ಮಂಗಳೂರು: ಸಿಟಿ ಬಸ್ ‌ಗಳಲ್ಲಿ ಕ್ಯಾಶ್‌ಲೆಸ್ ಪ್ರಯಾಣಕ್ಕೆ ವ್ಯವಸ್ಥೆ

Update: 2020-05-28 08:33 GMT
ಸಾಂದರ್ಭಿಕ ಚಿತ್ರ

ಮಂಗಳೂರು, ಮೇ 28: ನಗರದಲ್ಲಿ ಓಡಾಡುವ ಖಾಸಗಿ ಸಿಟಿ ಬಸ್‌ಗಳಲ್ಲಿ ಪ್ರಯಾಣಿಸಲು ಇನ್ನು ಟಿಕೆಟ್‌ಗೆ ಹಣ ನೀಡುವ ಬದಲು ಸ್ಮಾರ್ಟ್‌ಕಾರ್ಡ್ ಬಳಸಬಹುದಾಗಿದೆ. ಸ್ಮಾರ್ಟ್ ಕಾರ್ಡ್ ವ್ಯವಸ್ಥೆಯನ್ನು ನಗರದ ಖಾಸಗಿ ಬಸ್ ‌ಗಳಲ್ಲಿ ಪರಿಚಯಿಸಲಾಗುತ್ತಿದ್ದು, ಕಾರ್ಡ್ ಖಾತೆಯಲ್ಲಿ ಹಣವಿದ್ದಲ್ಲಿ ಕಾರ್ಡ್ ನೀಡಿ ಪ್ರಯಾಣ ಮಾಡಬಹುದು.

ನಗರದಲ್ಲಿ ಕಾರ್ಯಾಚರಣೆ ನಡೆಸುವ ಎಲ್ಲಾ ಸಿಟಿ ಬಸ್ ಗಳಲ್ಲಿ ಸ್ಮಾರ್ಟ್ ಕಾರ್ಡ್ ವ್ಯವಸ್ಥೆ ಜಾರಿಗೆ ತರಲು ಚಲೋ ಸಂಸ್ಥೆ ಸಹಯೋಗದೊಂದಿಗೆ ಸಿಟಿ ಬಸ್ ಮಾಲಕರ ಸಂಘ ನಿರ್ಧರಿಸಿದೆ. ಬಸ್ ಕಾರ್ಯಚರಣೆ ಆರಂಭಿಸಿದ ಬಳಿಕ ಕೆಲವೇ ದಿನಗಳಲ್ಲಿ ಈ ನೂತನ ವ್ಯವಸ್ಥೆ ಜಾರಿಗೆ ಬರಲಿದೆ. ಡಿಜಿಟಲ್ ವ್ಯವಸ್ಥೆಗೆ ಪೂರಕವಾಗಿ ಈ ನೂತನ ಯೋಜನೆ ಅನುಷ್ಠಾನಗೊಳ್ಳಲಿದೆ.

ಮಂಗಳೂರು ನಗರದಲ್ಲಿ ಸುಮಾರು 350ರಷ್ಟು ಸಿಟಿ ಬಸ್‌ಗಳು ವಿವಿಧ ರೂಟ್‌ಗಳಲ್ಲಿ ಸಂಚರಿಸುತ್ತದೆ. ಬೆಳಗ್ಗೆ 6 ಗಂಟೆಗೆ ಆರಂಭವಾದ ಸೇವೆ ರಾತ್ರಿ 10 ಗಂಟೆಯವರೆಗೆ ಇರುತ್ತದೆ.

