ಪೈವಳಿಕೆ: ಕರುವನ್ನು ರಕ್ಷಿಸಲು ಬಾವಿಗಿಳಿದ ಸಹೋದರರಿಬ್ಬರು ಮೃತ್ಯು

Update: 2020-05-27 07:21 GMT

ಕಾಸರಗೋಡು, ಮೇ 27: ಬಾವಿಗೆ ಬಿದ್ದ ಕರುವನ್ನು ರಕ್ಷಿಸಲೆಂದು ಬಾವಿಗಿಳಿದ ಇಬ್ಬರು ಸಹೋದರರು ಉಸಿರುಗಟ್ಟಿ ಮೃತಪಟ್ಟ ದಾರುಣ ಘಟನೆ ಬುಧವಾರ ಬೆಳಗ್ಗೆ ಪೈವಳಿಕೆ ಸಮೀಪದ ಸುಬ್ಬಯ್ಯಕಟ್ಟೆ ಎಂಬಲ್ಲಿ ನಡೆದಿದೆ.

ಸುಬ್ಬಯ್ಯಕಟ್ಟೆ ನಿವಾಸಿಗಳಾದ ನಾರಾಯಣ(50) ಮತ್ತು ಸಹೋದರ ಶಂಕರ (40) ಮೃತಪಟ್ಟವರು.
ತಮ್ಮ ಮನೆಯ ಹಿತ್ತಿಲಿನ ಆವರಣ ಇಲ್ಲದ ಬಾವಿಗೆ ಬಿದ್ದಿದ್ದ ಕರುವನ್ನು ಮೇಲಕ್ಕೆತ್ತಲು ಯತ್ನಿಸುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ.

ಕರು ಮೇಲೆಕ್ಕೆತ್ತಲು ಶಂಕರ ಹಗ್ಗದ ಸಹಾಯದಿಂದ ಬಾವಿಗೆ ಇಳಿದಿದ್ದರೆನ್ನಲಾಗಿದೆ. ಈ ವೇಳೆ ಬಾವಿಯಲ್ಲಿ ಉಸಿರಾಟದ ಸಮಸ್ಯೆಗೆ ಸಿಲುಕಿದ ಶಂಕರ ಕುಸಿದು ಬಿದ್ದಿದ್ದಾರೆ. ಇದನ್ನು ಕಂಡ ನಾರಾಯಣ ಅವರನ್ನು ರಕ್ಷಿಸಲೆಂದು ತಕ್ಷಣ ಬಾವಿಗೆ ಇಳಿದಿದ್ದಾರೆ. ಆದರೆ ಅವರು ಉಸಿರಾಟದ ತೊಂದರೆಗೆ ಸಿಲುಕಿ ಬಾವಿಯಲ್ಲಿ ಕುಸಿದು ಬಿದ್ದರು. ಬೊಬ್ಬೆ ಕೇಳಿ ಧಾವಿಸಿ ಬಂದ ಸ್ಥಳೀಯರು ಇವರನ್ನು ರಕ್ಷಿಸಲು ಯತ್ನಿಸಿದರೂ ಸಾಧ್ಯವಾಗಲಿಲ್ಲ.
ಬಳಿಕ ಉಪ್ಪಳದಿಂದ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಮೇಲಕ್ಕೆತ್ತಿದರೂ ಅಷ್ಟರಲ್ಲಿ ಅವರಿಬ್ಬರೂ ಮೃತಪಟ್ಟಿದ್ದರು.
ಬಾವಿಗೆ ಬಿದ್ದಿದ್ದ ಕರು ಬದುಕಿದ್ದು, ಅದನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಸುರಕ್ಷಿತವಾಗಿ ಮೇಲಕ್ಕೆತ್ತಿದ್ದಾರೆ.
ಮೃತ ಇಬ್ಬರು ಸಹೋದರರು ಕೂಲಿ ಕಾರ್ಮಿಕರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News