2019ರ ರೀತಿಯ ಪುಲ್ವಾಮ ಕಾರು ಬಾಂಬ್ ದಾಳಿ ಯತ್ನವನ್ನು ವಿಫಲಗೊಳಿಸಿದ ಭದ್ರತಾ ಪಡೆಗಳು

Update: 2020-05-28 04:47 GMT

 ಶ್ರೀನಗರ, ಮೇ 28: ರಾಜ್ಯದ ಪುಲ್ವಾಮ ಜಿಲ್ಲೆಯಲ್ಲಿ ಇಂದು ಬೆಳಗ್ಗೆ 20 ಕೆಜಿಗೂ ಅಧಿಕ ತೂಕದ ಸುಧಾರಿತ ಸ್ಫೋಟಕ ಸಾಧನ(ಐಇಡಿ)ಹೊತ್ತುಕೊಂಡು ಸಾಗುತ್ತಿದ್ದ ವಾಹನವನ್ನು ತಡೆದ ಭದ್ರತಾ ಪಡೆಗಳು 2019ರ ರೀತಿಯ ಭೀಕರ ಪುಲ್ವಾಮ ಕಾರು ದಾಳಿ ಯತ್ನವನ್ನು ವಿಫಲಗೊಳಿಸಿದೆ.

ನಕಲಿ ನೋಂದಣಿ ಸಂಖ್ಯೆಯನ್ನು ಹೊಂದಿದ್ದ ಕಾರನ್ನು ಇಂದು ಬೆಳಗ್ಗೆ ಚೆಕ್‌ಪಾಯಿಂಟ್‌ನಲ್ಲಿ ನಿಲ್ಲಿಸುವಂತೆ ಸೂಚನೆ ನೀಡಲಾಗಿತ್ತು. ಆದರೆ ಕಾರು ನಿಲ್ಲದೆ ವೇಗವಾಗಿ ಚಲಿಸಿ ಬ್ಯಾರಿಕೇಡ್ ತಳ್ಳಿಕೊಂಡು ಮುಂದೆ ಹೋಗಲು ಯತ್ನಿಸಿತ್ತು.

ಭದ್ರತಾ ಪಡೆಗಳು ಗುಂಡನ್ನು ಹಾರಿಸಿದ್ದು, ಈ ವೇಳೆ ಐಇಡಿ ತುಂಬಿದ್ದ ಕಾರನ್ನು ಬಿಟ್ಟು ಕಾರು ಚಾಲಕ ಪರಾರಿಯಾಗಲು ಸಫಲನಾಗಿದ್ದಾನೆ ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ವಿಜಯ ಕುಮಾರ್ ಹೇಳಿದ್ದಾರೆ.

ಸಂಭಾವ್ಯ ದಾಳಿಯ ಕುರಿತಂತೆ ನಾವು ಗುಪ್ತಚರ ಮಾಹಿತಿಯನ್ನು ಪಡೆದಿದ್ದೆವು. ಐಇಡಿ ತುಂಬಿದ್ದ ವಾಹನದ ಬರುವಿಕೆಗಾಗಿ ನಿನ್ನೆಯಿಂದ ಕಾಯುತ್ತಿದ್ದೆವು ಎಂದು ವಿಜಯ ಕುಮಾರ್ ಹೇಳಿದ್ದಾರೆ.

ಐಇಡಿಯನ್ನು ಜೋಪಾನವಾಗಿ ಕಾರಿನಿಂದ ಹೊರಗೆ ತೆಗೆಯಲಾಗಿದ್ದು, ಬಾಂಬ್ ನಿಷ್ಕ್ರೀಯ ದಳ ಇದನ್ನು ನಿಷ್ಕ್ರೀಯಗೊಳಿಸಿದೆ. ನಿಯಂತ್ರಿತ ಸ್ಫೋಟಕದಿಂದ ಬಾಂಬ್ ನಿಷ್ಕ್ರೀಯಗೊಳಿಸಿದ್ದರೂ ಹತ್ತಿರದ ಮನೆಗಳಿಗೆ ಹಾನಿಯಾಗಿದೆ ಎಂದರು ಮೂಲಗಳು ತಿಳಿಸಿವೆ.

ಸೇನೆ, ಪೊಲೀಸ್ ಹಾಗೂ ಅರೆ ಸೇನಾಪಡೆಗಳು ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಿದ್ದವು ಎಂದು ಕುಮಾರ್ ಹೇಳಿದ್ದಾರೆ.

2019ರ ಫೆಬ್ರವರಿಯಲ್ಲಿ ಪುಲ್ವಾಮ ಜಿಲ್ಲೆಯಲ್ಲಿ ಆತ್ಮಹತ್ಯಾ ಐಇಡಿ ದಾಳಿಯಿಂದ ಕೇಂದ್ರಿಯ ಮೀಸಲು ಪೊಲೀಸ್ ಪಡೆ(ಸಿಎಆರ್‌ಪಿಎಫ್)41 ಯೋಧರು ಮೃತಪಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News