ಉಡುಪಿ : ಏರುತ್ತಿದೆ ಕೊರೋನ ಪರೀಕ್ಷೆಗೆ ಬಾಕಿ ಉಳಿದ ಸ್ಯಾಂಪಲ್‌ಗಳ ಸಂಖ್ಯೆ

Update: 2020-05-27 15:57 GMT

ಉಡುಪಿ, ಮೇ 27: ಕೊರೋನ ಸೋಂಕನ್ನು ವ್ಯಕ್ತಿಯ ಗಂಟಲು ದ್ರವದ ಮೂಲಕ ಪತ್ತೆ ಹಚ್ಚುವ ಸುಸಜ್ಜಿತ, ಅತ್ಯಾಧುನಿಕ ಪ್ರಯೋಗಾಲಯ ಮಣಿಪಾಲದ ಕೆಎಂಸಿಯಲ್ಲಿ ಪ್ರಾರಂಭಗೊಂಡಿದ್ದರೂ, ಉಡುಪಿ ಜಿಲ್ಲೆಯಿಂದ ಕಳುಹಿಸಲಾಗುತ್ತಿರುವ ಶಂಕಿತ ವ್ಯಕ್ತಿಗಳ ಸ್ಯಾಂಪಲ್ ಪರೀಕ್ಷೆ ತೀರಾ ನಿಧಾನಗೊಳ್ಳುತ್ತಿದೆ. ಸಾವಿರಾರು ಸಂಖ್ಯೆಯಲ್ಲಿ ಹೊರದೇಶ ಹಾಗೂ ಹೊರರಾಜ್ಯ ಗಳಿಂದ ಜನರು ಜಿಲ್ಲೆಗೆ ಮರಳಿ ಕ್ವಾರಂಟೈನ್‌ನಲ್ಲಿರುವುದು, ಅಲ್ಲದೇ ಈಗಾಗಲೇ ಪಾಸಿಟಿವ್ ಫಲಿತಾಂಶ ಪಡೆದವರ ಸಂಪರ್ಕಕ್ಕೆ ಬಂದವರ ಮಾದರಿ ಪರೀಕ್ಷೆ ಸಹ ತುರ್ತಾಗಿ ನಡೆಯಬೇಕಿರುವುದು ವರದಿ ಬಾಕಿ 7000ವನ್ನು ದಾಟಲು ಕಾರಣವೆನ್ನಲಾಗುತ್ತಿದೆ.

ಹಿಂದೆಲ್ಲಾ ಪ್ರತಿದಿನ ನೂರರ ಸಂಖ್ಯೆಯಲ್ಲಿ ಶಂಕಿತ ವ್ಯಕ್ತಿಗಳ ಗಂಟಲು ದ್ರವ ಮಾದರಿಗಳನ್ನು ಸಂಗ್ರಹಿಸಿ ಕಳುಹಿಸಲಾಗುತ್ತಿತ್ತು. ಆದರೆ ಕಳೆದ ಒಂದು ವಾರದಿಂದ 800-900ರಿಂದ ಪ್ರಾರಂಭಿಸಿ ಈಗ 1000-1200 ಮಾದರಿಗಳನ್ನು ಪ್ರತಿದಿನ ಮಂಗಳೂರು ಹಾಗೂ ಮಣಿಪಾಲದ ಪ್ರಯೋಗಾಲಯಗಳಿಗೆ ಕಳುಹಿಸಲಾಗುತ್ತಿದೆ. ಈ ಪ್ರಯೋಗಾಲಯಗಳಲ್ಲಿರುವ ಒತ್ತಡದ ಕಾರಣದಿಂದ ಪ್ರತಿದಿನ 150ರಿಂದ 200ರಷ್ಟು ಮಾದರಿಗಳ ಫಲಿತಾಂಶ ಮಾತ್ರ ಕೈಗೆ ಸಿಗುತ್ತಿದೆ. ಹೀಗಾಗಿ ಬುಧವಾರದ ವೇಳೆಗೆ ಬಾಕಿ ಇರು ಮಾದರಿಗಳ ಸಂಖ್ಯೆ 7016 ಆಗಿದೆ.

