ಉಡುಪಿ: ಇಂದು 9 ಮಂದಿಯಲ್ಲಿ ಕೊರೋನ ಸೋಂಕು ಪತ್ತೆ

Update: 2020-05-27 15:47 GMT

ಉಡುಪಿ, ಮೇ 27: ಜಿಲ್ಲೆಯಲ್ಲಿ ಬುಧವಾರ ಇನ್ನೂ 9 ಮಂದಿಯಲ್ಲಿ ಕೊರೋನ ಸೋಂಕು ಇರುವುದು ದೃಢಪಟ್ಟಿದೆ. ಉಡುಪಿಯಲ್ಲಿ ಇಂದು ಪಾಸಿಟಿವ್ ಬಂದವರೆಲ್ಲರೂ ಮಹಾರಾಷ್ಟ್ರ ರಾಜ್ಯದಿಂದ ಬಂದವರಾಗಿದ್ದಾರೆ. ಇವರಲ್ಲಿ 6 ಮಂದಿ ಪುರುಷರು, ಇಬ್ಬರು ಯುವತಿಯರು ಹಾಗೂ ಓರ್ವ ಬಾಲಕ ಸೇರಿದ್ದಾರೆ ಎಂದು ವಿವರಗಳನ್ನು ನೀಡಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸುಧೀರ್‌ ಚಂದ್ರ ಸೂಡ ತಿಳಿಸಿದ್ದಾರೆ.

ಕುಂದಾಪುರದಲ್ಲಿ ಕ್ವಾರಂಟೈನ್‌ನಲ್ಲಿರುವ ಐವರು, ಕಾರ್ಕಳ ಹಾಗೂ ಉಡುಪಿ ಯಲ್ಲಿ ಕ್ವಾರಂಟೈನ್‌ನಲ್ಲಿರುವ ತಲಾ ಇಬ್ಬರಲ್ಲಿ ಇಂದು ಕೊರೋನ ಪಾಸಿಟಿವ ಕಂಡುಬಂದಿದೆ. 41ರ ಹರೆಯದ ಪುರುಷ (ಪಿ.2389), 31ರ ಹರೆಯದ ಯುವತಿ (2890), 27ರ ಯುವಕ (2891), 30ರ ಯುವಕ (2892), 32ರ ಯುವಕ (2893), 17ರ ಯುವತಿ (2894), 34ರ ಯುವಕ (2895), 25ರ ಯುವಕ (2896) ಹಾಗೂ 9 ವರ್ಷದ ಬಾಲಕ (2401) ಇಂದು ಪಾಸಿಟಿವ್ ಬಂದವರಲ್ಲಿ ಸೇರಿದ್ದಾರೆ ಎಂದು ಡಾ.ಸೂಡ ತಿಳಿಸಿದರು.

ಈ ಮೂಲಕ ಜಿಲ್ಲೆಯಲ್ಲಿ ಕೊರೋನ ಪಾಸಿಟಿವ್ ಕಂಡುಬಂದವರ ಸಂಖ್ಯೆ 120ಕ್ಕೇರಿದೆ. ಇವರಲ್ಲಿ 114 ಮಂದಿ ಈಗಲೂ ಸೋಂಕಿಗೆ ಸಕ್ರೀಯ ರಾಗಿದ್ದು, ನಗರದ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ. ಒಬ್ಬರು ಮೃತ ಪಟ್ಟಿದ್ದು, ಮೊದಲ ಮೂರು ಸೋಂಕು ಪತ್ತೆಯಾದವರು ಚಿಕಿತ್ಸೆಯಿಂದ ಚೇತರಿಸಿ ಕೊಂಡಿದ್ದಾರೆ.

