ಕೇರಳದಲ್ಲಿ ಕೋಳಿ ಮೊಟ್ಟೆಯ ಒಳಗಡೆ ಹಳದಿ ಬದಲು ಹಸಿರು ಬಣ್ಣ!

Update: 2020-05-27 11:48 GMT

ತಿರುವನಂತಪುರಂ: ಕೇರಳದ ಮಲಪ್ಪುರಂನಲ್ಲಿ ಕೋಳಿ ಸಾಕಣೆ ಮಾಡುವ ಎ.ಕೆ. ಶಿಹಾಬುದ್ದೀನ್ ಅವರ ಫಾರ್ಮ್ ನಲ್ಲಿದ್ದ ಕೋಳಿಗಳ ಮೊಟ್ಟೆಯ ಒಳಗಿನ ಲೋಳೆ ಹಳದಿ ಬಣ್ಣದ್ದಾಗಿರದೆ, ಹಸಿರು ಬಣ್ಣದ್ದಾಗಿದ್ದು ಇತ್ತೀಚೆಗೆ ಭಾರೀ ಸುದ್ದಿಯಾಗಿತ್ತು. ಇದೀಗ ಕೇರಳ ಪಶುವೈದ್ಯಕೀಯ ಮತ್ತು ಪ್ರಾಣಿ ವಿಜ್ಞಾನಗಳ ವಿವಿಯ ತಜ್ಞರು ಇದರ ಹಿಂದಿನ ರಹಸ್ಯ ಪತ್ತೆ ಹಚ್ಚಿದ್ದಾರೆ.

ಕಳೆದ ಒಂಬತ್ತು ತಿಂಗಳುಗಳಿಂದ ಶಿಹಾಬುದ್ದೀನ್ ಅವರ ಫಾರ್ಮ್ ‍ನಲ್ಲಿನ ಕೋಳಿಗಳ ಮೊಟ್ಟೆಗಳ ಲೋಳೆಯ ಬಣ್ಣ ಹಸಿರು ಆಗಿದ್ದರೂ ಇತ್ತೀಚೆಗೆ ಅವುಗಳ ಚಿತ್ರವನ್ನು ಫೇಸ್ ಬುಕ್ ನಲ್ಲಿ ಶೇರ್ ಮಾಡಿದ ನಂತರ ಇದು ಭಾರೀ ವೈರಲ್ ಆಗಿತ್ತು.

ವಿಶ್ವವಿದ್ಯಾಲಯದ ತಜ್ಞರು ಫಾರ್ಮ್‍ಗೆ ಭೇಟಿ ನೀಡಿ ಒಂದು ಕೋಳಿ ಹಾಗೂ ಕೆಲ ಮೊಟ್ಟೆಗಳನ್ನು ಕೊಂಡು ಹೋಗಿದ್ದರು. ಕೋಳಿಗಳಿಗೆ ನೀಡಲಾಗಿದ್ದ ಆಹಾರ ಅಥವಾ ಆ ಕೋಳಿಗಳು ತಿಂದಿರಬಹುದಾದ ಯಾವುದಾದರೂ ಗಿಡದಿಂದಾಗಿ ಅವುಗಳ ಬಣ್ಣ ಹಸಿರು ಆಗಿರಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ.

ವಿಶ್ವವಿದ್ಯಾಲಯದಲ್ಲಿ ನೀಡಲಾದ ಆಹಾರಗಳನ್ನು ಕೋಳಿ ಸೇವಿಸಲು ಆರಂಭಿಸಿದ ನಂತರ ಅದರ ಮೊಟ್ಟೆಗಳ ಒಳಗಿನ ಲೋಳೆಯ ಬಣ್ಣ ಹಳದಿಗೆ ತಿರುಗಿತ್ತು ಎಂದು ವಿವಿಯ ಸಹಾಯಕ ಪ್ರೊಫೆಸರ್ ಎಸ್ ಶಂಕರಲಿಂಗಂ ಹೇಳಿದ್ದಾರೆ. ಕೊನೆಗೆ ವಿವಿ ಪೂರೈಸಿದ ಆಹಾರವನ್ನಷ್ಟೇ ಕೋಳಿಗಳಿಗೆ ನೀಡುವಂತೆ ಸಂಸ್ಥೆ ಶಿಹಾಬುದ್ದೀನ್‍ಗೆ ತಿಳಿಸಿದ್ದು ನಂತರ ಮೊಟ್ಟೆಗಳ ಲೋಳೆ ಹಳದಿ ಬಣ್ಣ ಪಡೆದಿದ್ದವು.

ಆದರೆ ಶಿಹಾಬುದ್ದೀನ್ ಮಾತ್ರ ತಾನು ತನ್ನ ಕೋಳಿಗಳಿಗೆ ವಿಶೇಷ ಆಹಾರವೇನೂ ನೀಡುತ್ತಿರಲಿಲ್ಲ ಎಂದು ಹೇಳಿದ್ದಾರೆ. ಕೇರಳದಲ್ಲಿ ಮನೆಯಂಗಳದಲ್ಲಿ ಬೆಳೆಯುವ ಕೆಲವೊಂದು ಔಷಧೀಯ ಸಸ್ಯಗಳಾದ ಕುರುಂತೊಟ್ಟಿಯಿಂದಾಗಿ ಮೊಟ್ಟೆಯ ಲೋಳೆಯ ಬಣ್ಣ ಹಸಿರು ಆಗಿರಬಹುದು ಎಂದು ಶಂಕರಲಿಂಗಂ ಹೇಳುತ್ತಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News