ಕೊರೋನ ಪರೀಕ್ಷಾ ವರದಿಯಲ್ಲಿ ತಾಂತ್ರಿಕ ಗೊಂದಲ: ಎರಡು ದಿನಗಳ ಬಳಿಕ ಉಡುಪಿ ಜಿಪಂ ಸಿಬ್ಬಂದಿ ಆಸ್ಪತ್ರೆಗೆ ದಾಖಲು

Update: 2020-05-27 14:23 GMT

ಕಾಪು, ಮೇ 27: ಕೊರೋನ ಪರೀಕ್ಷಾ ವರದಿಯಲ್ಲಿನ ತಾಂತ್ರಿಕ ಗೊಂದಲದಿಂದ ಸೋಂಕಿತ ಉಡುಪಿ ಜಿಪಂ ಸ್ವಚ್ಛತಾ ಅಭಿಯಾನ ವಿಭಾಗದ ಸಿಬ್ಬಂದಿ, ಕಟಪಾಡಿ ಸರಕಾರಿಗುಡ್ಡೆಯ 30ರ ಹರೆಯದ ಯುವಕನನ್ನು ವರದಿ ಬಂದ ಎರಡು ದಿನಗಳ ಬಳಿಕ ಇಂದು ಮಧ್ಯಾಹ್ನ ವೇಳೆಗೆ ಉದ್ಯಾವರ ಎಸ್‌ಡಿಎಂ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇವರಲ್ಲಿ ಮೇ 17ರಂದು ರೋಗದ ಲಕ್ಷ್ಮಣಗಳು ಕಂಡುಬಂದಿದ್ದು, ಮೇ 19ಕ್ಕೆ ಇವರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗಾಗಿ ಮಂಗಳೂರು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಮೇ 24ರಂದು ಇವರ ವರದಿ ಪಾಸಿಟಿವ್ ಎಂಬುದಾಗಿ ಬಂದಿತ್ತು. ಆದರೆ ಫಲಿತಾಂಶ ಬರುವ ಸಮಯದಲ್ಲಿ ಇವರಲ್ಲಿ ಯಾವುದೇ ರೋಗದ ಲಕ್ಷ್ಮಣಗಳು ಇರಲಿಲ್ಲ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಅವರನ್ನು ಉಡುಪಿಯ ಜಿಲ್ಲಾಸ್ಪತ್ರೆಯಲ್ಲಿ ಟ್ರೂನಟ್ ಯಂತ್ರದ ಮೂಲಕ ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸಲಾಯಿತು. ಅದರಲ್ಲಿ ನೆಗೆಟಿವ್ ಎಂಬುದಾಗಿ ವರದಿ ಬಂದಿತ್ತು. ಈ ತಾಂತ್ರಿಕ ಗೊಂದಲ ಮತ್ತು ಆ ವ್ಯಕ್ತಿಯನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಿದರೆ ಸೋಂಕು ತಗಲಬಹುದು ಎಂಬ ಕಾರಣಕ್ಕಾಗಿ ಅವರನ್ನು ಮನೆಯಲ್ಲಿಯೇ ಉಳಿಸಿಕೊಳ್ಳಲಾಗಿತ್ತು.

ಮೇ 27ರಂದು ಮತ್ತೊಮ್ಮೆ ಅವರ ಗಂಟಲು ದ್ರವದ ಪರೀಕ್ಷೆಯನ್ನು ಮಣಿಪಾಲ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ವರದಿಯನ್ನು ನಿರೀಕ್ಷಿಸ ಲಾಗುತ್ತಿದೆ. ವರದಿಯಲ್ಲಿ ಪಾಸಿಟಿವ್ ಬಂದರೆ ಕೋವಿಡ್ ಆಸ್ಪತ್ರೆಗೆ ದಾಖಲಿಸ ಲಾಗುವುದು ಮತ್ತು ನೆಗೆಟಿವ್ ಬಂದರೆ ಮನೆಗೆ ಕಳುಹಿಸಲಾಗು ವುದು ಎಂದು ಕೋವಿಡ್-19 ನೋಡೆಲ್ ಅಧಿಕಾರಿ ಡಾ.ಪ್ರಶಾಂತ್ ಭಟ್ ತಿಳಿಸಿದ್ದಾರೆ.

