ಶ್ರಮಿಕ್ ರೈಲುಗಳಲ್ಲಿ ಕಳೆದ 48 ಗಂಟೆಗಳಲ್ಲಿ ಒಂಬತ್ತು ಕಾರ್ಮಿಕರು ಮೃತ್ಯು

Update: 2020-05-28 07:27 GMT

ಹೊಸದಿಲ್ಲಿ : ಕಳೆದೆರಡು ದಿನಗಳಲ್ಲಿ ಶ್ರಮಿಕ್ ವಿಶೇಷ ರೈಲುಗಳಲ್ಲಿ ಉತ್ತರ ಪ್ರದೇಶ ಹಾಗೂ ಬಿಹಾರಕ್ಕೆ ತೆರಳುತ್ತಿದ್ದ ಕನಿಷ್ಠ ಒಂಬತ್ತು ಮಂದಿ ವಲಸೆ ಕಾರ್ಮಿಕರು ಸಾವಿಗೀಡಾಗಿದ್ದಾರೆ. ಉತ್ತರ ಪ್ರದೇಶಕ್ಕೆ ತೆರಳುತ್ತಿದ್ದ ಐದು ಮಂದಿ ಕಾರ್ಮಿಕರು ಮೃತಪಟ್ಟರೆ, ನಾಲ್ಕು ಮಂದಿ ಬಿಹಾರದವರಾಗಿದ್ದಾರೆ. ಸಾವಿಗೀಡಾದವರಲ್ಲಿ ಹಲವರು ರೋಗಿಗಳಾಗಿದ್ದು ಇತರ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಮರಳುತ್ತಿದ್ದರು ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ.

ಬುಧವಾರ ಪುಟ್ಟ ಮಗುವೊಂದು ತನ್ನ ತಾಯಿ ಸತ್ತಿದ್ದಾಳೆಂದು ತಿಳಿಯದೆ ಆಕೆಯ ಕಳೇಬರಕ್ಕೆ ಹೊದಿಸಲಾಗಿದ್ದ ಚಾದರವನ್ನು ಎಳೆಯುತ್ತಾ ತಾಯಿಯನ್ನು ಎಬ್ಬಿಸಲು ಯತ್ನಿಸುತ್ತಿರುವ ಬಿಹಾರದ ಮುಝಫ್ಫರಪುರ್ ರೈಲ್ವೆ ನಿಲ್ದಾಣದಲ್ಲಿನ ದೃಶ್ಯವೊಂದು ವಲಸಿಗ ಕಾರ್ಮಿಕರ ಬವಣೆಯನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿತ್ತು. ಮಗುವಿನ ತಾಯಿ ಅರ್ವೀನಾ ಖಟೂನ್ (26) ಕಟಿಹಾರ್ ನಿವಾಸಿಯಾಗಿದ್ದು ಮೇ 23ರಂದು ತನ್ನ ಇಬ್ಬರು ಮಕ್ಕಳೊಂದಿಗೆ ಅಹ್ಮದಾಬಾದ್‍ನಲ್ಲಿ ರೈಲು ಹತ್ತಿದ್ದಳು. ಆಕೆಯ ಜತೆ ಆಕೆಯ ಸೋದರಿ ಹಾಗೂ ಮೈದುನ ಇದ್ದರು. ಆಕೆಗೆ ಆರೋಗ್ಯ ಸಮಸ್ಯೆ ಇಲ್ಲದೇ ಇದ್ದರೂ ರಕ್ತಹೀನತೆಯಿಂದ ಆಕೆ ಬಳಲುತ್ತಿದ್ದಳೆಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.

