ದ.ಕ. ಜಿ.ಪಂ. ಮಾಜಿ ಸದಸ್ಯ ಕೇಶವ ಗೌಡ ಬಜತ್ತೂರು ನಿಧನ

Update: 2020-05-28 10:04 GMT

ಉಪ್ಪಿನಂಗಡಿ : ಬಿಜೆಪಿ ನಾಯಕ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಕೇಶವ ಗೌಡ ಬಜತ್ತೂರು ಇಂದು ಬೆಳಗ್ಗೆ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 47 ವರ್ಷ ವಯಸ್ಸಾಗಿತ್ತು.

ಬಜತ್ತೂರು ಗ್ರಾಮದ ಕಾಂಚನದ ಪುಯಿಲದವರಾದ ಇವರು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತನಾಗಿದ್ದು, ಉತ್ತಮ ವಾಗ್ಮಿಯಾಗಿದ್ದರು. ಎಲ್ಲರೊಂದಿಗೆ ಉತ್ತಮವಾಗಿ ಬೆರೆಯುತ್ತಿದ ಇವರು ಬಳಿಕ ಬಿಜೆಪಿಯಲ್ಲಿ ನಾಯಕನಾಗಿ ಬೆಳೆದಿದ್ದರು. ಬಜತ್ತೂರು ಗ್ರಾ.ಪಂ. ಅಧ್ಯಕ್ಷನಾಗಿ, ಉಪ್ಪಿನಂಗಡಿ ಕ್ಷೇತ್ರದ ಜಿ.ಪಂ. ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲದ ನಿಕಟಪೂರ್ವ ಕಾರ್ಯದರ್ಶಿಯಾಗಿದ್ದ ಇವರು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರಲ್ಲದೆ, ರಾಜಕೀಯವಾಗಿ, ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು. ಕಳೆದ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಸಂಭಾವ್ಯ ಅಭ್ಯರ್ಥಿಗಳಲ್ಲಿ ಇವರು ಒಬ್ಬರಾಗಿದ್ದರು. ಬಳಿಕ ಕಾಡಿದ ಅನಾರೋಗ್ಯದಿಂದ ಸಾಮಾಜಿಕ ಚಟುವಟಿಕೆಗಳಿಂದ ಹಿಂದೆ ಸರಿದಿದ್ದರು. ಕಳೆದ 3-4 ದಿನಗಳಿಂದ ತೀವ್ರ ಅನಾರೋಗ್ಯ ಕಾಣಿಸಿಕೊಂಡ ಅವರನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ.

ಮೃತರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News