ಹೊಸತಾಗಿ ಸ್ಮಾರ್ಟ್ ಕಾರ್ಡ್ ಪಡೆಯಲು ಪ್ರಯಾಣಿಕರು ಯಾವುದೇ ರೀತಿಯ ಹೆಚ್ಚುವರಿ ಶುಲ್ಕ ಪಾವತಿಸಬೇಕೆಂದಿಲ್ಲ. ನಗರದಲ್ಲಿ ಸ್ಟೇಟ್‌ಬ್ಯಾಂಕ್ ಬಸ್ ನಿಲ್ದಾಣ ಸೇರಿದಂತೆ ಔಟ್‌ಲೆಟ್ ಮಾಡಲಾಗಿದ್ದು, ಅಲ್ಲಿ, ಪ್ರಯಾಣಿಕರು ಆಧಾರ್‌ಕಾರ್ಡ್ ಮಾಹಿತಿ ನೀಡಿ ಕಾರ್ಡ್ ಪಡೆಯಬಹುದು. ಜೂನ್ 1ರಿಂದ ಬಸ್ ಸಂಚಾರ ಆರಂಭವಾದ ಬಳಿಕ ನಗರದ ವಿವಿಧ ಕಡೆಗಳಲ್ಲಿ ಸ್ಮಾರ್ಟ್ ಕಾರ್ಡ್ ಸೆಂಟರ್ ಆರಂಭಿಸಲು ಸಿಟಿ ಬಸ್ ಮಾಲಕರ ಸಂಘ ತೀರ್ಮಾನಿಸಿದೆ. ಇದೇ ಕಾರಣಕ್ಕೆ ಸದ್ಯ 10 ಸಾವಿರಕ್ಕೂ ಮಿಕ್ಕಿ ಕಾರ್ಡ್‌ಗಳನ್ನು ಈಗಾಗಲೇ ಮುದ್ರಣ ಮಾಡಲಾಗಿದೆ.

ಪ್ರಯಾಣಿಕರು ಉಚಿತವಾಗಿ ಪಡೆದ ಕಾರ್ಡಿಗೆ ಟಾಪ್‌ಅಪ್ ರೀಚಾರ್ಜ್ ಮಾಡಿಸಿಕೊಳ್ಳಬೇಕಾಗುತ್ತದೆ. ಅದಕ್ಕೆಂದು ಮುಂದಿನ ದಿನಗಳಲ್ಲಿ ಅಲ್ಲಲ್ಲಿ ಸೆಂಟರ್ ತೆರಯಲು ತೀರ್ಮಾನಿಸಲಾಗಿದೆ. ಅಲ್ಲದೆ, ಮೊಬೈಲ್ ರೀಚಾರ್ಜ್ ಅಂಗಡಿಗಳಲ್ಲೂ ಈ ವ್ಯವಸ್ಥೆ ಒದಗಿಸಲು ಚಿಂತನೆ ನಡೆಸಲಾಗಿದೆ. ಈ ಕಾರ್ಡ್‌ಗೆ ಕನಿಷ್ಠ ಎಷ್ಟು ರೀಚಾರ್ಜ್ ಮಾಡಬೇಕು ಎಂಬುವುದರ ಬಗ್ಗೆ ಸದ್ಯದಲ್ಲಿಯೇ ನಿರ್ಧಾರವಾಗಲಿದೆ.

ಪ್ರಯಾಣಿಕರು ಬಸ್‌ನಲ್ಲಿ ಸಂಚರಿಸುವಾಗ ನಿರ್ವಾಹಕನಿಗೆ ಹಣದ ಬದಲು ಈ ಕಾರ್ಡ್ ನೀಡಿದರಾಯಿತು. ಪ್ರಯಾಣಿಕ ಹತ್ತಿದ ಮತ್ತು ಇಳಿಯುವ ಸ್ಥಳವನ್ನು ನಿರ್ವಾಹಕ ಇಟಿಎಂನಲ್ಲಿ ನಮೂದು ಮಾಡಿ ಈ ಯಂತ್ರಕ್ಕೆ ಈ ಕಾರ್ಡ್ ಮುಟ್ಟಿಸಿದರೆ ಕಾರ್ಡ್ ಖಾತೆಯಿಂದ ಹಣ ಕಡಿತಗೊಳ್ಳುತ್ತದೆ. ಇದರಿಂದಾಗಿ ಪ್ರಯಾಣಿಕರಿಗೆ ನಗದು ಅಥವಾ ಚಿಲ್ಲರೆ ಸಮಸ್ಯೆ ಉದ್ಭವಿಸುವುದಿಲ್ಲ.

