ಗೂಡಿನಬಳಿ ಯುವಕರಿಗೆ ಶೌರ್ಯ ಪ್ರಶಸ್ತಿಗೆ ಶಿಫಾರಸು ಮಾಡಲಿ: ದ.ಕ. ಜಿಲ್ಲಾಡಳಿತ, ಸರಕಾರಕ್ಕೆ ವೆಲ್ಫೇರ್ ಪಕ್ಷ ಒತ್ತಾಯ

Update: 2020-05-27 16:33 GMT

ಬಂಟ್ವಾಳ, ಮೇ 27: ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಕಲ್ಲಡ್ಕದ ಯುವಕ ನಿಶಾಂತ್‌ ಎಂಬವರ ಪ್ರಾಣ ಉಳಿಸಲು ಕೊನೆ ಕ್ಷಣದವರೆಗೆ ಪ್ರಯತ್ನಿಸಿದ ತಾಲೂಕಿನ ಗೂಡಿನಬಳಿಯ ಹಾಗೂ ಪರಿಸರದ ಯುವಕರ ಶೌರ್ಯವನ್ನು ಗೌರವಿಸಿ ಕೇಂದ್ರ ಸರಕಾರದಿಂದ ಕೊಡಲಾಗುವ 'ಜೀವನ್ ರಕ್ಷಾ ಪದಕ್' ಪ್ರಶಸ್ತಿಗೆ ರಾಜ್ಯ ಸರಕಾರ ಶಿಫಾರಸು ಮಾಡಬೇಕು ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸುಲೈಮಾನ್ ಕಲ್ಲರ್ಪೆ ಆಗ್ರಹಿಸಿದ್ದಾರೆ. 

ಮೆಲ್ಕಾರ್ ಸಮೀಪದ ಬೋಳಂಗಡಿಯಲ್ಲಿ ಪಕ್ಷದ ವತಿಯಿಂದ ಬುಧವಾರ ನಡೆದ ಸರಳ ಕಾರ್ಯಕ್ರಮದಲ್ಲಿ ನಿಶಾಂತ್ ನ ಪ್ರಾಣ ಉಳಿಸಲು ಪ್ರಯತ್ನಿಸಿದ ಮುಹಮ್ಮದ್, ಝಾಹೀದ್,  ತೌಸೀಫ್, ಸಮೀರ್, ಆರಿಫ್ ಪಿ.ಜೆ., ಮುಖ್ತಾರ್ ಅವರಿಗೆ ಪಕ್ಷದ ವತಿಯಿಂದ 'ಸಂಜೀವಿನಿ ಪ್ರಶಸ್ತಿ' ಪ್ರಧಾ‌ನ ಮಾಡಿ ಸನ್ಮಾನಿಸಿ ಗೌರವಿಸಲಾಯಿತು.

ಇದಕ್ಕೂ ಮೊದಲು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುಲೈಮಾನ್ ಕಲ್ಲರ್ಪೆ, ತಮ್ಮ ಜೀವವನ್ನು ಪಣಕ್ಕಿಟ್ಟು ಈ ಯುವಕರು ಈ  ಹಿಂದೆಯೂ ಹಲವು ಜೀವಗಳನ್ನು ರಕ್ಷಿಸಿದ್ದಾರೆ. ನೆರೆ, ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಪೊಲೀಸ್, ತಾಲೂಕು ಆಡಳಿತ ಈ ಯುವಕರ ಸಹಾಯ ಪಡೆಯುತ್ತವೆ. ಆದರೆ ಸರಕಾರವಾಗಲಿ, ಜಿಲ್ಲಾ, ತಾಲೂಕು ಆಡಳಿತವಾಗಲಿ ಈ ಯುವಕರ ಶೌರ್ಯವನ್ನು ಗುರುತಿಸುವ ಕಾರ್ಯ ವನ್ನು ಈವರೆಗೆ ಮಾಡದೇ ಇರುವುದು ಬೇಸರದ ವಿಚಾರವಾಗಿದೆ ಎಂದರು.

ಆಪ್ತ ಕಾಲದಲ್ಲಿ ಶೌರ್ಯ, ಸಾಹಸ ಮೆರೆದವರನ್ನು ಗುರುತಿಸಿ ಕೇಂದ್ರ ಸರಕಾರವು ಗಣರಾಜ್ಯೋತ್ಸವ ದಿನದಂದು ಶೌರ್ಯ ನೀಡಿ ಗೌರವಿಸು ತ್ತದೆ. ಮುಂದಿನ ಗಣರಾಜ್ಯೋತ್ಸವ ದಿನದಂದು ಈ ಯುವಕರ ಶೌರ್ಯವನ್ನು ಕೇಂದ್ರ ಸರಕಾರ ಪರಿಗಣಿಸಬೇಕು. ಅದಕ್ಕೆ ಜಿಲ್ಲಾಡಳಿತ, ರಾಜ್ಯ ಸರಕಾರ ಶಿಫಾರಸು ಮಾಡಬೇಕು. ಈ ನಿಟ್ಟಿನಲ್ಲಿ ಪಕ್ಷವು ಜಿಲ್ಲಾಡಳಿತ, ರಾಜ್ಯ ಸರಕಾರದ ಮೇಲೆ‌ ನಿರಂತರ ಒತ್ತಡ, ಹೋರಾಟ ಮಾಡಲಿದೆ ಎಂದು ಅವರು ಹೇಳಿದರು.

