ಉಡುಪಿ: ಏರುತ್ತಿದೆ ಕೊರೋನ ಸೋಂಕಿತರ ಸಂಖ್ಯೆ; ಸಮುದಾಯಕ್ಕೆ ಹಬ್ಬುವ ಭೀತಿ

Update: 2020-05-28 14:33 GMT

ಉಡುಪಿ, ಮೇ 28: ಹೊರರಾಜ್ಯ ಹಾಗೂ ಹೊರದೇಶಗಳಿಂದ ಜನರಿಗೆ ಅವರವರ ಜಿಲ್ಲೆಯನ್ನು ಪ್ರವೇಶಿಸಲು ಅವಕಾಶ ನೀಡುವವರೆಗೆ ಉಡುಪಿಯಲ್ಲಿ ಸಂಪೂರ್ಣ ನಿಯಂತ್ರಣದಲ್ಲಿದ್ದ ನೋವೆಲ್ ಕೊರೋನ ವೈರಸ್ (ಕೋವಿಡ್- 19) ಅನಂತರ ಒಮ್ಮಿಂದೊಮ್ಮೆಗೆ ಕಟ್ಟು ಹರಿದ ಕಂಬಳದ ಕೋಣದಂತೆ ನಾಗಾಲೋಟದಲ್ಲಿ ಏರುಗತಿಯಲ್ಲಿ ಸಾಗುತ್ತಿದೆ.

ಇದರಿಂದ ಮೇ 15ರವರೆಗೆ ಕೇವಲ ಮೂರು ಪಾಸಿಟಿವ್ ಪ್ರಕರಣ ಗಳೊಂದಿಗೆ ಜನರ ಪಾಲಿಗೆ ಸುರಕ್ಷಿತ ಜಿಲ್ಲೆಯಾಗಿ ಹಸಿರು ವಲಯದಲ್ಲಿ ಗುರುತಿಸಿಕೊಂಡಿದ್ದ ಉಡುಪಿ ಜಿಲ್ಲೆಯೀಗ ಯಾರ ಅಂಕೆಗೂ ಸಿಗದ ಗೂಳಿ ಯಂತಾಗಿದೆ. ಗುರುವಾರದ 29 ಪಾಸಿಟಿವ್ ಪ್ರಕರಣ ಸೇರಿದಂತೆ ಈವರೆಗೆ ಒಟ್ಟು 149 ಪಾಸಿಟಿವ್ ಪ್ರಕರಣಗಳು ಜಿಲ್ಲೆಯಲ್ಲಿ ವರದಿಯಾಗಿದ್ದು, ಜಿಲ್ಲೆಯ ಆರೋಗ್ಯ ಇಲಾಖೆಯ ಅಧಿಕಾರಿಗಳ ಅನಿಸಿಕೆಯನ್ನು ನಂಬುವುದಾದರೆ ಇದು ಒಂದೆರಡು ಪಟ್ಟು ಅಧಿಕವಾದರೂ ಅಚ್ಚರಿಯೇನಿಲ್ಲ.

