ದ.ಕ. ಜಿಲ್ಲೆಯ ಬಸ್ ಚಾಲಕರು, ನಿರ್ವಾಹಕರನ್ನು ಕೊರೋನ ವಾರಿಯರ್ಸ್ ಎಂದು ಪರಿಗಣಿಸಿ : ಮುನೀರ್ ಕಾಟಿಪಳ್ಳ

Update: 2020-05-27 16:20 GMT

ಕೊಣಾಜೆ : ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಖಾಸಗಿ ಬಸ್ಸು ಚಾಲಕರು, ನಿರ್ವಾಹಕರನ್ನು ಕೊರೋನಾ ವಾರಿಯರ್ಸ್ ಎಂದು ಪರಿಗಣಿಸಿ ಸೂಕ್ತ ರಕ್ಷಣೆ ಒದಗಿಸುವ ಅಗತ್ಯ ಇದೆ ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಹೇಳಿದರು.

ಲಾಕ್ ಡೌನ್ ಕಾರಣ ಸಂಕಷ್ಟದಲ್ಲಿರುವ ಖಾಸಗಿ ಬಸ್ಸು ಚಾಲಕ , ನಿರ್ವಾಹಕ , ಕ್ಲೀನರ್ ಗಳ ಸಮಸ್ಯೆಗಳ ಕುರಿತಂತೆ ಸರ್ಕಾರದ ಗಮನ ಸೆಳೆಯುವ ಸಲುವಾಗಿ ಮಂಗಳೂರು ಪೂರ್ವ ವಲಯ ಬಸ್ಸು ಚಾಲಕ, ನಿರ್ವಾಹಕರು ಇಂದು ದೇರಳಕಟ್ಟೆಯ ಜಲಾಲ್ ಭಾಗ್ ಬಸ್ ನಿಲ್ದಾಣದ ಸಮೀಪ ನಡೆಸಿದ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಸರ್ಕಾರ ಹಾಗೂ ಬಸ್ ಮಾಲಕರು ಬಸ್ಸು ನೌಕರರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಗಮನಕೊಡಬೇಕು. ಲಾಕ್ ಡೌನ್ ಕಾರಣ ಕಳೆದ 2 ತಿಂಗಳಿಂದ ಕೆಲಸವಿಲ್ಲದೇ ಇವೆರೆಲ್ಲಾ ಸಂಕಷ್ಟದಲ್ಲಿದ್ದಾರೆ. ಆದರೆ ಮಾಲಕರು ಯಾವುದೇ ಪರಿಹಾರ ಒದಗಿಸಿಲ್ಲ.  ನೆರವಿಗೆ ಮುಂದಾಗಲಿಲ್ಲ. ಲಾಕ್ ಡೌನ್ ಅವಧಿಯಲ್ಲಿ ಪೂರ್ಣ ವೇತನ ನೀಡಬೇಕು ಎಂದು ಸರಕಾರದ ಆದೇಶ ಇದ್ದರೂ  ಮಾಲಕರು ಆದೇಶ ಪಾಲಿಸಿಲ್ಲ. ತಿಂಗಳಿಗೆ ಕನಿಷ್ಟ ಐದು ಸಾವಿರದಂತೆ ತಲಾ ಹತ್ತು ಸಾವಿರ ರೂಪಾಯಿಗಳನ್ನು ಮಾಲಕರ ಸಂಘ ಪ್ರತಿಯೊಬ್ಬ ಬಸ್ಸು ನೌಕರರಿಗೂ ಒದಗಿಸಬೇಕು ಎಂದು ಅವರು ಆಗ್ರಹಿಸಿದರು.

