ಬಡವರ ಬ್ಯಾಂಕ್ ಖಾತೆಗಳಲ್ಲಿ 10,000 ರೂ. ಜಮಾಕ್ಕೆ ಆಗ್ರಹಿಸಲು ಇಂದಿನಿಂದ ಕಾಂಗ್ರೆಸ್ ಅಭಿಯಾನ

Update: 2020-05-27 16:44 GMT

ಜೈಪುರ,ಮೇ 27: ಕೊರೋನ ವೈರಸ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಬಡವರ ಬ್ಯಾಂಕ್ ಖಾತೆಗಳಲ್ಲಿ 10,000 ರೂ.ಗಳನ್ನು ಜಮಾ ಮಾಡುವಂತೆ ಕೇಂದ್ರಕ್ಕೆ ಆಗ್ರಹಿಸಲು ಕಾಂಗ್ರೆಸ್ ಪಕ್ಷವು ಮೇ 28ರಂದು ದೇಶವ್ಯಾಪಿ ಸಾಮಾಜಿಕ ಮಾಧ್ಯಮ ಅಭಿಯಾನವನ್ನು ಆರಂಭಿಸಲಿದೆ ಎಂದು ರಾಜಸ್ಥಾನದ ಉಪಮುಖ್ಯಮಂತ್ರಿ ಹಾಗೂ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಪೈಲಟ್ ಅವರು ಬುಧವಾರ ಇಲ್ಲಿ ತಿಳಿಸಿದರು.

ಕೇಂದ್ರವು ಆರ್ಥಿಕ ಪ್ಯಾಕೇಜನ್ನು ಘೋಷಿಸಿದೆಯಾದರೂ ಕೊರೋನ ವೈರಸ್ ಲಾಕ್‌ಡೌನ್‌ನಿಂದಾಗಿ ಹಣಕಾಸು ನೆರವು ಬಡವರನ್ನು ತಲುಪುವುದಿಲ್ಲ ಎಂದ ಅವರು,ಪ್ರತಿ ಬಡವನೂ ತನ್ನ ಬ್ಯಾಂಕ್ ಖಾತೆಯಲ್ಲಿ 10,000 ರೂ. ಪಡೆಯಬೇಕು. ಇದಕ್ಕಾಗಿ ನಾವು ಕೇಂದ್ರವನ್ನು ಒತ್ತಾಯಿಸುತ್ತೇವೆ. ಮಾರುಕಟ್ಟೆಯಲ್ಲಿ ಬೇಡಿಕೆಯನ್ನು ಹೆಚ್ಚಿಸಲು ಬಡವರ ಜೇಬುಗಳಲ್ಲಿ ಹಣ ಹಾಕುವುದು ಅಗತ್ಯವಾಗಿದೆ ಎಂದರು.

ಲಾಕ್‌ಡೌನ್ ಅವಧಿಯಲ್ಲಿ ಲಕ್ಷಾಂತರ ವಲಸೆ ಕಾರ್ಮಿಕರು ಬರಿಗಾಲಿನಲ್ಲಿ, ಹಸಿದುಕೊಂಡೇ ತಮ್ಮ ಮನೆಗಳತ್ತ ಹೆಜ್ಜೆಗಳನ್ನು ಹಾಕಿದ್ದಾರೆ. ಆದರೆ ಅವರಿಗೆ ನೆರವು ಒದಗಿಸಲು ಯಾವುದೇ ದೃಢವಾದ ನೀತಿ ಕೇಂದ್ರ ಸರಕಾರದ ಬಳಿಯಿರಲಿಲ್ಲ ಎಂದ ಪೈಲಟ್,ಜನರಿಗೆ ಪರಿಹಾರವನ್ನು ಒದಗಿಸಬೇಕಾದ ಈ ಕಾಲದಲ್ಲಿ ಬಿಜೆಪಿ ಸರಕಾರ ಮತ್ತು ಅದರ ನಾಯಕರು ಪಕ್ಷವು ಆರು ವರ್ಷಗಳ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ್ದನ್ನು ಸಂಭ್ರಮಿಸಲು ವರ್ಚುವಲ್ ರ್ಯಾಲಿಗಳನ್ನು ಯೋಜಿಸುತ್ತಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News