ಸ್ಮಾರ್ಟ್‌ಕಾರ್ಡ್ ಅಂದರೆ ನಗದು ರಹಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸುವುದಾಗಿದೆ. ಇದು ಸಂಪೂರ್ಟ ಡಿಜಟಲ್. ಸಿಟಿ ಬಸ್‌ನಲ್ಲಿ ಪ್ರಯಾಣಿಕರಿಗೆ ಉಚಿತವಾಗಿ ಸ್ಮಾರ್ಟ್‌ಕಾರ್ಡ್ ನೀಡಲಾಗುತ್ತದೆ. ಬಳಿಕ ಪ್ರಯಾಣಿಕರು ಟಾಪ್‌ಅಪ್ ರೀಚಾರ್ಜ್ ಮಾಡಿಸಿಕೊಂಡರಾಯಿತು. ಸದ್ಯ ಸಿಟಿ ಬಸ್ ಎಲ್ಲ ನಿರ್ವಾಹಕರಲ್ಲಿ ಇಟಿಎಂ ಟಿಕೆಟ್ ಮೆಶಿನ್ ಇದ್ದು, ಸ್ಮಾರ್ಟ್ ಕಾರ್ಡ್ ಜಾರಿಯಾದ ಬಳಿಕ ಅದನ್ನು ಇಟಿಎಂನಲ್ಲಿ ಮುಟ್ಟಿಸಿದರಾಯಿತು. ಆಗ ಪ್ರಯಾಣ ದರವು ಪ್ರಯಾಣಿಕನ ಕಾರ್ಡ್‌ನಿಂದ ಕಡಿತವಾಗುತ್ತದೆ.

ಈಗಾಗಲೇ ಆ್ಯಪ್ ವ್ಯವಸ್ಥೆ ಜಾರಿ

ಮಂಗಳೂರು ನಗರದಲ್ಲಿ ಸಂಚರಿಸುವ ಸಿಟಿ ಬಸ್‌ಗಳಲ್ಲಿ ‘ಚಲೋ’ ಎಂಬ ಹೆಸರಿನ ಆ್ಯಪ್ ಮುಖೆನ ಬಸ್‌ನ ಲೈವ್ ಟ್ರ್ಯಾಕಿಂಗ್ ವ್ಯವಸ್ಥೆ ಇದ್ದು, ಮೊಬೈಲ್ ಜಿಪಿಎಸ್ ಆಧಾರದ ಮೇಲೆ ಬಸ್‌ಗಳ ನಿಖರ ಮಾಹಿತಿಯನ್ನು ಮೊಬೈಲ್‌ನಲ್ಲಿ ತಿಳಿಯಬಹುದಾಗಿದೆ. ಮ್ಯಾಪ್‌ನಲ್ಲಿ ಟ್ಯಾಪ್ ಮಾಡಿ ಸದ್ಯ ಬಸ್ ಎಲ್ಲಿದೆ ಎಂಬುವುದನ್ನು ತಿಳಿಯಲು ಸಾಧ್ಯ. ಅಷ್ಟೇ ಅಲ್ಲ, ಒಂದು ಕಡೆಯಿಂದ ಮತ್ತೊಂದೆಡೆ ಚಲಿಸಲು ಎಷ್ಟು ಸಮಯ ಬೇಕು? ಮುಂದಿನ ನಿಲ್ದಾಣ ಸೇರಿದಂತೆ ಹಲವು ಮಾಹಿತಿ ಆ್ಯಪ್‌ನಲ್ಲಿ ಲಭ್ಯವಿದೆ.

''ಡಿಜಿಟಿಲ್ ವ್ಯವಸ್ಥೆಗೆ ಪೂರಕವಾಗಿ ಮಂಗಳೂರು ನಗರದಲ್ಲಿ ಸಂಚರಿಸುವ ಸಿಟಿ ಬಸ್‌ಗಳಲ್ಲಿ ಸ್ಮಾರ್ಟ್‌ಕಾರ್ಡ್ ವ್ಯವಸ್ಥೆಯನ್ನು ಜಾರಿಗೆ ತರಲಿ ದ್ದೇವೆ. ಬಸ್ ಸಂಚಾರ ಆರಂಭಗೊಂಡ ವಾರದಲ್ಲಿಯೇ ಈ ವ್ಯವಸ್ಥೆಯನ್ನು ಪ್ರಯಾಣಿಕರಿಗೆ ಪರಿಚಯಿಸಲಿದ್ದೇವೆ.

- ದಿಲ್‌ರಾಜ್ ಆಳ್ವ, ಸಿಟಿ ಬಸ್ ಮಾಲಕರ ಸಂಘದ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News