ದ್ವಿತೀಯ ಪಿಯುಸಿ : ಮೇ 28-29ರಂದು ವೌಲ್ಯಮಾಪನ ನಡೆಸಲು ಮೌಲ್ಯ ಮಾಪಕರ ಸಮ್ಮತಿ

Update: 2020-05-27 17:31 GMT

ಮಂಗಳೂರು, ಮೇ 27: ಕೊರೋನ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಮೌಲ್ಯ ಮಾಪನವನ್ನು ಬಹಿಷ್ಕರಿಸುವುದಾಗಿ ಮಂಗಳವಾರವಷ್ಟೇ ಹೇಳಿಕೆ ನೀಡಿದ್ದ ದ.ಕ ಜಿಲ್ಲಾ ಪ.ಪೂ.ಕಾ ಪ್ರಾಚಾರ್ಯರ ಸಂಘ ಮತ್ತು ದ.ಕ ಜಿಲ್ಲಾ ಪ.ಪೂ.ಕಾ ಉಪನ್ಯಾಸಕರ ಸಂಘವು ಮೇ 28ರಿಂದ ವೌಲ್ಯಮಾಪನ ಮಾಡುವುದಾಗಿ ತಿಳಿಸಿದೆ.

ಸಂಘದ ಮುಖಂಡರು ಬುಧವಾರ ದ.ಕ.ಜಿಲ್ಲಾಧಿಕಾರಿಯನ್ನು ಮತ್ತೊಮ್ಮೆ ಭೇಟಿಯಾಗಿ ಆತಂಕ ತೋಡಿಕೊಂಡರಲ್ಲದೆ, ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು. ವೌಲ್ಯಮಾಪಕರ ಸಮಸ್ಯೆಯನ್ನು ಆಲಿಸಿದ ಜಿಲ್ಲಾಧಿಕಾರಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಅದರಂತೆ ಗುರುವಾರದಿಂದ ವೌಲ್ಯ ಮಾಪನ ಮಾಡಲು ಒಪ್ಪಿದ್ದಾರೆ.

ದ.ಕ.ಜಿಲ್ಲೆಯಲ್ಲಿ ಮೇ 27 ಮತ್ತು 29ರಂದು ಐದು ಮೌಲ್ಯಮಾಪನ ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಏಳು ವಿಷಯಗಳ ಉತ್ತರಪತ್ರಿಕೆಗಳ ಮೌಲ್ಯಮಾಪನ ಕಾರ್ಯವನ್ನು ಪ್ರಾರಂಭಿಸಲು ಪದವಿ ಪೂರ್ವ ಶಿಕ್ಷಣ ಇಲಾಖೆಯು ಆದೇಶಿಸಿತ್ತು. ಆದರೆ, ಪ್ರಾಚಾರ್ಯರ ಮತ್ತು ಉಪನ್ಯಾಸಕರ ಸಂಘವು ಕೋವಿಡ್-19ರ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಕೆಲವು ಸಮಸ್ಯೆಗಳನ್ನು ಬಗೆಹರಿಸದ ಹೊರತು ಮೌಲ್ಯಮಾಪನ ಮಾಡುವುದು ಸಾಧ್ಯವಿಲ್ಲ ಎಂದು ನಿರ್ದೇಶಕರ ಬಳಿ ಸ್ಪಷ್ಟಪಡಿಸಿತ್ತು. ಅದರಂತೆ ಮೇ 27ರಂದು ಜಿಲ್ಲೆಯಲ್ಲಿ ವೌಲ್ಯಮಾಪನ ನಡೆದಿರಲಿಲ್ಲ. ಈ ಮಧ್ಯೆ ಬುಧವಾರ ಪಪೂ ಶಿಕ್ಷಣ ಇಲಾಖೆಯ ನಿರ್ದೇಶಕರು ಹಾಗೂ ದ.ಕ. ಜಿಲ್ಲಾಡಳಿತವು ಸಂಘದ ಪ್ರಮುಖ ಬೇಡಿಕೆಗೆ ಸ್ಪಂದಿಸುವ ಭರವಸೆ ನೀಡಿದ್ದಾರೆ.

