ಗೋಧಿ, ಬೇಳೆ ವಿತರಿಸದ ಪಡಿತರ ಅಂಗಡಿಗಳ ವಿರುದ್ಧ ಕ್ರಮ : ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಕೃಷ್ಣಮೂರ್ತಿ

Update: 2020-05-27 17:25 GMT

ಉಡುಪಿ, ಮೇ 27: ಉಡುಪಿ ಜಿಲ್ಲೆಯ ಪಡಿತರ ಅಂಗಡಿಗಳಲ್ಲಿ ಅಕ್ಕಿ ಜೊತೆ ಏಪ್ರಿಲ್ ತಿಂಗಳಲ್ಲಿ ಗೋಧಿ ಹಾಗೂ ಮೇ ತಿಂಗಳಲ್ಲಿ ಬೇಳೆ ವಿತರಿಸದೆ ಇರುವುದು ಪರಿಶೀಲನೆ ಸಂದರ್ಭ ಕಂಡುಬಂದಿದ್ದು ಈ ಬಗ್ಗೆ ಸಂಬಂದಪಟ್ಟ ಅಧಿಕಾರಿಗಳಿಗೆ ವರದಿ ನೀಡುವಂತೆ ಸೂಚಿಸಲಾಗಿದೆ ಎಂದು ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಕೃಷ್ಣಮೂರ್ತಿ ತಿಳಿಸಿದ್ದಾರೆ.

ಉಡುಪಿಯ ಪ್ರವಾಸಿ ಮಂದಿರದಲ್ಲಿಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, ಲಾಕ್‌ಡೌನ್ ಹಿನ್ನೆಲೆಯಲ್ಲಿ ಎಪ್ರಿಲ್ ತಿಂಗಳಲ್ಲಿ 10 ಕೆ.ಜಿ. ಅಕ್ಕಿ ಜೊತೆ ನಾಲ್ಕು ಕೆ.ಜಿ. ಗೋಧಿ ಮತ್ತು ಮೇ ತಿಂಗಳಲ್ಲಿ ಅಕ್ಕಿ ಜೊತೆ ಎರಡು ಕೆ.ಜಿ. ಬೇಳೆ ನೀಡಲು ಸರಕಾರ ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಇವು ಗಳನ್ನು ಸಂಬಂಧಪಟ್ಟ ಇಲಾಖೆ ಜಿಲ್ಲೆಯ ಪಡಿತರ ಅಂಗಡಿಗಳಿಗೆ ಪೂರೈಕೆ ಮಾಡಿದೆ. ಆದರೆ ಗೋಧಿ ಮತ್ತು ಬೇಳೆ ಫಲಾ ನುಭವಿಗಳಿಗೆ ಪಡಿತರ ಅಂಗಡಿ ಗಳಲ್ಲಿ ನೀಡಿಲ್ಲ ಎಂಬುದು ತಿಳಿದು ಬಂದಿದೆ. ಈ ವಿಚಾರವನ್ನು ಜಿಲ್ಲಾಧಿಕಾರಿ ಗಳ ಗಮನಕ್ಕೂ ತರಲಾಗಿದೆ ಎಂದರು.

ಜಿಲ್ಲೆಯ ಪಡಿತರ ಅಂಗಡಿಗಳಲ್ಲಿ ರಾಜ್ಯ ಸರಕಾರ ನಿಗದಿಪಡಿಸಿದ ಸಮಯದ ಬದಲು ಇತರೇ ಸಮಯದಲ್ಲಿ ಪಡಿತರ ವಿತರಿಸುತ್ತಿರುವುದು ಮತ್ತು ಕೆಲವು ಪಡಿತರ ಅಂಗಡಿಗಳಲ್ಲಿ ದಾಸ್ತಾನು ವ್ಯತ್ಯಾಸ ಕಂಡು ಬಂದಿದೆ. ಅಂಗನ ವಾಡಿಗಳಲ್ಲಿ ನೀಡುವ ಆಹಾರದ ವಿತರಣೆಯಲ್ಲಿ ಸ್ವಲ್ಪ ವ್ಯತ್ಯಾಸಗಳಾಗಿವೆ. ಆಯೋಗ ಸೂಚಿಸಿರುವ ಪ್ರಿಂಟೆಡ್ ರಿಜಿಸ್ಟಾರ್‌ಗಳಲ್ಲಿ ವಿತರಣೆಯ ವಿವರಗಳನ್ನು ಕುರಿತು ದಾಖಲಿಸುತ್ತಿಲ್ಲ ಎಂದು ಅವರು ದೂರಿದರು.