ಇದೀಗ ಒಂದನೇ ತಾರೀಕಿನಿಂದ ಜಿಲ್ಲೆಯಲ್ಲಿ ಖಾಸಗಿ ಬಸ್ ಸಂಚಾರ ಆರಂಭವಾಗಲಿದೆ. ವಿವಿಧ ಕಾರಣಗಳನ್ನು ಮುಂದಿಟ್ಟು  "ಶೇ 50 ರಷ್ಟು ಬಸ್ಸುಗಳು ಮಾತ್ರ ಸಂಚಾರ ಆರಂಭಿಸಲಿದೆ" ಎಂದು ಮಾಲಕರ ಸಂಘಟನೆ ಹೇಳಿಕೆ ನೀಡಿದೆ.  ಇದರಿಂದ ಅರ್ಧದಷ್ಟು ನೌಕರರಿಗೆ ಕೆಲಸ ದೊರೆತರೆ ಉಳಿದ ಅರ್ಧದಷ್ಟು ಜನ ಉದ್ಯೋಗವಿಲ್ಲದೆ ಮನೆಯಲ್ಲೇ ಕೂರಬೇಕಾಗುತ್ತದೆ. ಅವರಿಗೆ ವೇತನ ಯಾರು ನೀಡುತ್ತಾರೆ ಎಂದು ಪ್ರಶ್ನಿಸಿದರು. ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಜಿಲ್ಲಾಡಳಿತ ಮಾಲಕರ ಸಂಘದ ಪ್ರತಿನಿಧಿಗಳ ಜೊತೆಗೆ ಸರಣಿ ಸಭೆಗಳನ್ನು ನಡೆಸುತ್ತಿದೆ. ಬಸ್ಸು ಕಾರ್ಮಿಕರ ಪ್ರತಿನಿಧಿಗಳನ್ನು ನೆಪ ಮಾತ್ರಕ್ಕೂ ಪರಿಗಣಿಸುತ್ತಿಲ್ಲ. ಇದು ಖೇದಕರ ಎಂದರು.

ಬಸ್ಸುಗಳಲ್ಲಿ ಸಾರ್ವಜನಿಕರು ಸಂಚರಿಸುವಾಗ, ದಿನ ನಿತ್ಯ ನೂರಾರು ಜನರ ಸಂಪರ್ಕಕ್ಕೆ ಬರುವ ಬಸ್ಸು ಸಿಬ್ಬಂದಿಗಳಿಗೆ ಸೋಂಕು ಹರಡುವ ಸಾಧ್ಯತೆಗಳು ಇರುತ್ತವೆ. ಇಲ್ಲಿ ಪಿಎಫ್, ಇಎಸ್ಐ ಸಹಿತ ಯಾವುದೇ ಸೌಲಭ್ಯ ಇಲ್ಲದೆ ದುಡಿಯುವ ಚಾಲಕ , ನಿರ್ವಾಹಕರು ತಮ್ಮ ಜೀವ ಪಣಕ್ಕಿಟ್ಟು ಕೆಲಸ ನಿರ್ವಹಿಸಬೇಕು. ಈ ಕಾರಣಕ್ಕಾಗಿ ಸರ್ಕಾರ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಕೈತೊಳೆಯುವ ವ್ಯವಸ್ಥೆ ಮತ್ತು ಸ್ಯಾನಿಟೈಸಿಂಗ್ ವ್ಯವಸ್ಥೆ ಮಾಡಬೇಕು. ಬಸ್ ಸಿಬ್ಬಂದಿಗಳನ್ನು ಕೊರೊನಾ ವಾರಿಯರ್ಸ್ ಎಂದು ಪರಿಗಣಿಸಿ ಕೊರೊನಾ ವಾರಿಯರ್ಸ್ ಗಳಿಗೆ ಸರ್ಕಾರ ಸೂಚಿಸಿರುವ ಎಲ್ಲಾ ಸೌಲಭ್ಯಗಳು ಇವರಿಗೆ ಕೊಡಬೇಕು ಎಂದು ಹೇಳಿದರು.

ಸಭೆಯಲ್ಲಿ ಡಿವೈಎಫ್ಐ ಜಿಲ್ಲಾ ಮುಖಂಡ ರಫೀಕ್ ಹರೇಕಳ , ನಿತಿನ್ ಬಂಗೇರಾ , ಶ್ರೀನಾಥ್ ಕುಲಾಲ್, ಉಳ್ಳಾಲ ವಲಯ ಅಧ್ಯಕ್ಷ ಅಶ್ರಫ್ ಕೆಸಿ ರೋಡ್, ರಝಾಕ್ ಮೊಂಟೆಪದವು , ಇಬ್ರಾಹಿಂ ಮದಕ , ಚಾಲಕರ ನಿರ್ವಾಹಕರ ಮುಖಂಡರಾದ ಜಗದೀಶ್ , ಬಾಝಿಕ್ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News