ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ: ಮೌಲ್ಯಮಾಪನ ಬಹಿಷ್ಕಾರಕ್ಕೆ ಮೌಲ್ಯಮಾಪಕರ ನಿರ್ಧಾರ

Update: 2020-05-26 16:37 GMT

ಮಂಗಳೂರು, ಮೇ 26: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಏಳು ವಿಷಯಗಳ ಉತ್ತರ ಪತ್ರಿಕೆಗಳ ಮೌಲ್ಯ ಮಾಪನ ಮೇ 27ರ ಬುಧವಾರದಿಂದ ಆರಂಭವಾಗಲಿದೆ. ಆದರೆ ಕೊರೋನ ಸೋಂಕು ನಿಯಂತ್ರಣಕ್ಕೆ ಬಾರದ ಕಾರಣ ಮುಂಜಾಗ್ರತಾ ಕ್ರಮವಾಗಿ ಮೌಲ್ಯಮಾಪನ ಮಾಡದಿರರಲು ದ.ಕ. ಜಿಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘ ನಿರ್ಧರಿಸಿದೆ.

ಈ ಬಗ್ಗೆ ಮಂಗಳವಾರ ನಗರದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಉಮೇಶ್ ಕರ್ಕೇರಾ ಭಯ ಮತ್ತು ಆತಂಕ ದಿಂದ ಮೌಲ್ಯಮಾಪನದಲ್ಲಿ ತೊಡಗಿಸಿಕೊಂಡರೆ ವಿದ್ಯಾರ್ಥಿಗಳಿಗೆ ನ್ಯಾಯ ದೊರಕಿಸಿ ಕೊಡಲು ಸಾಧ್ಯವಿಲ್ಲ. ಹಿರಿಯ ಹಾಗು ಅನುಭವಿ ಉಪನ್ಯಾಸಕರಲ್ಲಿ ಹೆಚ್ಚಿನವರು 50 ವರ್ಷ ಮೇಲ್ಪಟ್ಟವರಾಗಿದ್ದಾರೆ. ಇವರ ಅನುಪಸ್ಥಿತಿಯು ಸುಸೂತ್ರ ಮೌಲ್ಯಮಾಪನಕ್ಕೆ ತೊಡಕಾಗಲಿದೆ. ದ.ಕ., ಉಡುಪಿ, ಉತ್ತರ ಕನ್ನಡ ಜಿಲ್ಲೆಯನ್ನೊಳಗೊಂಡ ಮೌಲ್ಯಮಾಪಕರ ಸಂಖ್ಯೆಗೆ ಅನುಗುಣವಾಗಿ ಉತ್ತರ ಪತ್ರಿಕೆಗಳನ್ನು ವಿದ್ಯಾರ್ಥಿಗಳ ಹಿತಕ್ಕೆ ಧಕ್ಕೆ ಬಾರದಂತೆ ನಿಗದಿತ ಅವಧಿಯೊಳಗೆ ಮೌಲ್ಯಮಾಪನ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.

ಹೊರ ಜಿಲ್ಲೆಗಳಿಂದ ಹಾಗು ಗ್ರಾಮಾಂತರ ಭಾಗಗಳಿಂದ ಬರುವ ಮೌಲ್ಯಮಾಪಕರು ಹೊಟೇಲ್ ಊಟ, ವಸತಿಯನ್ನು ಅವಲಂಭಿಸುತ್ತಾರೆ. ಮಂಗಳೂರಿನಲ್ಲಿ ಇನ್ನೂ ಹೋಟೆಲ್‌ಗಳು, ವಸತಿಗೃಹಗಳು ಕಾರ್ಯನಿರ್ವಹಿಸದ ಕಾರಣ ಸಮಸ್ಯೆ ಎದುರಿಸಬೇಕಾಗಿದೆ. ಈ ಭಾಗದಲ್ಲಿ ಖಾಸಗಿ ಸಿಟಿ ಹಾಗು ಸರ್ವಿಸ್ ಬಸ್‌ಗಳ ಸಂಚಾರ ಆರಂಭವಾಗದಿರುವುದರಿಂದ ನಿಗದಿತ ಸಮಯಕ್ಕೆ ಮೌಲ್ಯಮಾಪಕರು ಮೌಲ್ಯಮಾಪನ ಕೇಂದ್ರಕ್ಕೆ ತಲುಪಲು ಸಾಧ್ಯವಿಲ್ಲ ಎಂದು ಉಮೇಶ್ ಕಕೇರಾ ಸಮಸ್ಯೆಗಳ ಬಗ್ಗೆ ವಿವರಿಸಿದರು.

ಮೌಲ್ಯಮಾಪನ ಕೇಂದ್ರದಲ್ಲಿ ಯಾರಾದರೂ ಸೋಂಕಿತರಾದರೆ ಇಡೀ ಕೇಂದ್ರವನ್ನೇ ಸೀಲ್‌ಡೌನ್ ಮಾಡಬೇಕಾಗುತ್ತದೆ. ಕೇಂದ್ರದ ಎಲ್ಲ ಸಿಬ್ಬಂದಿ ಹಾಗು ಅವರ ಕುಟುಂಬಸ್ಥರನ್ನು ಕ್ವಾರಂಟೈನ್‌ಗೆ ಒಳಪಡಿಸಬೇಕಾಗುತ್ತದೆ. ಮೌಲ್ಯಮಾಪನ ಕೇಂದ್ರದ ಬಳಿ ಯಾವುದೇ ವ್ಯಕ್ತಿಗೆ ಸೋಂಕು ತಗುಲಿದರೆ ಆ ವಲಯವನ್ನು ಕಂಟೇನ್ಮೆಂಟ್ ವಲಯ ಆಗಿ ಪರಿವರ್ತಿಸಿದಾಗ ಮೌಲ್ಯಮಾಪನ ಕಾರ್ಯ ಅಸಾಧ್ಯ ಎಂದ ಉಮೇಶ್ ಕರ್ಕೇರಾ ಮೌಲ್ಯಮಾಪನ ಮಾಡಲೇ ಬೇಕಾದ ಅನಿವಾರ್ಯ ಸಂದರ್ಭದಲ್ಲಿ ಪ್ರತಿಯೊಂದು ತಾಲೂಕುಗಳಲ್ಲಿ ವಿತರಣಾ ಕೇಂದ್ರಗಳನ್ನು ತೆರದು ಆಯಾ ಕಾಲೇಜುಗಳಲ್ಲಿ ಮೌಲ್ಯಮಾಪನ ಮಾಡಿ ವಿತರಣಾ ಕೇಂದ್ರಕ್ಕೆ ನೀಡುವ ವ್ಯವಸ್ಥೆಯನ್ನು ಮಾಡಿದರೆ ಮೌಲ್ಯಮಾಪನ ಮಾಡಲು ಸಿದ್ಧರಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಕಾರ್ಯದರ್ಶಿ ವಿನ್ಸೆಂಟ್ ಡಿಕೋಸ್ತ, ಉಪಾಧ್ಯಕ್ಷ ಶರ್ಮಿಳಾ ರಾವ್, ಶ್ರೀರಾಮಕೃಷ್ಣ ಪಪೂಕಾ ಪ್ರಾಚಾರ್ಯ ಕಿಶೋರ್ ಕುಮಾರ್ ರೈ ಶೇಣಿ, ದ.ಕ. ಜಿಲ್ಲಾ ಪಪೂಕಾ ಉಪನ್ಯಾಸಕರ ಸಂಘದ ಅಧ್ಯಕ್ಷ ಸೋಮಶೇಖರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News