ಕೋವಿಡ್-19ರ ನಿಯಂತ್ರಣದ ಕುರಿತಂತೆ ಕೇಂದ್ರ ಹಾಗೂ ರಾಜ್ಯ ಸರಕಾರ ಗಳು ಸ್ಪಷ್ಟವಾದ ನಿಲುವನ್ನು ಹೊಂದಿ, ಅದಕ್ಕೆ ಅನುಗುಣವಾದ ನೀತಿ ನಿರೂಪಣೆ ಮಾಡುವ ಬದಲು ಪ್ರತಿದಿನವೆಂಬಂತೆ ಹೊಸ ಹೊಸ ವಿನಾಯಿತಿಗಳನ್ನು ನೀಡುತ್ತಾ, ಈಗಾಗಲೇ ಮಾಡಿರುವ ನಿಯಮಗಳಿಗೆ ತಿದ್ದುಪಡಿಗಳನ್ನು ತರುತ್ತಾ, ದುರ್ಬಲಗೊಳಿಸಿ, ಅದನ್ನು ಅನುಷ್ಠಾನಗೊಳಿಸುವ ಅಧಿಕಾರಿಗಳನ್ನು ಸದಾ ಗೊಂದಲದಲ್ಲಿ ಇರಿಸುತ್ತಿದೆ. ಹೊರದೇಶ ಹಾಗೂ ಹೊರರಾಜ್ಯಗಳಲ್ಲಿ ಸಿಕ್ಕಿಹಾಕಿಕೊಂಡಿರುವವರನ್ನು ಅವರ ಹುಟ್ಟೂರಿಗೆ ಬರಲು ಅವಕಾಶ ನೀಡುವ ನಿರ್ಧಾರ ಸ್ವಾಗತಾರ್ಹವಾದರೂ, ಅವರೆಲ್ಲರೂ ಆಯಾ ಜಿಲ್ಲೆಗಳನ್ನು ಪ್ರವೇಶಿಸಿದ ಬಳಿಕ 14 ದಿನ ಕಡ್ಡಾಯವಾಗಿ ಗುರುತಿಸಲ್ಪಟ್ಟ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿರಿಸುವ ನಿರ್ಧಾರ ವನ್ನು ತೀರಾ ದುರ್ಬಲಗೊಳಿಸಿ ಕೇವಲ ಏಳು ದಿನಗಳನ್ನು ಪೂರೈಸಿದವರನ್ನು ಮನೆಗೆ ಕಳುಹಿಸುವ ನಿರ್ಧಾರ ಮರ್ಮಘಾತಕವಾಗಬಲ್ಲದು ಎಂಬುದು ಹೆಚ್ಚಿನವರ ಅಭಿಪ್ರಾಯ.

ಉಡುಪಿ ಜಿಲ್ಲೆಯ ಮಟ್ಟಿಗಂತೂ, ಜಿಲ್ಲಾಡಳಿತ, ಆರೋಗ್ಯ ಇಲಾಖೆಯ ಅಧಿಕಾರಿಗಳ ಅವಿರತ ಪರಿಶ್ರಮದ ಫಲವಾಗಿ ಕೊರೋನ ಸಂಪೂರ್ಣ ನಿಯಂತ್ರಣದಲ್ಲಿತ್ತು. ಆದರೆ ಈಗ ಅದು ಸಮುದಾಯವನ್ನು ಪ್ರವೇಶಿಸುವ ಸಾಧ್ಯತೆಗೆ ನಿನ್ನೆ ಬಂದ ಹೊಸ ನಿಯಮಗಳು ವೇಗವರ್ಧಕವಾಗಿ ಕೆಲಸ ಮಾಡುತ್ತದೆ ಎಂಬ ಮಾತನ್ನು ಜಿಲ್ಲೆಯಲ್ಲಿ ಕೋವಿಡ್ ವಿರುದ್ಧ ಶ್ರಮಿಸುತ್ತಿರು ವವರು ಗಟ್ಟಿಯಾಗಿ ಅಲ್ಲದಿದ್ದರೂ, ಪಿಸುಪಾಸಿನಲ್ಲಿ ಖಚಿತವಾಗಿ ಆಡುತಿದ್ದಾರೆ.

