯ ಕ್ರಮವಾಗಿ ಕಾರ್ಕಳ, ಹೆಬ್ರಿ ತಾಲೂಕು ಮತ್ತು ಕೋಟ ವಲಯ, ಹಿರಿಯಡ್ಕ ವಲಯದ ಸವಿತಾ ಸಮಾಜದವರು ತಮ್ಮ ಕುಟುಂಬದ ಹಾಗೂ ಸಮಾಜದ ಹಿತದೃಷ್ಠಿಯಿಂದ ಸೆಲೂನುಗಳನ್ನು ಬಂದ್ ಮಾಡಲು ನಿರ್ಧರಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಜಿಲ್ಲೆಯ ಘಟಕ, ವಲಯ, ತಾಲೂಕು ಸಮಿತಿಗಳು ಕೂಡಲೇ ತುರ್ತು ನಿರ್ಧಾರ ತೆಗೆದು ಕೊಳ್ಳಬಹುದಾಗಿದೆ ಎಂದು ಜಿಲ್ಲಾ ಸವಿತಾ ಸಮಾಜ ತಿಳಿಸಿದೆ.

ಕಾಪು ತಾಲೂಕಿನಲ್ಲಿ ಸೆಲೂನ್ ಆರಂಭ

ಕಾಪು ತಾಲೂಕಿನಾದ್ಯಂತ ಮೇ 27ರಿಂದ ಜಿಲ್ಲಾಧಿಕಾರಿಗಳು ವಿಧಿಸಿದ 14 ಷರತ್ತುಗಳೊಂದಿಗೆ ಸಲೂನ್‌ಗಳು ಬೆಳಿಗ್ಗೆ 7:00ರಿಂದ ಸಂಜೆ 7 ಗಂಟೆ ತನಕ ತೆರೆದಿರುತ್ತದೆ.ಅಂಗಡಿಯಲ್ಲಿ ಬಳಸಿ ಎಸೆಯುವ ಬಟ್ಟೆಗಳನ್ನು ಮಾತ್ರ ಬಳಸಬೇಕು ಎಂದು ಸವಿತಾ ಸಮಾಜ ಪ್ರಧಾನ ಕಾರ್ಯದರ್ಶಿ ಸದಾಶಿವ ಬಂಗೇರ ಕುರ್ಕಾಲು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News