​ಹಡಗಿನಲ್ಲಿ ಹಳೆಬಂದರು ತಲುಪಿದ 19 ಕಾರ್ಮಿಕರು

Update: 2020-05-28 07:42 GMT

ಮಂಗಳೂರು, ಮೇ 28: ಕೊರೋನ ಲಾಕ್‌ಡೌನ್‌ನಿಂದ ಲಕ್ಷದ್ವೀಪದ ವಿವಿಧ ದ್ವೀಪಗಳಲ್ಲಿ ಬಾಕಿಯಾಗಿದ್ದ ಮಂಗಳೂರು ಮೂಲದ 19 ಮಂದಿ ಕಾರ್ಮಿಕರು ಇಂದು ‘ಅಮಿನ್‌ದಿವಿ’ ಹಡಗಿನ ಮೂಲಕ ಹಳೆ ಬಂದರು ಲಕ್ಷದ್ವೀಪ ಜೆಟ್ಟಿಯಲ್ಲಿ ಬಂದಿಳಿದರು.

ಕಾರ್ಮಿಕರಾಗಿ ಲಕ್ಷದ್ವೀಪದ ವಿವಿಧ ದ್ವೀಪಗಳಲ್ಲಿ ದುಡಿಯುತ್ತಿದ್ದ ಈ 19 ಮಂದಿ ಕಾರ್ಮಿಕರು ಲಾಕ್‌ಡೌನ್‌ನಿಂದಾಗಿ ಸುಮಾರು ಎರಡು ತಿಂಗಳಿನಿಂದ ತಮ್ಮ ಊರುಗಳಿಗೆ ವಾಪಾಸಾಗಲು ಸಾಧ್ಯವಾಗಿರಲಿಲ್ಲ. ಇದೀಗ ಲಕ್ಷದ್ವೀಪ ಸರಕಾರ ಕರ್ನಾಟಕ ಸರಕಾರದ ಅನುಮತಿ ಯೊಂದಿಗೆ ಅಗತ್ಯ ಪ್ರಕ್ರಿಯೆಗಳನ್ನು ಪೂರೈಸಿ ಲಕ್ಷದ್ವೀಪದ ‘ಅಮಿನ್‌ದಿವಿ’ ಹಡಗಿನ ಮೂಲಕ ಕಾರ್ಮಿಕರನ್ನು ಕಳುಹಿಸಿಕೊಟ್ಟಿದೆ.

ಮೇಯರ್ ದಿವಾಕರ ಪಾಂಡೇಶ್ವರ, ಶಾಸಕರಾದ ವೇದವ್ಯಾಸ ಕಾಮತ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಮಾಜಿ ಮೇಯರ್ ಅಶ್ರಫ್, ಸ್ಥಳೀಯ ಕಾರ್ಪೊರೇಟರ್ ಲತೀಫ್, ಕೊರೋನ ನಿಗ್ರಹದಳದ ಅಧಿಕಾರಿಗಳು, ಹಳೆ ಬಂದರಿನ ಲಕ್ಷದ್ವೀಪ ಜೆಟ್ಟಿಯಲ್ಲಿ ಬಂದರು ಸಂರಕ್ಷಣಾಧಿಕಾರಿ ಮುಹಮ್ಮದ್ ಗೌಸ್, ಹಳೆ ಬಂದರು ಬಳಕೆದಾರರ ಸಂಘಟನೆಯ ಪದಾಧಿಕಾರಿಗಳು, ಕಾರ್ಮಿಕರ ಕುಟುಂಬದ ಸದಸ್ಯರು ಉಪಸ್ಥಿತರಿದ್ದು, ಕಾರ್ಮಿಕರ್ನು ಆತ್ಮೀಯವಾಗಿ ಬರಮಾಡಿಕೊಂಡರು.

ಹಡಗು ದಡಕ್ಕೆ ಆಗಮಿಸಿದ ಬಳಿಕ ಹಡಗಿನಲ್ಲಿಯೇ ಅವರ ಆರೋಗ್ಯ ತಪಾಸಣೆ ನಡೆಸಲಾಯಿತು. ಸ್ಕ್ರೀನಿಂಗ್ ಬಳಿಕ ಅವರನ್ನು ಹಡಗಿನಿಂದ ಇಳಿಯಲು ಅವಕಾಶ ನೀಡಲಾಯಿತು.

ಮಕ್ಕಳಿಂದ ಹೂವಿನ ಸ್ವಾಗತ

ಲಾಕ್‌ಡೌನ್‌ನಿಂದ ಊರಿಗೆ ಮರಳಲಾಗದೆ ಅತಂತ್ರರಾಗಿ ಲಕ್ಷದ್ವೀಪದಲ್ಲೇ ಬಾಕಿಯಾಗಿದ್ದ ಕಾರ್ಮಿಕರ ಮಕ್ಕಳು ಕೂಡಾ ಇಂದು ಹಳೆ ಬಂದರು ತೀರದಲ್ಲಿ ತಮ್ಮ ತಂದೆಯರನ್ನು ಬರಮಾಡಿಕೊಳ್ಳಲು ಕಾತುರರಾಗಿದ್ದರು. ಹಡಗಿನಿಂದ ಅವರು ಇಳಿಯುತ್ತಿದ್ದಂತೆಯೇ ಮಕ್ಕಳು ತಮ್ಮ ಕೈಯ್ಯಲ್ಲಿದ್ದ ಹೂವುಗಳನ್ನು ನೀಡಿ ಆತ್ಮೀಯವಾಗಿ ಬರಮಾಡಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News