ಬಸ್ಸಿನಲ್ಲಿ ಪಾನ್ ಉತ್ಪನ್ನಗಳ ಸಾಗಾಟ: ಇಬ್ಬರು ಆರೋಪಿಗಳ ಸೆರೆ
ಕಾಸರಗೋಡು, ಮೇ 27: ಟೂರಿಸ್ಟ್ ಬಸ್ಸಿನಲ್ಲಿ ಸಾಗಾಟ ಮಾಡುತ್ತಿದ್ದ ಭಾರೀ ಮೌಲ್ಯದ ಪಾನ್ ಉತ್ಪನ್ನವನ್ನು ಕಾಸರಗೋಡು ನಗರ ಠಾಣಾ ಪೊಲೀಸರು ಮಂಗಳವಾರ ರಾತ್ರಿ ಹೊಸ ಬಸ್ಸು ನಿಲ್ದಾಣ ಪರಿಸರದಲ್ಲಿ ವಶಪಡಿಸಿಕೊಂಡಿದ್ದು, ಇಬ್ಬರನ್ನು ಬಂಧಿಸಿದ್ದಾರೆ.
ನೆಲ್ಲಿಕಟ್ಟೆ ಸಾಲೆತ್ತಡ್ಕದ ಮುಹಮ್ಮದ್ ರಿಯಾಝ್(28) ಮತ್ತು ಪೊವ್ವಲ್‌ನ ಮುಹಮ್ಮದ್ ನೌಶಾದ್(30) ಬಂಧಿತ ಆರೋಪಿಗಳು.
ನಗರ ಠಾಣಾ ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯಂತೆ ಕಾರ್ಯಾಚರಣೆ ಆರೋಪಿಗಳಿಂದ 7,704 ಪ್ಯಾಕೆಟ್ ಪಾನ್ ಉತ್ಪನ್ನಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದನ್ನು ಆರೋಪಿಗಳು ಕಾಸರಗೋಡಿನಿಂದ ಎರ್ನಾಕುಲಂಗೆ ಸಾಗಿಸಲೆತ್ನಿಸಲು ಯತ್ನಿಸುತ್ತಿದ್ದರೆನ್ನಲಾಗಿದೆ.
ಬಸ್ಸಿನೊಳಗಿನ ನಾಲ್ಕು ಕಾರ್ಡ್ ಬೋರ್ಡ್‌ಗಳನ್ನು ತೆಗೆದು ಅದರೊಳಗೆ ಪಾನ್ ಉತ್ಪನ್ನಗಳನ್ನು ಬಚ್ಚಿಡಲಾಗಿತ್ತು. ಮಾದಕ ವಸ್ತು ಬೆರೆಸಿದ ಈ ಪಾನ್ ಉತ್ಪನ್ನಗಳನ್ನು ಕರ್ನಾಟಕದಿಂದ ಪ್ರತೀ ಪ್ಯಾಕೇಟ್‌ಗೆ ತಲಾ 150 ರೂ.ನಂತೆ ಖರೀದಿಸಿ ಕೇರಳದಲ್ಲಿ ಎರಡು ಪಟ್ಟು ಅಧಿಕ ಬೆಲೆಗೆ ಮಾರಾಟ ಮಾಡಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.