ಮಂಗಳೂರು: ಶಬೀರ್, ಖುರೈಶ್ ಕುಟುಂಬದಿಂದ ವಲಸೆ ಕಾರ್ಮಿಕರಿಗೆ ಆಹಾರ ವಿತರಣೆ

Update: 2020-05-26 17:04 GMT

ಮಂಗಳೂರು, ಮೇ 26: ಕೊರೋನ-ಲಾಕ್‌ಡೌನ್‌ನಿಂದಾಗಿ ಅತಂತ್ರ ಸ್ಥಿತಿಗೊಳಗಾದ ಸಾವಿರಾರು ವಲಸೆ ಕಾರ್ಮಿಕರು ಕಳೆದ ಎರಡು ವಾರದಿಂದ ಸ್ವಗ್ರಾಮಕ್ಕೆ ತೆರಳಿದ್ದರೂ ಕೂಡ ಅನಿವಾರ್ಯ ಕಾರಣದಿಂದ ಊರಿಗೆ ಹೋಗಲಾಗದೆ ಅದೆಷ್ಟೋ ಮಂದಿ ಇನ್ನೂ ನಗರದಲ್ಲಿ ಬಾಕಿಯುಳಿದಿದ್ದಾರೆ. ಇದೀಗ ಲಾಕ್‌ಡೌನ್ ಸಡಿಲಿಕೆಯಾದರೂ ವಲಸೆ ಕಾರ್ಮಿಕರು ಒಂದಲ್ಲೊಂದು ಸಮಸ್ಯೆ ಎದುರಿಸುತ್ತಲೇ ಇದ್ದಾರೆ.

ಕೆಲವರಿಗೆ ಸರಿಯಾದ ಕೆಲಸವೂ ಇಲ್ಲ. ಹಾಗಾಗಿ ವಲಸೆ ಕಾರ್ಮಿಕರು ಹಸಿವು ನೀಗಿಸಲು ಪರದಾಡುವಂತಾಗಿದೆ. ಇದನ್ನು ಮನಗಂಡ ನಗರದ ಮಂಗಳಾದೇವಿಯ ಮಂಗಳಾ ಗೇಟ್‌ವೇ ಬಿಲ್ಡಿಂಗ್‌ನಲ್ಲಿ ವಾಸವಾಗಿರುವ ಮುಹಮ್ಮದ್ ಶಬೀರ್ ಬೋಳಾರ ಮತ್ತು ಸ್ಟೇಟ್‌ಬ್ಯಾಂಕ್ ನೆಲ್ಲಿಕಾಯಿ ರಸ್ತೆಯ ನಲಪಾಡ್ ಅಪಾರ್ಟ್‌ಮೆಂಟ್‌ನ ನಿವಾಸಿ ಅಹ್ಮದ್ ಖುರೈಶ್ ಮತ್ತವರ ಕುಟುಂಬದ ಸದಸ್ಯರು ಒಗ್ಗೂಡಿ ಕಳೆದ 12 ದಿನಗಳಿಂದ ನಗರದ ನೆಹರೂ ಮೈದಾನದ ಬಳಿ 100ಕ್ಕೂ ಅಧಿಕ ವಲಸೆ ಕಾರ್ಮಿಕರಿಗೆ ಆಹಾರ ಪೂರೈಸುತ್ತಿದ್ದಾರೆ.

