ವಲಸೆ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ, ಆರೋಗ್ಯ ಸೌಲಭ್ಯ ಕಲ್ಪಿಸಲು ಮುಂದಾದ ಕೇಂದ್ರ

Update: 2020-05-28 05:33 GMT

ಹೊಸದಿಲ್ಲಿ : ದೇಶದಲ್ಲಿ ಜ್ವಲಂತವಾಗಿ ಕಾಡುತ್ತಿರುವ ವಲಸೆ ಕಾರ್ಮಿಕರ ಸಮಸ್ಯೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ 41 ವರ್ಷಗಳ ಬಳಿಕ ವಲಸೆ ಕಾರ್ಮಿಕರು ಪದಕ್ಕೆ ಮರು ವ್ಯಾಖ್ಯೆ ನೀಡಲು ಮುಂದಾಗಿದೆ. ಅಂತೆಯೇ ಅವರಿಗೆ ಸಾಮಾಜಿಕ ಭದ್ರತೆ ಹಾಗೂ ಸಿಬ್ಬಂದಿ ರಾಜ್ಯ ವಿಮಾ ನಿಗಮದಡಿ ಆರೋಗ್ಯ ಸೌಲಭ್ಯಗಳನ್ನು ಕಲ್ಪಿಸಲೂ ಮುಂದಾಗಿದೆ.

ದೇಶದ ಔಪಚಾರಿಕ ಹಾಗೂ ಅನೌಪಚಾರಿಕ ಆರ್ಥಿಕತೆಯಲ್ಲಿ ಲಕ್ಷಾಂತರ ಮಂದಿ ವಲಸೆ ಕಾರ್ಮಿಕರು ಲಾಕ್‌ಡೌನ್ ಅವಧಿಯಲ್ಲಿ ಅತಂತ್ರರಾದ ಹಿನ್ನೆಲೆಯಲ್ಲಿ ಈ ಎರಡು ಕ್ರಮಗಳಿಗೆ ಸರ್ಕಾರ ಮುಂದಾಗಿದೆ. ಕಾರ್ಮಿಕ ಸಚಿವಾಲಯ ಈ ಸಂಬಂಧ ಸಾಮಾಜಿಕ ಭದ್ರತಾ ಸಂಹಿತೆಯನ್ನು ಪರಿಷ್ಕರಿಸಿ ಕೇಂದ್ರ ಸಂಪುಟದ ಮುಂದೆ ತರಲಿದೆ. ಕೇಂದ್ರ ಸರ್ಕಾರ ಈ ವರ್ಷಾಂತ್ಯದ ಒಳಗಾಗಿ ಈ ಸಂಬಂಧ ಕಾನೂನು ಜಾರಿಗೆ ತರುವ ನಿರೀಕ್ಷೆ ಇದೆ.

ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್ ಈ ಕಾನೂನು ಚೌಕಟ್ಟನ್ನು ಬಲಗೊಳಿಸುವ ಪ್ರಕ್ರಿಯೆ ಆರಂಭವಾಗಿರುವುದನ್ನು ದೃಢಪಡಿಸಿದ್ದು, ಬಿಜೆಡಿ ಸಂಸದ ಭಾರ್ತುಹರಿ ಮೆಹ್ತಾಬ್ ನೇತೃತ್ವದ ಸಂಸದೀಯ ಸ್ಥಾಯಿ ಸಮಿತಿ ಈಗಾಗಲೇ ಕೆಲವೊಂದು ಪ್ರಸ್ತಾವನೆಗಳಿಗೆ ಒಪ್ಪಿಗೆ ನೀಡಿದೆ ಎಂದು ತಿಳಿದುಬಂದಿದೆ.

ವಲಸೆ ಕಾರ್ಮಿಕರಿಗೆ ಯಾವುದೇ ರೀತಿಯ ದಾಖಲೆಗಳು ಇಲ್ಲದಿರುವುದು ಲಾಕ್‌ಡೌನ್ ಸಂದರ್ಭದಲ್ಲಿ ಸರ್ಕಾರಕ್ಕೆ ತಲೆ ನೋವಾಗಿದ್ದು, ಈ ಕಾರಣದಿಂದ ವಲಸೆ ಕಾರ್ಮಿಕರ ವಿಚಾರದಲ್ಲಿ ಮರುಚಿಂತನೆಗೆ ಸರ್ಕಾರ ಮುಂದಾಗಿದೆ. ಪ್ರಸ್ತುತ ಜಾರಿಯಲ್ಲಿರುವ ಅಂತರ ರಾಜ್ಯ ವಲಸೆ ಕಾರ್ಮಿಕ ಕಾಯ್ದೆ-1979 ಐದಕ್ಕಿಂತ ಹೆಚ್ಚು ವಲಸೆ ಕಾರ್ಮಿಕರನ್ನು ಹೊಂದಿದ್ದ ಘಟಕಗಳಿಗೆ ಮಾತ್ರ ಅನ್ವಯಿಸುತ್ತದೆ. ಅಂದರೆ ಬಹುತೇಕ ವಲಸೆ ಕಾರ್ಮಿಕರು ಈ ಕಾಯ್ದೆ ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಪ್ರಸ್ತಾವಿತ ಕಾನೂನು ಚೌಕಟ್ಟಿನಲ್ಲಿ ನಿರ್ದಿಷ್ಟ ಮೊತ್ತ ದುಡಿಯವ ಪ್ರತಿಯೊಬ್ಬ ವಲಸೆ ಕಾರ್ಮಿಕರೂ ಬರಲಿದ್ದು, ಮನೆಕೆಲಸದ ಸಹಾಯಕರು ಕೂಡಾ ಸೇರುತ್ತಾರೆ. ಆಡಳಿತಾತ್ಮಕ ಆದೇಶವೊಂದರ ಮೂಲಕ ವೇತನ ಮಿತಿ ನಿಗದಿಪಡಿಸಲಾಗುತ್ತದೆ. ಈ ಕಾರ್ಮಿಕರು ದೇಶಾದ್ಯಂತ ಸಂಚರಿಸುವ ಸೌಲಭ್ಯವನ್ನು ಪಡೆಯಲಿದ್ದಾರೆ ಮತ್ತು ವರ್ಷಕ್ಕೆ ಒಂದು ಬಾರಿ ಮನೆಗೆ ಹೋಗಲು ಟಿಕೆಟ್ ದರವನ್ನು ಕೂಡಾ ಪಡೆಯಲಿದ್ದಾರೆ ಎಂದು ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News