ಮಿಡತೆ ದಾಳಿ ವಿರುದ್ಧ ಭಾರತ ಆ್ಯಕ್ಷನ್‌ಪ್ಲಾನ್

Update: 2020-05-27 15:49 GMT

ಹೊಸದಿಲ್ಲಿ, ಮೇ 27: ಪಾಕಿಸ್ತಾನ ಹಾೂ ಪೂರ್ವ ಆಫ್ರಿಕದಲ್ಲಿ ಅಪಾರ ಬೆಳೆಹಾನಿ ಮಾಡಿ, ಈಗ ಉತ್ತರಭಾರತದ ಹಲವೆಡೆ ದಾಳಿಯಿಟ್ಟಿರುವ ಮಿಡತೆಗಳ ಹಿಂಡನ್ನು ನಾಶಪಡಿಸಲು ಭಾರತವು ಕೀಟನಾಶಕ ಸಿಂಪಡಣೆ ಅಭಿಯಾನವನ್ನು ಆರಂಭಿಸಿದೆ.

ಮಿಡತೆಗಳನ್ನು ಕೊಲ್ಲುವ ಕಾರ್ಯಾಚರಣೆಗೆ ಸುಮಾರು 700 ಟ್ರ್ಯಾಕ್ಟರ್‌ಗಳು, 75 ಅಗ್ನಿಶಾಮಕದಳಗಳು ಹಾಗೂ ಇತರ 50 ವಾಹನಗಳನ್ನು ಬಳಸಿಕೊಳ್ಳಲಾಗಿದೆ ಎಂದು ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ಮಹಾನಿರ್ದೇಶಕ ತ್ರಿಲೋಚನ ಮಹಾಪಾತ್ರ ಹೇಳುತ್ತಾರೆ.

ಈ ಹಂತದಲ್ಲಿ ಮಿಡತೆಗಳನ್ನು ನಿಯಂತ್ರಿಸಲು ಸಾಧ್ಯವಿದೆ. ಆದರೆ ಒಂದು ವೇಳೆ ಅವುಗಳ ಹಾವಳಿ ಹೀಗೆಯೇ ಮುಂದುವರಿದಲ್ಲಿ ಮುಂಗಾರು ಬಿತ್ತನೆಯ ಬೆಳೆಗಳಿಗೆ ಸಮಸ್ಯೆಯಾಗಲಿದೆ ಎಂದವರು ಹೇಳಿದ್ದಾರೆ.

ಮುಖ್ಯವಾಗಿ ರಾಜಸ್ಥಾನ, ಪಂಜಾಬ್ ಸೇರಿದಂತೆ ದೇಶದ ಆರು ರಾಜ್ಯಗಳಲ್ಲಿ 1.04 ಲಕ್ಷ ಎಕರೆ ಪ್ರದೇಶದಲ್ಲಿ ಬೆಳೆಯಲಾದ ಹತ್ತಿ, ಬೇಸಿಗೆಯ ದ್ವಿದಳ ಧಾನ್ಯಗಳು ಹಾಗೂ ತರಕಾರಿ ಬೆಳೆಗಳು ಮಿಡತೆ ದಾಳಿಯಿಂದ ಬಾಧಿತವಾಗಿವೆ ಎಂದವರು ಹೇಳಿದ್ದಾರೆ.

ಮುಂಗಾರಿನಲ್ಲಿ ರೈತರು ಸುಮಾರು 106 ದಶಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಭತ್ತ, ದ್ವಿದಳಧಾನ್ಯ, ಕಬ್ಬು, ಸೋಯಾಬಿನ್ ಮತ್ತಿತರ ಬೆಳೆಗಳನ್ನು ಬೆಳೆಯುತ್ತಾರೆ. ಆಗ ಕೂಡಾ ಮಿಡತೆ ದಾಳಿ ಮುಂದುವರಿದಲ್ಲಿ ಭಾರೀ ಪ್ರಮಾಣ ಕೃಷಿ ನಾಶದ ಅಪಾಯವಿದೆಯೆಂದು ಎಂದು ತ್ರಿಲೋಚನ್ ಆತಂಕ ವ್ಯಕ್ತಪಡಿಸಿದ್ದಾರೆ.

ಪಾಕಿಸ್ತಾನದ ಮಾರ್ಗವಾಗಿ ಹಾರಿಬಂದಿರುವ ಮಿಡತೆಗಳ ದಂಡು ಎಪ್ರಿಲ್ 30ರಂದು ರಾಜಸ್ಥಾನ ಹಾಗೂ ಪಂಜಾಬ್‌ಗಳಲ್ಲಿ ಪತ್ತೆಯಾಗಿತ್ತು.

ಈ ಮಿಡತೆಗಳು ಮೇ 11ರ ವೇಳೆಗೆ ರಾಜಸ್ಥಾನ ಹಾಗೂ ಪಂಜಾಬ್‌ನ 14,299 ಹೆಕ್ಟೇರ್ ಪ್ರದೇಶದಲ್ಲಿ ವ್ಯಾಪಿಸಿದ್ದವು ಎಂದು ಕೇಂದ್ರ ಕೃಷಿ ಸಚಿವಾಲಯ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News