ಯುವಕರ ಶೌರ್ಯವನ್ನು ಮೆಚ್ಚಿ ಪ್ರಶಸ್ತಿ ನೀಡಿ ಗೌರವಿಸಲು ಸರಕಾರಕ್ಕೆ ಶಿಫಾರಸು ಮಾಡಬೇಕಾದ ಸಂಸದೆ ಶೋಭಾ ಕರಂದ್ಲಾಜೆ ಮತ್ತು ಶಾಸಕ ಯು.ಟಿ.ಖಾದರ್ ಸಾಮಾಜಿಕ ಜಾಲತಾಣದಲ್ಲಿ ಕೋಮು ರಾಜಕೀಯ ಹೇಳಿಕೆಯನ್ನು ನೀಡಿದ್ದನ್ನು ಪಕ್ಷ ಖಂಡಿಸುತ್ತದೆ ಎಂದು ಹೇಳಿದರು.

ಪಕ್ಷದ ಮಂಗಳೂರು ವಲಯದ ಅಧ್ಯಕ್ಷ ಎಸ್.ಎಂ.ಮುತ್ತಲಿಬ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಶಸ್ತಿ ಸಮಿತಿ ಅಧ್ಯಕ್ಷ ಶ್ರೀಕಾಂತ್ ಸಾಲ್ಯಾನ್, ಕಾರ್ಯದರ್ಶಿ ದಿವಕರ್ ಬೋಳೂರು, ಪಕ್ಷದ ರಾಜ್ಯ ಮುಖಂಡ ಮೊಯಿನ್ ಕಮರ್ ಮಾತನಾಡಿದರು. ಸತ್ತಾರ್ ಗೂಡಿನಬಳಿ ಉಪಸ್ಥಿತರಿದ್ದರು. ಪಕ್ಷದ ಪ್ರಮುಖರಾದ ತಫೀಲ್ ಯು. ಸ್ವಾಗತಿಸಿದರು. ಪತ್ರಕರ್ತ ಸಲೀಂ ಬೋಳಂಗಡಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಕೊನೆಗೆ ಪ್ರಶಸ್ತಿ ಪುರಸ್ಕೃತ ಯುವಕರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

"ಆರ್ಥಿಕ ಸಂಕಷ್ಟದಲ್ಲಿ ನಿಶಾಂತ್ ಆತ್ಮಹತ್ಯೆ"

ಆರ್ಥಿಕ ಸಂಕಷ್ಟದಿಂದಾಗಿ ನಿಶಾಂತ್ ಆತ್ಮಹತ್ಯೆ ಮಾಡಿದ್ದಾರೆ. ಅವರ ಮನೆಗೆ ಇಂದು ಪಕ್ಷದ ನಿಯೋಗ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ನೀಡಲಾಗಿದೆ. ಈ ವೇಳೆ ಕುಟುಂಬಸ್ಥರ ಜೊತೆ ಮಾತನಾಡಿದಾಗ, ಲಾಕ್ ಡೌನ್ ನಿಂದ ಕೆಲಸ ಕಾರ್ಯವಿಲ್ಲದೆ ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿ ನಿಶಾಂತ್ ಆತ್ಮಹತ್ಯೆ ಮಾಡಿದ್ದಾರೆ ಎಂದು ಕುಟುಂಬಸ್ಥರು ಹೇಳಿದ್ದಾರೆ. ಅವರ ಮನೆ ನಿರ್ಮಾಣ ಕಾಮಗಾರಿ ಅರ್ಧದಲ್ಲಿ ನಿಂತಿದೆ. ಊಟಕ್ಕೂ ಕುಟುಂಬ ಸಂಕಷ್ಟ ಪಡುತ್ತಿದೆ. ಸರಕಾರ ಕೂಡಲೇ ಅವರಿಗೆ ಪರಿಹಾರ ನೀಡಬೇಕು ಎಂದು ವೆಲ್ಫೇರ್ ಪಕ್ಷದ ದ.ಕ. ಜಿಲ್ಲಾಧ್ಯಕ್ಷ ಸುಲೈಮಾನ್ ಕಲ್ಲರ್ಪೆ ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News