ಆರೋಗ್ಯ ಭ್ರಷ್ಟಾಚಾರ ಹಗರಣದ ನಡುವೆ ಹಿ.ಪ್ರದೇಶದ ಬಿಜೆಪಿ ಮುಖ್ಯಸ್ಥ ರಾಜೀನಾಮೆ

Update: 2020-05-27 16:22 GMT

ಹೊಸದಿಲ್ಲಿ,ಮೇ 27: ಭ್ರಷ್ಟಾಚಾರ ಆರೋಪಗಳಲ್ಲಿ ರಾಜ್ಯದ ಆರೋಗ್ಯ ಸೇವೆಗಳ ನಿರ್ದೇಶಕ ಅಜಯ ಕುಮಾರ ಗುಪ್ತಾ ಅವರ ಬಂಧನದ ವಾರದ ಬಳಿಕ ಹಿಮಾಚಲ ಪ್ರದೇಶ ಬಿಜೆಪಿ ಅಧ್ಯಕ್ಷ ರಾಜೀವ ಬಿಂದಾಲ್ ಅವರು ‘ನೈತಿಕ ನೆಲೆ ’ಯಲ್ಲಿ ಬುಧವಾರ ತನ್ನ ಹುದ್ದೆಗೆ ರಾಜೀನಾಮೆಯನ್ನು ಸಲ್ಲಿಸಿದ್ದಾರೆ.

 ತನಗೆ ಐದು ಲ.ರೂ.ಲಂಚವನ್ನು ನೀಡುವಂತೆ ಗುಪ್ತಾ ವ್ಯಕ್ತಿಯೋರ್ವರನ್ನು ಕೇಳಿದ್ದ ಆಡಿಯೋ ರೆಕಾರ್ಡಿಂಗ್ ವೈರಲ್ ಆದ ಬಳಿಕ ರಾಜ್ಯ ಜಾಗ್ರತ ಮತ್ತು ಭ್ರಷ್ಟಾಚಾರ ನಿಗ್ರಹ ಘಟಕವು ಕಳೆದ ಬುಧವಾರ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಅವರನ್ನು ಬಂಧಿಸಿತ್ತು. ಬಳಿಕ ಸರಕಾರವು ಅವರನ್ನು ಸೇವೆಯಿಂದ ಅಮಾನತುಗೊಳಿಸಿತ್ತು.

ಕೆಲವರು ಪಕ್ಷದ ಕುರಿತು ಪ್ರಶ್ನೆಗಳನ್ನೆತ್ತಿದ್ದಾರೆ. ಹೀಗಾಗಿ ನೈತಿಕ ನೆಲೆಯಲ್ಲಿ ಹುದ್ದೆಗೆ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ. ಈ ವಿಷಯದಲ್ಲಿ ಬಿಜೆಪಿಯನ್ನು ಸಿಲುಕಿಸುವುದು ಅನ್ಯಾಯವಾಗಿದೆ ಮತ್ತು ಕೋವಿಡ್-19 ಸಂಕಷ್ಟದ ಸಮಯದಲ್ಲಿ ಪಕ್ಷದ ಹಿ.ಪ್ರ.ಘಟಕವು ಸಮಾಜಕ್ಕಾಗಿ ಮಾಡಿರುವ ಕಾರ್ಯಗಳಿಗೆ ಅವಮಾನವಾಗಿದೆ ಎಂದು ಬಿಂದಾಲ್ ಅವರು ಪಕ್ಷಾಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

ಭ್ರಷ್ಟಾಚಾರ ಹಗರಣದಲ್ಲಿ ಪಕ್ಷದ ಕೆಲವು ಹಿರಿಯ ರಾಜ್ಯ ನಾಯಕರು ಭಾಗಿಯಾಗಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಬಿಂದಾಲ್ ರಾಜೀನಾಮೆಯು ಪಕ್ಷದ ಆರೋಪವನ್ನು ಎತ್ತಿ ಹಿಡಿದಿದೆ ಎಂದು ಪ್ರತಿಪಕ್ಷ ನಾಯಕ ಹಾಗೂ ಕಾಂಗ್ರೆಸ್ ಶಾಸಕ ಮುಕೇಶ ಅಗ್ನಿಹೋತ್ರಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News