ರಾಜ್ಯ ಮತ್ತು ಕೇಂದ್ರ ಸರಕಾರಗಳು ಪಡಿತರ ಚೀಟಿದಾರರಿಗೆ, ಶಾಲೆಗಳಿಗೆ, ಅಂಗನವಾಡಿಗಳಿಗೆ, ಹಾಸ್ಟೆಲ್ಗಳಿಗೆ ನೀಡುತ್ತಿರುವ ಉಚಿತ ಆಹಾರದ ಸಮ ರ್ಪಕ ವಿತರಣೆ ಮತ್ತು ಅಲ್ಲಿನ ಲೋಪದೋಷಗಳ ಕುರಿತು ಆಹಾರ ಆಯೋಗ ಪರಿಶೀಲನೆ ನಡೆಸುತ್ತಿದೆ. ಕೋವಿಡ್ -19 ಈ ಅವಧಿಯಲ್ಲಿ ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಿಗೆ ಭೇಟಿ ನೀಡಿ ಪಡಿತರ ವಿತರಣೆ ಪರಿಶೀಲನೆ ನಡೆಸಲಾಗಿದೆ. ಈವರೆಗೆ 11 ಜಿಲ್ಲೆಗಳಿಗೆ ಭೇಟಿ ನೀಡಲಾಗಿದೆ ಎಂದು ಆಯೋಗದ ಸದಸ್ಯ ಶಿವಶಂಕರ್ ತಿಳಿಸಿದರು.

ಸರಕಾರದಿಂದ ಸಿಗುವ ಉಚಿತ ಅಕ್ಕಿಯನ್ನು ಫಲಾನುಭವಿಗಳು, ಬೇರೆಯ ವರಿಗೆ ಮಾರಾಟ ಮಾಡುವ ಮೂಲಕ ಕಾರ್ಡ್‌ನ್ನು ದುರುಪಯೋಗ ಪಡಿಸಿ ಕೊಂಡಲ್ಲಿ ಅಂತಹ ಪಡಿತರ ಚೀಟಿಯನ್ನು ರದ್ದುಪಡಿಸಲು ಜಿಲ್ಲಾ ಆಹಾರ ಇಲಾಖೆಯ ಉಪ ನಿರ್ದೇಶಕರಿಗೆ ಅಧಿಕಾರ ಇದೆ ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಆಹಾರ ಇಲಾಖೆಯ ಉಪ ನಿರ್ದೇಶಕ ಗಜೇಂದ್ರ ಉಪಸ್ಥಿತರಿದ್ದರು.

ಧಾನ್ಯಗಳ ವಿವರ ಕಡ್ಡಾಯ ಪ್ರದರ್ಶನ

ಪಡಿತರ ಅಂಗಡಿಗಳ ಮೂಲಕ ಸರಕಾರ ನೀಡುವ ನಿಗದಿತ ಪ್ರಮಾಣದ ಪಡಿತರ ಪಡೆಯುವುದು ಪ್ರತಿಯೊಬ್ಬ ಪಡಿತರ ಚೀಟಿದಾರರನ ಹಕ್ಕು ಆಗಿದೆ. ಆದುದರಿಂದ ಜಿಲ್ಲೆಯ ಎಲ್ಲಾ ಪಡಿತರ ಅಂಗಡಿಗಳ ಮುಂದೆ, ಪಡಿತರ ವಿತರಿಸುವ ಪ್ರಮಾಣ ಮತ್ತು ವಿತರಿಸುವ ಧಾನ್ಯಗಳ ವಿವರ ಗಳನ್ನು ತಕ್ಷಣ ದಿಂದಲೇ ಕಡ್ಡಾಯವಾಗಿ ಪ್ರದರ್ಶಿಸಬೇಕೆಂದು ಡಾ. ಕೃಷ್ಣಮೂರ್ತಿ ತಿಳಿಸಿದ್ದಾರೆ.

ಅದೇ ರೀತಿ ಪ್ರತಿಯೊಂದು ಪಡಿತರ ಅಂಗಡಿಗೆ ಜಾಗೃತಿ ಸಮಿತಿಯನ್ನು ರಚಿಸಲಾಗಿದ್ದು, ಆ ಸಮಿತಿಯ ಸದಸ್ಯರ ಸಂಪೂರ್ಣ ವಿವರಗಳನ್ನು ಕೂಡ ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂದ ಅವರು, ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ಶಾಸಕರ ನೇತೃತ್ವದಲ್ಲಿ ಪಡಿತರ ಚೀಟಿದಾರರ ಹಾಗೂ ನ್ಯಾಯಬೆಲೆ ಅಂಗಡಿ ಮಾಲಕರ ಸಭೆ ನಡೆಸುವದರ ಮೂಲಕ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಅಭಿಪ್ರಾಯಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News