‘ನೀವು ಟ್ರಂಪ್ ರನ್ನು ಓಲೈಸುತ್ತಿದ್ದೀರಿ’: ನೇರ ಪ್ರಸಾರದಲ್ಲಿ ಸಹೋದ್ಯೋಗಿಗೆ ತರಾಟೆಗೈದ ಸಿಎನ್ ಬಿಸಿ ಆ್ಯಂಕರ್ !

Update: 2020-05-28 11:23 GMT

ನ್ಯೂಯಾರ್ಕ್ : ಕೋವಿಡ್-19 ಹತ್ತಿಕ್ಕುವ ಸಲುವಾಗಿ ಹೇರಲಾಗಿರುವ ಲಾಕ್‍ಡೌನ್ ಹಾಗೂ ಆದರಿಂದ ಅಮೆರಿಕಾದ ಆರ್ಥಿಕತೆಯ ಮೇಲೆ ಬೀರಿರುವ ಪರಿಣಾಮಗಳ ಕುರಿತ ಚರ್ಚೆ ವೇಳೆ ಸಿಎನ್‍ಬಿಸಿ ವಾಹಿನಿಯ ಇಬ್ಬರು ನ್ಯೂಸ್ ಶೋ ಆ್ಯಂಕರ್‍ಗಳು  ಕಾರ್ಯಕ್ರಮ ಪ್ರಸಾರ ಮುಂದುವರಿದಿರುವಂತೆಯೇ ವಾಕ್ಸಮರದಲ್ಲಿ ತೊಡಗಿದ ಘಟನೆ ಸಾಕಷ್ಟು ಕುತೂಹಲ ಕೆರಳಿಸಿದೆ.

ಸಿಎನ್‍ಬಿಸಿಯ `ಸ್ಕ್ವಾಕ್ ಬಾಕ್ಸ್' ಕಾರ್ಯಕ್ರಮದ ಆ್ಯಂಕರ್‍ಗಳಾದ ಆಂಡ್ರೂ ರಾಸ್ ಸೊರ್ಕಿನ್ ಹಾಗೂ ಜೋ ಕೆರ್ನೆನ್  ತಮ್ಮ ‘ಮಾರ್ನಿಂಗ್ ಶೋ’ ಪ್ರಸ್ತುತಪಡಿಸುತ್ತಿದ್ದ ವೇಳೆ ಕೆರ್ನೆನ್ ಅವರು ದೇಶದ ಆರ್ಥಿಕ ಸ್ಥಿತಿಗತಿ ಕುರಿತಂತೆ ಸಕಾರಾತ್ಮಕವಾಗಿ  ಬಿಂಬಿಸಲು ಯತ್ನಿಸಿದಾಗ ಈ ಮಾತಿನ ಚಕಮಕಿ ನಡೆದಿದೆ. ಕೆರ್ನೆನ್ ಅವರ ಅಭಿಪ್ರಾಯದಿಂದ ಕೆರಳಿದ ಸೊರ್ಕಿನ್, ನೀವು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಓಲೈಸಲು ಯತ್ನಿಸುತ್ತಿದ್ದೀರಿ” ಎಂದು ಕೆರ್ನೆನ್ ಅವರ ವಿರುದ್ಧ ಆರೋಪಿಸಿದರು.

“ಜೋಸೆಫ್, ಜೋಸೆಫ್, ನೀವು ಯಾವುದರ ಬಗ್ಗೆಯೂ ಭೀತಿ ವ್ಯಕ್ತಪಡಿಸಿಲ್ಲ !'' ಎಂದು ಸೊರ್ಕಿನ್  ಹೇಳಿದರು. “ಜೋಸೆಫ್, 1,00,000 ಜನರು ಸತ್ತಿದ್ದಾರೆ, 1,00,000 ಜನರು ಸತ್ತಿದ್ದಾರೆ. ಜೋ! ಆದರೆ ನೀವು ಮಾತ್ರ ನಿಮ್ಮ ಸ್ನೇಹಿತ, ಅಧ್ಯಕ್ಷರಿಗೆ ಸಹಾಯ ಮಾಡಲು ಯತ್ನಿಸಿದ್ದೀರಿ,'' ಎಂದೂ ಅವರು ಮುಂದುವರಿದು ಹೇಳಿದರು.

ನಂತರ ತಮ್ಮ ಭಾವೋದ್ವೇಗವನ್ನು ಕೊಂಚ ಹತ್ತಿಕ್ಕಿಕೊಂಡ ಅವರು, “ನೀವು ಅದನ್ನೇ ಮಾಡಿದ್ದು, ಈ ಶೋದಲ್ಲಿ ಪ್ರತಿ ದಿನ ಬೆಳಿಗ್ಗೆ. ಪ್ರತಿ ದಿನ ಬೆಳಿಗ್ಗೆ ಈ ಶೋದಲ್ಲಿ, ನೀವು ನಿಮ್ಮ ಸ್ಥಾನವನ್ನು ದುರುಪಯೋಗ ಪಡಿಸಿದಿರಿ, ಜೋ,!” ಎಂದು ಕೆರ್ನೆನ್ ಅವರು ಕಾರ್ಯಕ್ರಮ ಪ್ರಸಾರ ಮುಂದುವರಿದಂತೆಯೇ ಅಬ್ಬರಿಸಿದ್ದಾರೆ.

ಇದಕ್ಕೆ ಉತ್ತರಿಸಿದ ಕೆರ್ನೆನ್ ‘ಇದು ಸಂಪೂರ್ಣವಾಗಿ ಅನ್ಯಾಯ’ ಎಂದರು. ತಮ್ಮ ನಿಲುವನ್ನು ಸಮರ್ಥಿಸಿ ಮಾತನಾಡಿದ ಅವರು, ``ಹೂಡಿಕೆದಾರರು ತಾಳ್ಮೆಯಿಂದಿರುವಂತೆ ಮಾಡಲು ನಾನು ಸಹಾಯ ಮಾಡುತ್ತಿದ್ದೇನೆ. ಅವರು ಹಾಗೆಯೇ ಮಾಡಬೇಕಿದೆ'' ಎಂದೂ ಹೇಳಿದರು.

ಈ ನೇರ ಪ್ರಸಾರದ ವಾಕ್ಸಮರದ ವೀಡಿಯೋ ತುಣುಕು ಟ್ವಿಟರ್‍ನಲ್ಲಿ ವೈರಲ್ ಆಗಿದ್ದು ಸಾಕಷ್ಟು  ಸ್ವಾರಸ್ಯಕರ ಪ್ರತಿಕ್ರಿಯೆಗಳಿಗೂ ಕಾರಣವಾಗಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News