ಸಮುದಾಯ ಸುರಕ್ಷಿತ: ಉಡುಪಿ ಜಿಲ್ಲೆಯಲ್ಲಿ ಮೊದಲ ಪಾಸಿಟಿವ್ ಕೇಸು ದಾಖಲಾಗಿದ್ದು ಮಾ. 24ರಂದು. ದುಬೈಗೆ ಹೋಗಿ ಬಂದ 34ರ ಹರೆಯ ಮಣಿಪಾಲದ ಯುವಕನಲ್ಲಿ ಮೊದಲ ಬಾರಿ ಸೋಂಕು ಪತ್ತೆಯಾಗಿತ್ತು. ಅನಂತರ ಮಾ.29ರಂದು ದುಬೈಗೆ ಹೋಗಿ ಬಂದ 35ರ ಯುವಕ ಹಾಗೂ ಕೇರಳ ತಿರುವನಂತಪುರಂಗೆ ಹೋಗಿ ಬಂದ 29ರ ಯುವಕರಲ್ಲಿ ಸೋಂಕು ಪತ್ತೆಯಾಗಿತ್ತು. ಇವರೆಲ್ಲರೂ ನಗರದ ಡಾ.ಟಿಎಂಎ ಪೈ ಕೋವಿಡ್ ಆಸ್ಪತ್ರೆಗೆ ದಾಖಲಾಗಿ ಗುಣಮುಖರಾಗಿ ಎ.18ರೊಳಗೆ ಬಿಡುಗಡೆಯಾಗಿದ್ದರು.

ಅನಂತರ ಜಿಲ್ಲೆಯಲ್ಲಿ ಮತ್ತೊಂದು ಪಾಸಿಟಿವ್ ಪ್ರಕರಣ ಕಾಣಿಸಿಕೊಂಡಿದ್ದು, ಮೇ 13ರಂದು ದುಬೈಯಿಂದ ಬಂದ 49 ಮಂದಿಯ ಪೈಕಿ ಆರು ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಾಗ. ಅನಂತರ ಪ್ರತಿದಿನವೆಂಬಂತೆ ಪಾಸಿಟಿವ್ ಪ್ರಕರಣಗಳು ಏರುಗತಿಯಲ್ಲಿ ಪತ್ತೆಯಾಗುತ್ತಾ ಸಾಗಿದೆ. ಇಂದು ಪತ್ತೆಯಾದ 29 ಪಾಸಿಟಿವ್ ಕೇಸುಗಳು ಸೇರಿದಂತೆ ಒಟ್ಟು 149 ಪ್ರಕರಣ ವರದಿಯಾಗಿದೆ.

ಇವುಗಳಲ್ಲಿ ಕೇವಲ ಆರನ್ನು ಹೊರತು ಪಡಿಸಿ ಉಳಿದೆಲ್ಲವೂ ಹೊರಗಿನಿಂದ -ಅಂದರೆ ಹೊರರಾಜ್ಯ ಹಾಗೂ ಹೊರದೇಶ- ಬಂದಿರುವುದು. ಈವರೆಗಿನ ಲೆಕ್ಕಾಚಾರದಂತೆ ಮುಂಬೈ ಸೇರಿದಂತೆ ಮಹಾರಾಷ್ಟ್ರ ರಾಜ್ಯವೊಂದರಿಂದಲೇ 120 ಕೇಸುಗಳು ವರದಿಯಾಗಿವೆ. ಇನ್ನು ದುಬೈ, ಸೌದಿ ಅರೇಬಿಯಾ ಹಾಗೂ ಕತರ್ ಸೇರಿದಂತೆ ಹೊರದೇಶಗಳಿಂದ 12 ಮಂದಿ, ಕೇರಳದಿಂದ ಮೂವರು ಹಾಗೂ ತೆಲಂಗಾಣದಿಂದ ಬಂದ 6 ಮಂದಿಯಲ್ಲಿ ಕೊರೋನ ಸೋಂಕು ಕಾಣಿಸಿಕೊಂಡಿದೆ.