ಮಧ್ಯಾಹ್ನದ ವೇಳೆ ವಲಸೆ ಕಾರ್ಮಿಕರು ಇಲ್ಲಿ ಜಮಾಯಿಸುತ್ತಿದ್ದು, ಇವರಿಗೆ ಈ ಕುಟುಂಬದ ಸದಸ್ಯರು ಸ್ವತಃ ಮನೆಯಲ್ಲೇ ತಯಾರಿಸಿದ ಅನ್ನವನ್ನು ದಾನ ಮಾಡುತ್ತಿದ್ದಾರೆ. ಮಂಗಳವಾರ ಇವರು ತುಪ್ಪದೂಟದ ಪೊಟ್ಟಣವನ್ನು ವಲಸೆ ಕಾರ್ಮಿಕರಿಗೆ ಹಂಚುತ್ತಿದ್ದರು. ಇದನ್ನು ಕಂಡ ‘ವಾರ್ತಾಭಾರತಿ’ಯ ಪ್ರತಿನಿಧಿಯು ಮಾಹಿತಿ ಕೋರಿದಾಗ ‘ನಾನು ಒಮ್ಮೆ ನಗರದಲ್ಲಿ ಸಂಚರಿಸುತ್ತಿದ್ದಾಗ ಕೆಲವು ಮಂದಿ ವಲಸೆ ಕಾರ್ಮಿಕರನ್ನು ಮಾತನಾಡಿಸಿದೆ. ಕೆಲಸವಿಲ್ಲದೆ ಊಟವೂ ಮಾಡಿಲ್ಲ ಎಂದು ಅವರು ಹೇಳಿಕೊಂಡರು. ತಕ್ಷಣ ನಾನು ನನ್ನ ಕೈಲಾದಷ್ಟು ಮಟ್ಟಿಗೆ ಅನ್ನದಾನ ಮಾಡುವ ಬಗ್ಗೆ ನಿರ್ಧರಿಸಿದೆ. ಹಾಗೇ ಮನೆಯವರ ಜೊತೆ ಚರ್ಚಿಸಿ ಮನೆಯಲ್ಲೇ ಊಟ ತಯಾರಿಸಿ ಸುಮಾರು 70 ಪ್ಯಾಕೆಟ್ ಮಾಡಿ ನಗರದ ನೆಹರೂ ಮೈದಾನದ ಬಳಿ ಕೊಂಡು ಹೋದೆ. ಆ ಬಳಿಕ 80, 100 ಹೀಗೆ ಸಂಖ್ಯೆ ಜಾಸ್ತಿಯಾಗುತ್ತಾ ಹೋಯಿತು. ಕಳೆದ 12 ದಿನದಿಂದ ಅನ್ನದಾನ ಮಾಡುತ್ತಿದ್ದೇವೆ. ಒಂದೇ ಮಾದರಿಯ ಊಟ ಮಾಡಿದರೆ ತಿನ್ನಲು ರುಚಿಯಾಗದು. ಹಾಗಾಗಿ ದಿನಕ್ಕೊಂದು ಬಗೆಯ ಊಟದ ವ್ಯವಸ್ಥೆ ಮಾಡುತ್ತಿದ್ದೇವೆ. ಇಂದು ಸುಮಾರು 120ಕ್ಕೂ ಅಧಿಕ ಮಂದಿಗೆ ತುಪ್ಪದೂಟ ಹಂಚಿದೆವು. ದಿನವೊಂದಕ್ಕೆ ಸರಾಸರಿ 3 ಸಾವಿರ ರೂ. ಖರ್ಚಾಗುತ್ತದೆ. ಇದು ಎಷ್ಟು ದಿನ ಮುಂದುವರಿಯುತ್ತದೆ ಎಂದು ಹೇಳಲಿಕ್ಕಾಗದು. ನಮ್ಮ ಕುಟುಂಬದ ಸದಸ್ಯರೇ ಹಣ ಹೊಂದಿಸಿಕೊಂಡು ಆಹಾರ ವಿತರಿಸುತ್ತಿದ್ದೇವೆ. ಅಹ್ಮದ್ ಖುರೈಶ್ ಸಹಿತ ಕುಟುಂಬದ ಎಲ್ಲಾ ಸದಸ್ಯರು ಎಲ್ಲಾ ವಿಧದಲ್ಲೂ ಕೈ ಜೋಡಿಸುತ್ತಾರೆ. ನಮಗೆ ಇದೊಂದು ಪುಣ್ಯ ಕಾರ್ಯ. ಹಾಗಾಗಿ ಆಹಾರ ಹಂಚುವಾಗ ಆಗುವ ಸಂತೃಪ್ತಿ ಬಣ್ಣಿಸಲು ಸಾಧ್ಯವಿಲ್ಲ’ ಎಂದು ಮುಹಮ್ಮದ್ ಶಬೀರ್ ಬೋಳಾರ ಹೇಳಿದ್ದಾರೆ.

ಒಟ್ಟಿನಲ್ಲಿ ಕುಟುಂಬವೊಂದು ಸದ್ದಿಲ್ಲದೆ ಯಾವುದೇ ಪ್ರಚಾರ ಬಯಸದೆ ವಲಸೆ ಕಾರ್ಮಿಕರ ಸೇವೆಯಲ್ಲಿ ನಿರತವಾಗಿರುವುದು ಗಮನಾರ್ಹವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News