ಕೋವಿಡ್-19 ರೋಗಿಗಳ ಚಿಕಿತ್ಸಾ ಸೌಲಭ್ಯಗಳ ವಿವರ ನೀಡಿ: ದಿಲ್ಲಿ, ಕೇಂದ್ರ ಸರಕಾರಕ್ಕೆ ಹೈಕೋರ್ಟ್ ಆದೇಶ

Update: 2020-05-27 16:33 GMT

ಹೊಸದಿಲ್ಲಿ, ಮೇ 28: ಕೊರೋನ ವೈರಸ್ ರೋಗಿಗಳ ಚಿಕಿತ್ಸೆಗೆ ಮಾಡಲಾಗಿರುವ ಏರ್ಪಾಡುಗಳ ಬಗ್ಗೆ ವಿವರಗಳನ್ನು ನೀಡುವಂತೆ ದಿಲ್ಲಿ ಹೈಕೋರ್ಟ್ ಕೇಂದ್ರ ಸರಕಾರ ಹಾಗೂ ಎಎಪಿ ನೇತೃತ್ವದ ದಿಲ್ಲಿ ಸರಕಾರಕ್ಕೆ ನಿರ್ದೇಶನ ನೀಡಿದೆ.

ತಕ್ಷಣವೇ ಆಸ್ಪತ್ರೆಗೆ ದಾಖಲಾಗಬೇಕಾದ ಅಗತ್ಯವಿರುವ ಕೋವಿಡ್-19 ರೋಗಿಗಳಿಗಾಗಿ ಸ್ಥಾಪಿಸಲಾಗಿರುವ ಹೆಲ್ಪ್‌ಲೈನ್‌ಗಳ ಬಗ್ಗೆಯೂ ಮಾಹಿತಿ ಒದಗಿಸುವಂತೆ ನ್ಯಾಯಾಲಯ ಅಧಿಕಾರಿಗಳಿಗೆ ಸೂಚಿಸಿದೆ.

ರೋಗಿಗಳ ಶುಶ್ರೂಷೆಯಲ್ಲಿ ನ್ಯೂನತೆಗಳಿವೆಯೆಂದು ಆರೋಪಿಸಿ ವ್ಯಕ್ತಿಯೊಬ್ಬ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಿದ ವಿಡಿಯೋ ವ್ಯಾಪಕವಾಗಿ ವೈರಲ್ ಆಗಿತ್ತು. ಇದನ್ನು ಸ್ವಯಂಪ್ರೇರಿತವಾಗಿ ಗಮನಕ್ಕೆ ತೆಗೆದುಕೊಂಡಿರುವ ನ್ಯಾಯ ಮೂರ್ತಿಗಳಾದ ವಿಪಿನ್ ಸಿಂಗ್ ಹಾಗೂ ರಜನೀಶ್ ನೇತೃತ್ವದ ನ್ಯಾಯಪೀಠ ಕೇಂದ್ರ ಹಾಗೂ ದಿಲ್ಲಿ ಸರಕಾರಕ್ಕೆ ಸೂಚನೆ ನೀಡಿದೆ.

ಪ್ರಸಕ್ತ ಸಮಯದ ಗ್ರಹಿಕೆಯಲ್ಲಿ ಈ ವಿಡಿಯೋ ಸಾರ್ವಜನಿಕ ಕಾಳಜಿಯ ಗಂಭೀರ ವಿಷಯಗಳನ್ನು ತೋರಿಸಿಕೊಟ್ಟಿದೆ ಎಂದು ನ್ಯಾಯಾಧೀಶರು ಅಭಿಪ್ರಾಯಿಸಿದರು.

ಈ ವಿಡಿಯೋದಲ್ಲಿ, ಭಾರಧ್ವಜ್ ಎಂಬವರು ತನ್ನ ತಾಯಿಯನ್ನು ಮೇ 19ರಂದು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾಗ, ಆಕೆಗೆ ಕೊರೋನ ಪಾಸಿಟಿವ್ ಎಂದು ಪರೀಕ್ಷೆಯಲ್ಲಿ ಕಂಡುಬಂದಿತ್ತು. ತಾಯಿಗೆ ವೆಂಟಿಲೇಟರ್ ಹಾಗೂ ಹಾಸಿಗೆಯ ಏರ್ಪಾಡನ್ನು ಇನ್ನೊಂದು ಆಸ್ಪತ್ರೆಯಲ್ಲಿ ವ್ಯವಸ್ಥೆಯಲ್ಲಿ ಏರ್ಪಾಡು ಮಾಡಿ ಕೊಳ್ಳುವಂತೆ ಖಾಸಗಿ ಆಸ್ಪತ್ರೆಯವರು ತನಗೆ ತಿಳಿಸಿದ್ದರು. ಆದರೆ ತನಗೆ ಅದು ಸಾಧ್ಯವಾಗಲಿಲ್ಲ. ಈ ಸಂದರ್ಭದಲ್ಲಿ ಕೇಂದ್ರ ಹಾಗೂ ದಿಲ್ಲಿ ಸರಕಾರದ ಸಹಾಯವಾಣಿಗಳಿಂದಲೂ ಯಾವುದೇ ಪ್ರತಿಕ್ರಿಯೆ ಲಭಿಸಲಿಲ್ಲವೆಂದು ಆತ ವಿಡಿಯೋದಲ್ಲಿ ಹೇಳಿದ್ದರು.

ಕೊರೋನ ವೈರಸ್ ಪ್ರಕರಣಗ ನಿರ್ವಹಣೆಯಲ್ಲಿ ಸಹಾಯವಾಣಿಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕೆಂದು ನ್ಯಾಯಪೀಠ ಸೂಚಿಸಿತು. ರೋಗಿಗಳಿಗೆ ಆ್ಯಂಬುಲೆನ್ಸ್ ಸೌಕರ್ಯಗನ್ನು ಕೂಡಾ ಒದಗಿಸುವಂತೆ ಅದು ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News