ಮಳವೂರಿನಲ್ಲಿ ಕೊರೋನ ವೈರಸ್ ಹರಡಲು ಪಿಡಿಒ ನಿರ್ಲಕ್ಷ್ಯ ಕಾರಣ : ಸಾರ್ವಜನಿಕರ ಆರೋಪ

Update: 2020-05-28 12:17 GMT

ಮಂಗಳೂರು, ಮೇ 28: ಮಳವೂರು ಗ್ರಾಪಂ ವ್ಯಾಪ್ತಿಯ ಕೆಂಜಾರು ಗ್ರಾಮದ ತಾಂಗಡಿ ಎಂಬಲ್ಲಿ ಹೊರ ರಾಜ್ಯದಿಂದ ಬಂದ ನಾಲ್ಕು ಮಂದಿಗೆ ಕೊರೋನ ವೈರಸ್ ತಗುಲಲು ಗ್ರಾಪಂ ಪಿಡಿಒ ಅವರೇ ನೇರ ಕಾರಣ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಅಲ್ಲದೆ ಈ ಬಗ್ಗೆ ಸೂಕ್ತ ಕ್ರಮ ಜರುಗಿಸಬೇಕು ಎಂದು ದ.ಕ. ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.

ಮೇ 8ರಂದು ಮುಂಬೈಯಿಂದ ಬಜ್ಪೆ ಸಮೀಪದ ಕೆಂಜಾರು ಗ್ರಾಮಕ್ಕೆ ಆಗಮಿಸಿದ್ದ ಒಂದೇ ಕುಟುಂಬಕ್ಕೆ ಸೇರಿದ 46 ವರ್ಷದ ವ್ಯಕ್ತಿ, 59 ವರ್ಷದ ಮಹಿಳೆ, 11 ವರ್ಷದ ಬಾಲಕಿ ಹಾಗೂ 3 ವರ್ಷದ ಮಗುವಿಗೆ ಸೋಂಕು ದೃಢಗೊಂಡಿತ್ತು. ಕೆಲವು ದಿನಗಳ ಹಿಂದೆ ಕೆಂಜಾರಿನ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಈ ಮಹಿಳೆಯ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ಮುಂಬೈಯ ನಾಲ್ಕು ಮಂದಿ ಕೆಂಜಾರಿನ ತಾಂಗಡಿಗೆ ಆಗಮಿಸಿದ್ದರು. ಹೊರ ರಾಜ್ಯದಿಂದ ಬಂದ ಇವರು ಕ್ವಾರಂಟೈನ್ ಕೇಂದ್ರದಲ್ಲಿರುವ ಬದಲು ನೇರ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು. ಮೇ 27ರಂದು ಈ ನಾಲ್ಕು ಮಂದಿಗೆ ಸೋಂಕು ಇರುವುದು ದೃಢಗೊಳ್ಳುತ್ತಲೇ ಸ್ಥಳೀಯರು ತೀವ್ರ ಆತಂಕಿತರಾಗಿದ್ದಾರೆ. ಅಂತ್ಯಸಂಸ್ಕಾರದ ಬಳಿಕ ಹೋಂ ಕ್ವಾರಂಟೈನ್‌ಗೊಳಪಡಿಸಿದರೂ ಕೂಡ ಮುಂಬೈಯಿಂದ ಬಂದಿದ್ದ ಇವರು ಊರಿಡೀ ತಿರುಗಾಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಈ ಮಧ್ಯೆ ನಾಲ್ಕು ಮಂದಿಗೆ ಸೋಂಕು ದೃಢಗೊಳ್ಳುತ್ತಲೇ ಅವರ ಜೊತೆ ಪ್ರಥಮ ಸಂಪರ್ಕದಲ್ಲಿದ್ದ 10 ಮಂದಿಯನ್ನು ಕ್ವಾರಂಟೈನ್ ಕೇಂದ್ರಗಳಿಗೆ ದಾಖಲಿಸಲಾಗಿದೆ. ಅಲ್ಲದೆ ದ್ವಿತೀಯ ಸಂಪರ್ಕದಲ್ಲಿದ್ದ 25 ಮಂದಿಯನ್ನು ಹೋಂ ಕ್ವಾರಂಟೈನ್‌ಗೊಳಪಡಿಸಲಾಗಿದೆ ಎಂದು ತಿಳಿದು ಬಂದಿದೆ.

ಪಿಡಿಒ ನಿರ್ಲಕ್ಷ ಕಾರಣ: ಹೊರ ರಾಜ್ಯದಿಂದ ಯಾರೇ ಬಂದರೂ ಕೂಡ 14 ದಿನಗಳ ಕಾಲ ಕ್ವಾರಂಟೈನ್‌ಗೊಳಪಡಿಸೇಕು ಎಂದು ಕೋವಿಡ್ 19ರ ನಿಯಮವಾಗಿದೆ. ಆದರೆ, ಈ ನಿಯಮವನ್ನು ಮಳವೂರು ಗ್ರಾಪಂ ಆಡಳಿತವು ಕಡೆಗಣಿಸಿದೆ. ಇದಕ್ಕೆ ಗ್ರಾಪಂ ಪಿಡಿಒ ವೆಂಕಟರಮಣ ಭಟ್ ಅವರ ನಿರ್ಲಕ್ಷವೇ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಮುಂಬೈಯಿಂದ ಬಂದ ನಾಲ್ಕು ಮಂದಿಯನ್ನು ಕ್ವಾರಂಟೈನ್‌ಗೊಳಪಡಿಸೇಕಿತ್ತು. ಆದರೆ ಅವರು ಮಹಿಳೆಯೊಬ್ಬರ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದಾರೆ. ಇದಕ್ಕೆ ಗ್ರಾಪಂ ಆಡಳಿತವೇ ಕಾರಣವಾಗಿದೆ. ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡ ಬಳಿಕ ಅವರನ್ನು ಜನನಿಬಿಡ ಪ್ರದೇಶದಲ್ಲೇ ಹೋಂ ಕ್ವಾರಂಟೈನ್ ಮಾಡಲಾಗಿದೆ. ಹಾಗಿದ್ದೂ ಅವರು ಮನೆಯಲ್ಲಿರದೆ ಊರಿಡೀ ಸುತ್ತಾಡಿದ್ದಾರೆ. ಗ್ರಾಪಂ ಪಿಡಿಒ ಜವಾಬ್ದಾರಿ ನಿರ್ವಹಿಸಿದ್ದರೆ ಹೀಗಾಗುತ್ತಿರಲಿಲ್ಲ. ಹಾಗಾಗಿ ಅವರನ್ನು ತಕ್ಷಣ ಅಮಾನತು ಮಾಡಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒ ಅವರಿಗೆ ಸ್ಥಳೀಯರು ದೂರು ನೀಡಿದ್ದಾರೆ.

ನನ್ನಲ್ಲಿ ಕೇಳಬೇಡಿ: ಈ ಬಗ್ಗೆ ಪ್ರತಿಕ್ರಿಯೆ ಬಯಸಲು ‘ವಾರ್ತಾಭಾರತಿ’ಯು ಪಿಡಿಒ ವೆಂಕಟರಮಣ ಭಟ್ ಅವರನ್ನು ಸಂಪರ್ಕಿಸಿದಾಗ ‘ಈ ಬಗ್ಗೆ ನನ್ನಲ್ಲಿ ಏನೂ ಕೇಳಬೇಡಿ. ಮೇಲಾಧಿಕಾರಿಗಳ ಬಳಿ ಕೇಳಿ’ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News