ಅಂದರೆ ಮೌಲ್ಯಮಾಪನ ಕೇಂದ್ರಗಳ ತರಗತಿ ಕೊಠಡಿಗಳನ್ನು ನಗರ ಪಾಲಿಕೆಯ ವತಿಯಿಂದ ಸಂಪೂರ್ಣ ಸ್ಯಾನಿಟೈಸೇಶನ್ ಮಾಡಿಕೊಡಲು ನಿರ್ದೇಶನಗಳನ್ನು ನೀಡಲಾಗಿದೆ. ಮೌಲ್ಯಮಾಪನ ಕೇಂದ್ರದಲ್ಲಿ ಸ್ಯಾಸಿಟೈಸರ್ ಹಾಗೂ ಥರ್ಮಲ್ ಸ್ಕ್ಯಾನರ್‌ನ್ನು ಜಿಲ್ಲಾಡಳಿತ ಒದಗಿಸಲಿದೆ. ಮೌಲ್ಯಮಾಪನ ಕೇಂದ್ರಗಳಲ್ಲಿ ಸಹಕರಿಸಲು ನಿಯೋಜಿಸಿರುವ ಖಾಯಂ ಅಲ್ಲದ ಡಿ ದರ್ಜೆ ನೌಕರರಿಗೆ ಪ್ರಯಾಣ ಹಾಗೂ ದಿನ ಭತ್ತೆಯಾಗಿ ದಿನವೊಂದಕ್ಕೆ ತಲಾ 500ರೂ.ನಂತೆ ನೀಡಲು ನಿರ್ದೇಶಕರು ಒಪ್ಪಿದ್ದಾರೆ. ಮೌಲ್ಯಮಾಪನ ಕೇಂದ್ರದ ಶೌಚಾಲಯ ಹಾಗೂ ಇನ್ನಿತರ ಸ್ವಚ್ಚತಾ ಕಾರ್ಯಗಳ ವೆಚ್ಚವನ್ನು ಭರಿಸಲು ನಿರ್ದೇಶಕರು ಕ್ರಮಕೈಗೊಂಡಿದ್ದಾರೆ. ಮೌಲ್ಯಮಾಪನ ಕೇಂದ್ರಕ್ಕೆ ಸ್ವಗ್ರಾಮದಿಂದ ಹತ್ತಿರದ ನಗರಗಳಿಂದ ಪ್ರಯಾಣಿಸಲು ಸರಕಾರಿ ಬಸ್ಸಿನ ವ್ಯವಸ್ಥೆಯನ್ನು ಜಿಲ್ಲಾಡಳಿತವು ಮಾಡಲಿದೆ. ಎಲ್ಲಾ ಮೌಲ್ಯಮಾಪನ ಕೇಂದ್ರಗಳಲ್ಲಿ ಊಟ ಮತ್ತು ಉಪಾಹಾರದ ವ್ಯವಸ್ಥೆಗಾಗಿ ಕ್ಯಾಂಟೀನ್ ತೆರೆಯಲು ಜಿಲ್ಲಾಡಳಿತವು ಒಪ್ಪಿಗೆ ನೀಡಿದೆ. ಮೌಲ್ಯಮಾಪನಕ್ಕೆ ಆದೇಶ ಬಾರದೆ ಇರುವ ಜಿಲ್ಲೆಯ ಎಲ್ಲಾ ಅರ್ಹ ಉಪನ್ಯಾಸಕರಿಗೆ ಮೌಲ್ಯಮಾಪನ ಆದೇಶವನ್ನು ನೀಡಲು ನಿರ್ದೇಶಕರು ಒಪ್ಪಿಗೆ ನೀಡಿದ್ದಾರೆ. ಹಾಗಾಗಿ ಮೇ 28 ಮತ್ತು 29ರಂದು ವೌಲ್ಯಮಾಪನ ಮಾಡುವುದಾಗಿ ದ.ಕ. ಜಿಲ್ಲಾ ಪ.ಪೂ.ಕಾ ಪ್ರಾಚಾರ್ಯರ ಸಂಘದ ಅಧ್ಯಕ್ಷ ಉಮೇಶ್ ಕರ್ಕೇರಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News