ಈ ಮಧ್ಯೆ ಈ ವ್ಯಕ್ತಿ ಈಗಾಗಲೇ ಸೋಂಕಿತ ಎಂಬುದಾಗಿ ಗುರುತಿಸಿ ಕೊಂಡಿರುವುದರಿಂದ ಸ್ಥಳೀಯರು ಆತಂಕ ಪಡಬಾರದು ಎಂಬ ಕಾರಣಕ್ಕೆ ಇಂದು ಮಧ್ಯಾಹ್ನ ವೇಳೆ ಅವರನ್ನು ಕೋವಿಡ್ ಆಸ್ಪತ್ರೆಯ ಬದಲು ಐಸೋಲೇಷನ್ ವಾರ್ಡ್‌ಗೆ ದಾಖಲಿಸಲಾಗಿದೆ. ಅಲ್ಲದೆ ಜಿಲ್ಲಾಡಳಿತದ ಆದೇಶ ದಂತೆ ಸರಕಾರಿಗುಡ್ಡೆಯಲ್ಲಿ ಕಂಟೈನ್‌ಮೆಂಟ್ ವಲಯದಲ್ಲಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಈ ಸಂಬಂಧ ಕಾಪು ತಹಶೀಲ್ದಾರ್ ಮುಹಮ್ಮದ್ ಇಸಾಕ್ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

ಡಿಸ್ಚಾರ್ಜ್ ಬಗ್ಗೆ ಹೊಸ ಮಾರ್ಗಸೂಚಿ

ಮೇ 26ರಂದು ಸರಕಾರದಿಂದ ಬಂದ ಹೊಸ ಮಾರ್ಗಸೂಚಿ ಪ್ರಕಾರ, ಯಾವುದೇ ರೋಗದ ಲಕ್ಷ್ಮಣಗಳಿಲ್ಲದೆ ಪಾಸಿಟಿವ್ ಬಂದ ವ್ಯಕ್ತಿಯನ್ನು ಏಳನೇ ದಿನಕ್ಕೆ ಮತ್ತೆ ಪರೀಕ್ಷಿಸಿದಾಗ ನೆಗೆಟಿವ್ ಬಂದರೆ, ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಬಹುದಾಗಿದೆ. ಅದೇ ರೀತಿ ರೋಗದ ಲಕ್ಷ್ಮಣಗಳೊಂದಿಗೆ ಪಾಸಿಟಿವ್ ಬಂದ ವ್ಯಕ್ತಿಯಲ್ಲಿ ಏಳನೇ ದಿನಕ್ಕೆ ಯಾವುದೇ ರೋಗದ ಲಕ್ಷ್ಮಣ ಗಳು ಇಲ್ಲದಿದ್ದರೆ, 10ನೆ ದಿನಕ್ಕೆ ಪರೀಕ್ಷಿಸಿ, ನೆಗೆಟಿವ್ ಬಂದರೆ ಅಂತವರನ್ನು ಸಹ ಬಿಡುಗಡೆ ಮಾಡಬಹುದಾಗಿದೆ. ಒಂದು ವೇಳೆ ಸರಕಾರಿಗುಡ್ಡೆ ವ್ಯಕ್ತಿಯ ಈಗ ಕಳುಹಿಸಿರುವ ವರದಿ ನೆಗೆಟಿವ್ ಬಂದರೆ, ಮನೆಗೆ ಕಳುಹಿಸಲು ಈ ಹೊಸ ಮಾರ್ಗಸೂಚಿಯಂತೆ ಅವಕಾಶ ಇದೆ ಎಂದು ಕೋವಿಡ್-19 ನೋಡೆಲ್ ಅಧಿಕಾರಿ ಡಾ.ಪ್ರಶಾಂತ್ ಭಟ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News