ಕೊಕ್ಕಡ : ಹ್ಯುಮಾನಿಟಿ ಟ್ರಸ್ಟ್ ವತಿಯಿಂದ ಬಡಕುಟುಂಬದ ಮಹಿಳೆಗೆ ಮನೆ ಹಸ್ತಾಂತರ

Update: 2020-05-28 12:05 GMT

ಕೊಕ್ಕಡ : ಮಾನವೀಯತೆಯೇ ಅತ್ಯಂತ ಶ್ರೇಷ್ಠ ಧರ್ಮ ಎಂಬ ದ್ಯೇಯವಾಕ್ಯದೊಂದಿಗೆ ಉಡುಪಿಯ ಬೆಳ್ಮಣ್ಣುವಿನಲ್ಲಿ ಕೇಂದ್ರ ಕಚೇರಿ ಹೊಂದಿ ಕಾರ್ಯಾಚರಿಸುತ್ತಿರುವ  ಹ್ಯುಮ್ಯಾನಿಟಿ ಟ್ರಸ್ಟ್ ಪಟ್ರಮೆ ಗ್ರಾಮದ ಅನಾರು ಕಾಟ್ರಸ್ ನ ಅತ್ಯಂತ ಅಸಹಾಯಕ ಪರಿಸ್ಥಿತಿಯಲ್ಲಿ, ಗುಡಿಸಲಿನಲ್ಲಿ ವಾಸಿಸುತ್ತಿದ್ದ ಆಸಿಯಾ ಎಂಬವರಿಗೆ ನಿರ್ಮಿಸಿಕೊಟ್ಟ  ಆರ್ ಸಿ ಸಿ ಮನೆಯನ್ನು ಬೆಳ್ತಂಗಡಿ ವೃತ್ತ ನಿರೀಕ್ಷಕರಾದ ಸಂದೇಶ್ ಅವರು  ಹಸ್ತಾಂತರಿಸಿದರು.

ನಂತರ ಮಾತನಾಡಿದ ಸಂದೇಶ್ ಅವರು ಇದೊಂದು ಮಾದರಿ ಮಾನವೀಯ ಸೇವೆಯಾಗಿದ್ದು, ಇನ್ನಷ್ಟು ಬಡಕುಟುಂಬಗಳಿಗೆ ಹ್ಯುಮ್ಯಾನಿಟಿ ಟ್ರಸ್ಟ್ ನ ಈ ನಿಸ್ವಾರ್ಥ ಸೇವೆ ಶ್ಲಾಘನೀಯ ಎಂದರು. ಆಸಿಯರವರಿಗೂ ಈದ್ ಹೊಸ್ತಿಲಲ್ಲಿ ದೊರೆತಿರುವ ಈ ಹೊಸಮನೆಯು ಸುಖಶಾಂತಿ ಒದಗಿಸಲಿ ಎಂದು ಹಾರೈಸಿದರು.

ನಂತರ ಹ್ಯುಮ್ಯಾನಿಟಿ ಟ್ರಸ್ಟ್ ನ ಪ್ರಮುಖ ಟ್ರಸ್ಟಿಯಾಗಿರುವ  ರೋಶನ್ ಬೆಳ್ಮಣ್ ರವರು ಮಾತನಾಡಿ ಕಳೆದ 3 ವರ್ಷಗಳಲ್ಲಿ 500 ಕ್ಕೂ ಹೆಚ್ಚಿನ ಕುಟುಂಬಗಳಿಗೆ ಯಾವುದೇ ಜಾತಿ ಧರ್ಮ ಬೇಧವಿಲ್ಲದೆ, ಮಾನವೀಯ ನೆಲೆಯಲ್ಲಿ ಸಹೃದಯಿಗಳಿಂದ ನಿಧಿ ಸಂಗ್ರಹಿಸಿ ಸುಮಾರು ರೂ 5 ಕೋಟಿಗೂ ಮಿಕ್ಕಿದ ನೆರವನ್ನು ಒದಗಿಸಲಾಗಿದೆ, ಆಸಿಯಾರವರಿಗೆ ಈ ಮನೆ ಹಬ್ಬದ ಕೊಡುಗೆಯಾಗಿದೆ ಎಂದರು.

ಈ ಸಂದರ್ಭದಲ್ಲಿ  ಸದ್ರಿ ನೆರವು ಒದಗಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಝಕರಿಯ ಪಟ್ರಮೆ, ಅಲ್ಲದೆ ಬೆಳ್ತಂಗಡಿ ನ್ಯಾಯವಾದಿಗಳಾದ  ಬಿಯಂ ಭಟ್, ಸ್ಥಳೀಯ ಗ್ರಾ.ಪಂ. ಸದಸ್ಯರಾದ  ಶ್ಯಾಮರಾಜ್  ಉಪಸ್ಥಿತರಿದ್ದರು.

ಸ್ಥಳೀಯ ಹಿರಿಯರೂ, ದಾನಿಗಳೂ ಆದ ಉಸ್ಮಾನ್ ಶಾಲೆಬಳಿ ಹಾಗೂ ಮನೆ ನಿರ್ಮಾಣದಲ್ಲಿ ಶ್ರಮದಾನದ ನೆರವು ಒದಗಿಸಿದ್ದ ಅನ್ಸಪ್ ಅನಾರು, ಅಶ್ರಫ್, ಇಲ್ಯಾಸ್, ಶರೀಫ್,  ಇಲ್ಯಾಸ್ ಮೊದಲಾದವರೂ ಉಪಸ್ಥಿತರಿದ್ದರು.

ನಂತರ ಟ್ರಸ್ಟ್ ನ ಪ್ರಮುಖರಾದ ರೋಶನ್ ಬೆಳ್ಮಣ್ ಮತ್ತು ಮನೆ ಉದ್ಘಾಟಿಸಿದ ಸಂದೇಶ್ ರವರಿಗೆ ಸ್ಥಳೀಯರ ಪರವಾಗಿ ಗೌರವ ಸಮರ್ಪಿಸಲಾಯಿತು. ಪ್ರಾರಂಭದಲ್ಲಿ ಶ್ಯಾಮರಾಜ್ ಸ್ವಾಗತಿಸಿ, ಝಕರಿಯ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News