ಹುಮ್ಯಾನಿಟಿ ಫೋರಮ್, ಇಂಡಿಯನ್ ಸೋಶಿಯಲ್ ಫೋರಮ್ ಕಾರ್ಯಾಚರಣೆ: ತವರು ತಲುಪಿದ ತೀವ್ರ ನಿಗಾ ಘಟಕದಲ್ಲಿದ್ದ ಹೃದ್ರೋಗಿ

Update: 2020-05-28 06:16 GMT

ದಮಾಮ್: ಹುಮ್ಯಾನಿಟಿ  ಫೋರಮ್ ಜುಬೈಲ್ ಮತ್ತು ಇಂಡಿಯನ್ ಸೋಶಿಯಲ್  ಫೋರಮ್ ಸೌದಿ ಅರೇಬಿಯಾದ ಕ್ಷಿಪ್ರ ಕಾರ್ಯಾಚರಣೆ ಯೊಂದಿಗೆ ತೀವ್ರ ಹೃದ್ರೋಗ ಸಮಸ್ಯೆ ಎದುರಿಸುತ್ತಿದ್ದ ದಕ್ಷಿಣ ಕನ್ನಡ ಮೂಲದ ಅನಿವಾಸಿಯೊಬ್ಬರನ್ನು ತವರಿಗೆ ತಲುಪಿಸಲಾಗಿದೆ.

ಕಡಬ ಮೂಲದ ಝಕರಿಯ್ಯಾ ಎಂಬವರು ಕಳೆದ ಹಲವು ದಿ‌ನಗಳಿಂದ ತೀವ್ರ ಹೃದ್ರೋಗ ಚಿಕಿತ್ಸೆಗಾಗಿ ಮದೀನಾದ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದರು ಮತ್ತು ಅವರ ಪರಿಸ್ಥಿತಿ ಚಿಂತಾಜನಕವಾಗಿತ್ತು. ಅವರನ್ನು ತವರಿಗೆ ಕೊಂಡೊಯ್ಯುವುದಕ್ಕಾಗಿ ಬಂಧುಮಿತ್ರರು ಹಲವು ಪ್ರಯತ್ನ ಮಾಡಿದ್ದು, ನಂತರ ಅವರ ಸಂಬಂಧಿ ಡಿ.ಕೆ.ಎಸ್.ಸಿ ಕಾರ್ಯಕರ್ತ ಸುರತ್ಕಲ್ ಅನ್ಸಾರಿ ಈ ಕುರಿತು ಇಂಡಿಯನ್ ಸೋಶಿಯಲ್  ಫೋರಮ್ ದಮಾಮ್ , ಕರ್ನಾಟಕ ಘಟಕದ ನಾಯಕರಿಗೆ ಮಾಹಿತಿ ನೀಡಿದ್ದರು.

ತಕ್ಷಣ ಕಾರ್ಯಪ್ರವೃತ್ತವಾದ ಇಂಡಿಯನ್ ಸೋಶಿಯಲ್  ಫೋರಮ್, ಈ ಕುರಿತು ಹುಮ್ಯಾನಿಟಿ  ಫೋರಮ್ ಸಂಪರ್ಕಿಸಿತು.‌ ಹುಮ್ಯಾನಿಟಿ  ಫೋರಮ್ ಅಧ್ಯಕ್ಷ ಝಕರಿಯಾ ಮುಝೈನ್ ಮತ್ತು ಆಸಿಫ್ ಅಮ್ಯಾಕೊ ಸಂಸದ ಸದಾನಂದ ಗೌಡ ಅವರೊಂದಿಗೆ ನಡೆಸಿದ ವೀಡಿಯೊ ಕಾನ್ಫರೆನ್ಸ್ ಸಭೆಯಲ್ಲಿ ರೋಗಿಯನ್ನು ತೋರಿಸಿ ವಾಪಸಾತಿಗೆ ಮನವಿ ಮಾಡಿದ್ದು, ಹುಮ್ಯಾನಿಟಿ  ಫೋರಮ್ ನ ಇತರ ಪದಾಧಿಕಾರಿಗಳೂ ಈ ಸಭೆಯಲ್ಲಿ ಭಾಗವಹಿಸಿದ್ದು, ಬೆಂಬಲವನ್ನು ಸೂಚಿಸಿದ್ದರು.

ಝಕರಿಯಾ ಮುಝೈನ್ ಮತ್ತು ಆಸಿಫ್ ಅಮ್ಯಾಕೊ ಅವರ ನಿರಂತರ ಪ್ರಯತ್ನದ ಭಾಗವಾಗಿ ಭಾರತೀಯ ರಾಯಭಾರಿ ಕಚೇರಿಯು ಮೇ 20 ರಂದು 12 ಗಂಟೆಗೆ ನಿಗದಿಯಾಗಿದ್ದ ದಮಾಮ್-ಬೆಂಗಳೂರು ವಿಮಾನದ ಮೂಲಕ ಅವರನ್ನು ತವರಿಗೆ ಕಳುಹಿಸಿಕೊಡಲು ಅವಕಾಶವನ್ನು ಮಾಡಿಕೊಡಲು ಒಪ್ಪಿಕೊಂಡಿತು.