9 ಪಾಸಿಟಿವ್, 103 ನೆಗೆಟಿವ್: ಕೋವಿಡ್ -19 ಸೋಂಕಿನ ಪರೀಕ್ಷೆಗಾಗಿ ಕಳುಹಿಸಿದ ಶಂಕಿತರ ಗಂಟಲು ದ್ರವದ ಮಾದರಿಗಳಲ್ಲಿ ಬುಧವಾರ ಒಂಭತ್ತು ಮಾದರಿಗಳು ಪಾಸಿಟಿವ್ ಫಲಿತಾಂಶವನ್ನು ನೀಡಿದ್ದರೆ, 103 ವರದಿಗಳು ನೆಗೆಟಿವ್ ಆಗಿವೆ. ಇಂದಿನ 9 ಪ್ರಕರಣಗಳು ಸೇರಿದಂತೆ ಜಿಲ್ಲೆಯಲ್ಲಿ ಈವರೆಗೆ 120 ಪಾಸಿಟಿವ್ ಫಲಿತಾಂಶ ಬಂದಿವೆ. ಇವುಗಳಲ್ಲಿ 116 ಈಗ ಸಕ್ರೀಯ ಪ್ರಕರಣಗಳಾದರೆ, ಮೂವರು ಗುಣಮುಖ ರಾಗಿದ್ದಾರೆ. ಒಬ್ಬರು ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ ಸಂಗ್ರಹಿಸಿದ ಗಂಟಲುದ್ರವ ಮಾದರಿಗಳ ಸಂಖ್ಯೆ ಈಗ 10,000 ದಾಟಿದೆ. ಬುಧವಾರ ಸಂಜೆಯ ವೇಳೆಗೆ 10945 ಸ್ಯಾಂಪಲ್‌ಗಳನ್ನು ಪ್ರಯೋಗಾಲಯದ ಪರೀಕ್ಷೆಗೆ ಕಳುಹಿಸಲಾಗಿದೆ. ಇವುಗಳಲ್ಲಿ 3930ರ ಪರೀಕ್ಷಾ ವರದಿ ಮಾತ್ರ ಬಂದಿವೆ. ಇವುಗಳಲ್ಲಿ 3811 ನೆಗೆಟಿವ್ ಆಗಿದ್ದರೆ, ಒಟ್ಟು 120 ಸ್ಯಾಂಪಲ್‌ಗಳು ಪಾಸಿಟಿವ್ ಆಗಿ ಬಂದಿವೆ. ಇನ್ನೂ 7015 ಸ್ಯಾಂಪಲ್ ವರದಿ ಬರಬೇಕಾಗಿದೆ ಎಂದು ಡಾ.ಸೂಡ ತಿಳಿಸಿದರು.

ಜಿಲ್ಲೆಯಲ್ಲಿ ಬುಧವಾರ ಕೊರೋನ ಸೋಂಕಿನ ಗುಣ ಲಕ್ಷಣಗಳನ್ನು ಹೊಂದಿರುವ ಇನ್ನೂ 1158 ಮಂದಿಯ ಗಂಟಲು ದ್ರವ ಮಾದರಿಗಳನ್ನು ಆರೋಗ್ಯ ಇಲಾಖೆ ಪರೀಕ್ಷೆಗಾಗಿ ಕಳುಹಿಸಿದೆ. ಇವುಗಳಲ್ಲಿ 1112 ಸ್ಯಾಂಪಲ್ ಗಳನ್ನು ಕೊರೋನ ಹಾಟ್‌ಸ್ಪಾಟ್ ಎನಿಸಿರುವ ಹೊರರಾಜ್ಯ ಹಾಗೂ ವಿದೇಶಗಳಿಂದ ಬಂದವರಿಂದ ಪಡೆದು ಪರೀಕ್ಷೆಗೆ ಕಳುಹಿಸಲಾಗಿದೆ. ಉಳಿದಂತೆ 37 ಮಂದಿ ಸೋಂಕಿತರ ಸಂಪರ್ಕಕ್ಕೆ ಬಂದವರು, ನಾಲ್ವರು ತೀವ್ರ ಉಸಿರಾಟ ತೊಂದರೆಯವರು, ಐವರು ಶೀತಜ್ವರದಿಂದ ಬಳಲುವವರ ಸ್ಯಾಂಪಲ್‌ಗಳು ಇದರಲ್ಲಿ ಸೇರಿವೆ ಎಂದು ಡಿಎಚ್‌ಓ ತಿಳಿಸಿದರು.