ಬಿಹಾರದ ಕಟಿಹಾರ್ ಎಂಬಲ್ಲಿನ ಉರೇಶ್ ಖಟೂನ್ ಎಂಬ ಮಹಿಳೆ ಸೂರತ್-ಪುರ್ಣಿಯಾ ರೈಲಿನಲ್ಲಿ ಮಲಗಿದಲ್ಲಿಯೇ  ಸಾವನ್ನಪ್ಪಿದ್ದಳು.  ಬಿಹಾರದ ದಾನಾಪುರ್ ಎಂಬಲ್ಲಿ  70 ವರ್ಷದ ಬಸಿಷ್ಠ್ ಮಹತೋ ಎಂಬವರ ಮೃತದೇಹ ಮುಂಬೈ-ದರ್ಭಾಂಗ ಶ್ರಮಿಕ್ ರೈಲಿನಲ್ಲಿ ಪತ್ತೆಯಾಗಿತ್ತು. ಅವರು ಹೃದ್ರೋಗಿ ಎಂದು ತಿಳಿದು ಬಂದಿದೆ.

ಬುಧವಾರ ವಾರಣಾಸಿಯ ಮಂಡುವಡಿಹ್ ನಿಲ್ದಾಣ ತಲುಪಿದ ರೈಲಿನಲ್ಲಿ ಜೌನ್ಪುರ್ ಎಂಬಲ್ಲಿನ ಒಬ್ಬ ವ್ಯಕ್ತಿ ಹಾಗೂ ಆಝಂಘರ್ ಎಂಬಲ್ಲಿನ ನಿವಾಸಿ ಮೃತಪಟ್ಟಿದ್ದರು. ಅವರಲ್ಲೊಬ್ಬ ಅಂಗವಿಕಲನಾಗಿದ್ದರೆ ಇನ್ನೊಬ್ಬನಿಗೆ ಹಲವಾರು ಆರೋಗ್ಯ ಸಮಸ್ಯೆಗಳಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.

ಬಿಹಾರದ ಸರನ್ ಎಂಬಲ್ಲಿನ 58 ವರ್ಷದ ಭೂಷಣ್ ಸಿಂಗ್ ಎಂಬಾತ ಸೂರತ್‍ನ ಬಲ್ಲಿಯಾ ನಿಲ್ದಾಣ ತಲುಪಿದ ರೈಲಿನಲ್ಲಿ ಮೃತಪಟ್ಟಿದ್ದರೆ,  ಝಾನ್ಸಿ-ಗೋರಖಪುರ್ ರೈಲು ಕಾನ್ಪುರ್ ತಲುಪಿದಾಗ ಅದರಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ವ್ಯಕ್ತಿಗಳು ಮೃತಪಟ್ಟಿದ್ದರು.

ಸೋಮವಾರ  ದಿಲ್ಲಿಯಿಂದ ಪ್ರಯಾಣಿಸುತ್ತಿದ್ದ  ನಾಲ್ಕು ವರ್ಷದ ಮುಹಮ್ಮದ್ ಇರ್ಷಾದ್ ಬಿಸಿಲಿನ ಧಗೆ ಹಾಗೂ ಹಸಿವಿನಿಂದ  ಸಾವನ್ನಪ್ಪಿದ್ದಾನೆ. ನೇಪಾಳದ ಜನಕ್ಪುರ್ ಎಂಬಲ್ಲಿಯ ಶೋಭನ್ ಕುಮಾರ್ ಎಂಬ ವ್ಯಕ್ತಿ  ಉತ್ತರ ಪ್ರದೇಶದ ಭಲ್ಲಿಯಾ ಪಟ್ಟಣವನ್ನು ಮಡಗಾಂವ್-ದರ್ಬಾಂಘ ರೈಲಿನಲ್ಲಿ ಮಂಗಳವಾರ ಸಂಜೆ ತಲುಪಿದ ಕೂಡಲೇ ಅಸ್ವಸ್ಥನಾದ ಕಾರಣ ಆಸ್ಪತ್ರೆಗೆ ದಾಖಲಿಸಲ್ಪಟ್ಟರೂ ಬುಧವಾರ ಮೃತಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News