ಕೊನೆಯ ಕ್ಷಣದಲ್ಲಾದ ಬೆಳವಣಿಗೆಯಿಂದ ತೀವ್ರ ನಿಗಾ ಘಟಕದಲ್ಲಿದ್ದ ಝಕರಿಯಾ ಕಡಬ ಅವರನ್ನು ಮದೀನಾದಿಂದ ದಮಾಮ್ ಗೆ ತಲುಪಿಸುವುದು ಕಷ್ಟದ ಕೆಲಸವಾಗಿತ್ತು. ಮದೀನಾದಲ್ಲಿ ಕೋವಿಡ್-19 ಸಮಸ್ಯೆ ಹೆಚ್ಚಿರುವುದರಿಂದ ಯಾವುದೇ ಆಸ್ಪತ್ರೆಗಳು ಆಂಬ್ಯುಲೆನ್ಸ್ ವ್ಯವಸ್ಥೆ ಒದಗಿಸಲು ನಿರಾಕರಿಸಿದವು. ಸಂಜೆ 5 ಗಂಟೆಯ ಬಳಿಕ ಸೌದಿ ಅರೇಬಿಯಾದಾದ್ಯಂತ ಕರ್ಫ಼್ಯೂ ಹೇರಲಾಗುತ್ತದೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಖಾಸಗಿ ವಾಹನದ ಮೂಲಕ 1200 ಕಿ.ಮೀ ದೂರದ ದಮಾಮ್ ವಿಮಾನ ನಿಲ್ದಾಣಕ್ಕೆ ತಲುಪಿಸಲು ಸೌದಿ ಅರೇಬಿಯಾದ ಸಂಚಾರಿ ಪೊಲೀಸ್ (ಮುರೂರ್) ನ  ಅನುಮೋದನಾ ಪತ್ರದ ಅಗತ್ಯವಿತ್ತು. ಆದರೆ ಸಂಚಾರಿ ಪೊಲೀಸ್ ಮೇ 19ರಂದು ಸಂಜೆಯವರೆಗೂ  ಕಾಯುವಂತೆ ಮಾಡಿ ಕೊನೆಗೆ ನಿರಾಕರಿಸಿತ್ತು. ಈ ಸಂದರ್ಭದಲ್ಲಿ ಇಂಡಿಯನ್ ಸೋಶಿಯಲ್  ಫೋರಮ್ ರಿಯಾದ್ ಮತ್ತು ಜಿದ್ದಾ ಘಟಕಗಳು ವೇಗವಾಗಿ ಕಾರ್ಯಾಚರಿಸಿ ಆಯಾ ನಗರಗಳಲ್ಲಿರುವ ರಾಯಭಾರಿ ಕಚೇರಿಯ ಅನುಮೋದನಾ ಪತ್ರವನ್ನು ಪಡೆದವು. ರಾತ್ರಿ 8 ಗಂಟೆಯ ಸುಮಾರಿಗೆ ಅನುಮೋದನಾ ಪತ್ರ ದೊರೆತಿತ್ತು.

ಐಎಸ್ಎಫ್ ಮದೀನಾ ಘಟಕವು ತನ್ನ ಸದಸ್ಯರ ಖಾಸಗಿ ವಾಹನದ ಮೂಲಕ ಹೃದ್ರೋಗಿ ಝಕರಿಯ್ಯಾರನ್ನು ಮದೀನಾದಿಂದ ದಮಾಮ್ ಗೆ ತಲುಪಿಸುವ ಏರ್ಪಾಡು ಮಾಡಿತು. ರಾತ್ರಿ 8 ಗಂಟೆಗೆ ಹೊರಟ ವಾಹನವು 1200 ಕಿ.ಮೀ ದೂರ ಕ್ರಮಿಸಿ ಬೆಳಗ್ಗೆ 9.30ಕ್ಕೆ ವಿಮಾನ ನಿಲ್ದಾಣ ತಲುಪಬೇಕಿದ್ದು, ಸಮಯಕ್ಕೆ ಸರಿಯಾಗಿ ತನ್ನ ಗುರಿಯನ್ನು ತಲುಪಿತು. ಸಂಘಟನೆಯ ದಮಾಮ್ ಘಟಕವು ವಿಮಾನ ನಿಲ್ದಾಣದಲ್ಲಿ ಅವರನ್ನು ಸ್ವೀಕರಿಸಿ ಪ್ರಯಾಣಕ್ಕೆ ಬೇಕಾದ ಏರ್ಪಾಡು ಮಾಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News