ಶಂಕಿತ ನೋವೆಲ್ ಕೊರೋನ ಸೋಂಕಿನ ಪರೀಕ್ಷೆಗಾಗಿ ಇಂದು ಮತ್ತೆ 16 ಮಂದಿ ಆಸ್ಪತ್ರೆಗಳ ಐಸೋಲೇಶನ್ ವಾರ್ಡಿಗೆ ದಾಖಲಾಗಿದ್ದಾರೆ. ಇವರಲ್ಲಿ 11 ಮಂದಿ ಪುರುಷ ಹಾಗೂ ಐವರು ಮಹಿಳೆಯರಿದ್ದಾರೆ. ಐವರು ಕೊರೋನ ಶಂಕಿತರು, 8 ಮಂದಿ ತೀವ್ರತರದ ಉಸಿರಾಟ ತೊಂದರೆ ಹಾಗೂ ಮೂವರು ಶೀತಜ್ವರದ ಬಾಧೆಯ ಪರೀಕ್ಷೆಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ವಿವಿಧ ಆಸ್ಪತ್ರೆಗಳ ಐಸೋಲೇಶನ್ ವಾರ್ಡಿನಿಂದ ಇಂದು 25 ಮಂದಿ ಬಿಡುಗಡೆಗೊಂಡಿದ್ದು, 94 ಮಂದಿ ಇನ್ನೂ ವೈದ್ಯರ ನಿಗಾದಲ್ಲಿದ್ದಾರೆ. ಇದುವರೆಗೆ 649 ಮಂದಿ ಚಿಕಿತ್ಸೆ ಪಡೆದು ಐಸೋಲೇಶನ್ ವಾರ್ಡಿನಿಂದ ಬಿಡುಗಡೆಗೊಂಡಿದ್ದಾರೆ ಎಂದರು.

ಜಿಲ್ಲೆಯಲ್ಲಿ ಕೊರೋನ ಸೋಂಕಿನ ಗುಣಲಕ್ಷಣದ ಇಬ್ಬರು ಇಂದು ನೊಂದಣಿ ಗೊಂಡಿದ್ದು, ಈ ಮೂಲಕ ಜಿಲ್ಲೆಯಲ್ಲಿ ಈವರೆಗೆ ಒಟ್ಟು 4879 ಮಂದಿಯನ್ನು ಕೊರೋನ ತಪಾಸಣೆಗಾಗಿ ನೋಂದಣಿ ಮಾಡಿಕೊಂಡಂತಾಗಿದೆ. ಇವರಲ್ಲಿ 3638(ಇಂದು 42) ಮಂದಿ 28 ದಿನಗಳ ನಿಗಾ ವನ್ನೂ, 4590 (118) ಮಂದಿ 14 ದಿನಗಳ ನಿಗಾವನ್ನು ಪೂರ್ಣಗೊಳಿಸಿದ್ದಾರೆ.

ಜಿಲ್ಲೆಯಲ್ಲಿ ಈಗಲೂ 109 ಮಂದಿ ಹೋಮ್ ಕ್ವಾರಂಟೈನ್‌ನಲ್ಲೂ, 8168 ಮಂದಿ ವಿವಿಧ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಹಾಗೂ 86 ಮಂದಿ ಆಸ್ಪತ್ರೆ ಕ್ವಾರಂಟೈನ್‌ನಲ್ಲಿದ್ದಾರೆ ಎಂದು ಡಾ.ಸುಧೀರ್‌ ಚಂದ್ರ ಸೂಡ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News