ಉಡುಪಿಯಲ್ಲಿ ಮತ್ತೆ 27 ಕೊರೋನ ಪಾಸಿಟಿವ್

Update: 2020-05-28 08:05 GMT

ಉಡುಪಿ, ಮೇ 28: ಕೊರೋನ ವೈರಸ್ ಸೋಂಕಿನ ಪ್ರಕರಣಕ್ಕೆ ಉಡುಪಿ ಜಿಲ್ಲೆಯಲ್ಲಿ ಸದ್ಯಕ್ಕೆ ಬ್ರೇಕ್ ಬೀಳುವಂತೆ ಕಾಣುತ್ತಿಲ್ಲ. ಗುರುವಾರ ಮಧ್ಯಾಹ್ನ ಪ್ರಕಟವಾದ ರಾಜ್ಯ ಆರೋಗ್ಯ ಇಲಾಖೆಯ ಪಟ್ಟಿಯಲ್ಲಿ ಉಡುಪಿ ಜಿಲ್ಲೆಯ ಒಟ್ಟು 27 ಮಂದಿಯಲ್ಲಿ ಕೊರೋನ ಪಾಸಿಟಿವ್ ಅಂಶ ಕಂಡುಬಂದಿದೆ.

ಆರು ವರ್ಷದ ಹೆಣ್ಣು ಮಗು ಸೇರಿದಂತೆ ಜಿಲ್ಲೆಗೆ ಮಹಾರಾಷ್ಟ್ರದಿಂದ ಬಂದ 24 ಮಂದಿ ಕೊರೋನ ಸೋಂಕಿಗೆ ಪಾಸಿಟಿವ್ ಆಗಿದ್ದರೆ, ತೆಲಂಗಾಣದಿಂದ ಬಂದ ಇಬ್ಬರು ಹಾಗೂ ಕೇರಳದಿಂದ ಬಂದ ಒಬ್ಬರು ಇದೇ ಸಾಲಿನಲ್ಲಿದ್ದಾರೆ. ಅಪರಾಹ್ನ 12ಗಂಟೆಯವರೆಗೆ ಬಂದ ಸೋಂಕಿತರ ಪಟ್ಟಿಯಲ್ಲಿ ಪುರುಷರು 18 ಮಂದಿ, ಮಹಿಳೆಯರು ಎಂಟು ಮಂದಿ ಹಾಗೂ ಒಬ್ಬ ಬಾಲಕಿ ಸೇರಿದ್ದಾರೆ.

46 ವರ್ಷ, 30, 44, 38, 50, 34, 43, 19, 48, 41, 34, 34, 32, 39, 32, 48, 28 ಹಾಗೂ 27 ವರ್ಷ ಪ್ರಾಯದ ಪುರುಷರಲ್ಲಿ, 31, 24, 33, 30, 59, 29, 34, ಹಾಗೂ 34 ವರ್ಷ ಪ್ರಾಯದ ಮಹಿಳೆಯರಲ್ಲಿ ಅಲ್ಲದೇ 6 ವರ್ಷದ ಬಾಲಕಿಯಲ್ಲಿ ಸೋಂಕು ಪತ್ತೆಯಾಗಿದೆ.

ಅಧಿಕಾಂಶ ಮಂದಿ ಮನೆಗೆ

ಈ ಮೂಲಕ ಉಡುಪಿ ಜಿಲ್ಲೆಯಲ್ಲಿ ಈವರೆಗೆ ಪಾಸಿಟಿವ್ ಬಂದವರ ಸಂಖ್ಯೆ 147ಕ್ಕೇರಿದೆ. ಬುಧವಾರ ರಾಜ್ಯ ಸರಕಾರ ಎಲ್ಲಾ ಜಿಲ್ಲಾಡಳಿತಗಳಿಗೆ ಕಳುಹಿಸಿ ರುವ ಹೊಸ ಸುತ್ತೋಲೆ ಪ್ರಕಾರ ಈಗ ಹೊರದೇಶ, ಹೊರರಾಜ್ಯಗಳಿಂದ ಬಂದು ಜಿಲ್ಲೆಯ ವಿವಿಧ ಕ್ವಾರಂಟೈನ್ ಕೇಂದ್ರಗಳಲ್ಲಿರುವ ಎಲ್ಲರೂ ಏಳು ದಿನಗಳ ವಾಸ್ತವ್ಯವನ್ನು ಪೂರ್ಣಗೊಳಿಸಿದ ಬಳಿಕ ಅವರಲ್ಲಿ ಯಾವುದೇ ಕೊರೋನ ರೋಗಲಕ್ಷಣಗಳು ಕಾಣಿಸಿಕೊಳ್ಳದೇ ಇದ್ದರೆ ಅವರನ್ನು ಮನೆಗೆ ಕಳುಹಿಸಬಹುದಾಗಿದೆ.

ಕಳುಹಿಸುವ ಮುನ್ನ ಎಲ್ಲರ ಮೆಡಿಕಲ್ ಚೆಕ್‌ಅಪ್, ಥರ್ಮಲ್ ಸ್ಕೃಿನಿಂಗ್ ನಡೆಸಬೇಕು. 60ವರ್ಷ ಮೇಲ್ಪಟ್ಟ ಎಲ್ಲಾ ಹಿರಿಯ ನಾಗರಿಕರನ್ನು ಹೋಮ್ ಕ್ವಾರಂಟೈನ್‌ಗೆ ಕಳುಹಿಸುವ ಮುನ್ನ ಅವರ ಸಂಪೂರ್ಣ ಕ್ಲಿನಿಕಲ್ ಟೆಸ್ಟ್ ನಡೆಸಬೇಕು. ಕಳುಹಿಸುವ ಮುನ್ನ ಅವರ ಕೈಗೆ ಕೊರೋನ ಸ್ಟಾಂಪ್ ಹಾಕಿರಬೇಕು. ಎಲ್ಲರೂ ಕಡ್ಡಾಯವಾಗಿ ಒಂದು ವಾರ ಹೋಮ್ ಕ್ವಾರಂಟೈನ್ ನಲ್ಲಿರಬೇಕು ಹಾಗೂ ಕ್ವಾರಂಟೈನ್ ವಾಚ್ ಆ್ಯಪ್‌ನಲ್ಲಿ ಹೆಸರು ನೊಂದಾಯಿಸರಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಈ ಮಾನದಂಡದ ಪ್ರಕಾರ, ಈಗ ಜಿಲ್ಲೆಯ ವಿವಿಧ ಸ್ಥಾಂಸ್ಥಿಕ ಕ್ಯಾರಂಟೈನ್ ನಲ್ಲಿರುವ 8000ಕ್ಕೂ ಅಧಿಕ ಮಂದಿಯಲ್ಲಿ ಬಹುಸಂಖ್ಯಾತರು ಇಂದೇ ಮನೆಗೆ ತೆರಳುವ ಸಾಧ್ಯತೆ ಇದೆ ಎಂದು ಅಧಿಕೃತ ಮೂಲವೊಂದು ತಿಳಿಸಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News