ಗರ್ಭಿಣಿಯ ಮರು ಪರೀಕ್ಷೆ ನೆಗಟಿವ್

ಈಗಾಗಲೇ ಪಾಸಿಟಿವ್ ಪಟ್ಟಿಯಲ್ಲಿ ಕಾಣಿಸಿಕೊಂಡ ಕಾರ್ಕಳದ 22ರ ಹರೆಯದ ತುಂಬು ಗರ್ಭಿಣಿಯ ಮರು ಪರೀಕ್ಷಾ ವರದಿ ನೆಗಟಿವ್ ಆಗಿ ಬಂದಿದೆ ಎಂದು  ಡಾ. ಸೂಡ ವಿವರಿಸಿದರು.

ಗರ್ಭಿಣಿ ಮಹಿಳೆಯ ಸ್ಯಾಂಪಲ್ ಮೇ 24ರಂದು ಪಾಸಿಟಿವ್ ಆಗಿ ಬಂದಿತ್ತು. ತುಂಬು ಗರ್ಭಿಣಿಯಾದ ಕಾರಣ ಮರು ಪರೀಕ್ಷೆ ನಡೆಸಿದಾಗ ಅದು ನೆಗೆಟಿವ್ ಆಗಿತ್ತು. ಮತ್ತೊಂದು ಪರೀಕ್ಷೆಯನ್ನು ಬೆಂಗಳೂರಿನಲ್ಲಿ ನಡೆಸಿದಾಗ ಅದು ಇಂದು ನೆಗೆಟಿವ್ ಆಗಿ ಬಂದಿದೆ. ಹೀಗಾಗಿ ಅವರನ್ನು ಸೋಂಕಿಗೆ ನೆಗೆಟಿವ್ ಎಂದೇ ಪರಿಗಣಿಸಲಾಗುವುದು. ಆಕೆ ತುಂಬು ಗರ್ಭಿಣಿಯಾಗಿ ರುವುದರಿಂದ ಕಾರ್ಕಳದ ಮನೆಯಲ್ಲಿ ತಾಯಿಯೊಂದಿಗೆ ವೈದ್ಯರ ನಿಗಾದಲ್ಲಿ ಇರುತ್ತಾರೆ ಎಂದು ಡಾ.ಸೂಡ ತಿಳಿಸಿದರು.

ಇನ್ನು 30ರ ಹರೆಯದ ಜಿಪಂ ಸಿಬ್ಬಂದಿಯ ಸ್ಯಾಂಪಲ್ ಸಹ ಮೇ 25ರಂದು ಪಾಸಿಟಿವ್ ಆಗಿ ಬಂದಿತ್ತು. ಆದರೆ ಅದರಲ್ಲಿ ತಾಂತ್ರಿಕ ಗೊಂದಲ ಕಾಣಿಸಿಕೊಂಡಿ ದ್ದರಿಂದ ಇಂದು ಮಾದರಿಯನ್ನು ಮರುಪರೀಕ್ಷೆಗೆ ಮಣಿಪಾಲಕ್ಕೆ ಕಳುಹಿಸಲಾಗಿದೆ. ಈ ನಡುವೆ ಈವರೆಗೆ ಮನೆಯಲ್ಲೇ ಕ್ವಾರಂಟೈನ್‌ನಲ್ಲಿದ್ದ ಕಟಪಾಡಿ ಕುರ್ಕಾಲಿನ 30ರ ಹರೆಯದ ಈ ಯುವಕನನ್ನು ಇಂದು ಉದ್ಯಾವರದ ಎಸ್‌ಡಿಎಂ ಕಾಲೇಜಿನಲ್ಲಿ ಐಸೋಲೇಶನ್ ವಾರ್ಡಿಗೆ ಸೇರಿಸಲಾಗಿದೆ. ಅವರಿಂದ ಪುನಹ ಪಡೆದ ಗಂಟಲುದ್ರವ ಮಾದರಿಯ ಮರುಪರೀಕ್ಷೆ ಫಲಿತಾಂಶ ನೆಗೆಟಿವ್ ಬಂದರೆ ಮನೆಗೂ, ಪಾಸಿಟಿವ್ ಬಂದರೆ ಉಡುಪಿಯ ಡಾ.ಟಿಎಂಎ ಪೈ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುವುದು ಎಂದು ಡಾ.ಸೂಡ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News