ಸ್ಥಳೀಯರು ಬಚಾವ್: ಉಳಿದಂತೆ ಇದುವರೆಗೆ ಸ್ಥಳೀಯವಾಗಿ ಕಾಣಿಸಿ ಕೊಂಡಿರುವುದು ಕೇವಲ ಆರು ಮಂದಿಯಲ್ಲಿ ಮಾತ್ರ. ಅದರಲ್ಲೂ ನಾಲ್ವರು ಪೊಲೀಸರಲ್ಲಿ ಕೊರೋನ ಸೋಂಕು ಕಾಣಿಸಿಕೊಂಡಿದೆ. ಆದರೆ ಇವರು ನಾಲ್ವರು ಚೆಕ್‌ಪೋಸ್ಟ್‌ಗಳಲ್ಲಿ, ಕ್ವಾರಂಟೈನ್ ಕೇಂದ್ರಗಳಲ್ಲಿ ಕೆಲಸ ಮಾಡಿದವರಾಗಿದ್ದು, ಹೀಗಾಗಿ ಇವರು ಸೋಂಕಿಗೆ ಸುಲಭದಲ್ಲಿ ತುತ್ತಾಗುವ ಸಂಭವವಿದ್ದವರು.

ಉಳಿದಿಬ್ಬರಲ್ಲಿ ಒಬ್ಬರು ಕಾರ್ಕಳದ 22ರ ಹರೆಯದ ತುಂಬು ಗರ್ಭಿಣಿ ಹಾಗೂ ಮತ್ತೊಬ್ಬರು 30ರ ಹರೆಯದ ಜಿಪಂ ಸಿಬ್ಬಂದಿ. ಇವರಿಬ್ಬರ ಸಂಪರ್ಕ ಮೂಲ ಗೊತ್ತಾಗದ ಹಿನ್ನೆಲೆಯಲ್ಲಿ ಮರುಪರೀಕ್ಷೆ ನಡೆಸಿದಾಗ, ಗರ್ಭಿಣಿ ನೆಗೆಟಿವ್ ಆಗಿ ಬಂದರೆ, ಯುವಕನ ಪರೀಕ್ಷಾ ವರದಿ ಇನ್ನಷ್ಟೇ ಬರಬೇಕಿದೆ.

ಆದುದರಿಂದ ಜಿಲ್ಲೆಯಲ್ಲಿ ಕೊರೋನ ಇನ್ನೂ ಸಮುದಾಯಕ್ಕೆ ಹಬ್ಬಿಲ್ಲ. ಮುಂದೆ ಈ ಸಾಧ್ಯತೆ ಹೇಳುವುದಕ್ಕಾಗದಿದ್ದರೂ, ಸದ್ಯ ಸಮುದಾಯ ಸುರಕ್ಷಿತ ವಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ವಿಶ್ವಾಸದಿಂದ ನುಡಿದರು. ಒಂದು ವೇಳೆ ಸಮುದಾಯದ ನಡುವೆ ಹಬ್ಬಿದರೂ ನಾವು ಎಲ್ಲಾ ಸಿದ್ಧತೆಗಳನ್ನು ಮಾಡಿ ಕೊಂಡಿದ್ದೇವೆ. ಸೋಂಕಿತರಿಗಾಗಿ 400 ಬೆಡ್‌ಗಳು ಸಿದ್ಧವಿವೆ. ವೆಂಟಿಲೇಟರ್ ಗಳಿವೆ. ಮುಂದಿನದ್ದು ಜನರ ಮೇಲೆ ನಿರ್ಧಾರವಾಗುತ್ತದೆ ಎಂದವರು ನುಡಿದರು.

ಜಿಲ್ಲೆಯ ವಿವಿಧ ಕ್ವಾರಂಟೈನ್ ಕೇಂದ್ರ ಹಾಗೂ ಹೊಟೇಲ್ ಕ್ವಾರಂಟೈನ್ ಗಳಲ್ಲಿದ್ದ 8000ಕ್ಕೂ ಅಧಿಕ ಮಂದಿಯಲ್ಲಿ ಇಂದು ಬಹುಪಾಲು ಮಂದಿ ಮನೆಗಳಿಗೆ ತೆರಳಿದ್ದಾರೆ. ಹೀಗೆ ತೆರಳಿದವರು ಇಡೀ ಸಮುದಾಯದ ಹಿತದೃಷ್ಟಿ ಯಿಂದ ಯಾವ ರೀತಿ ತಮ್ಮನ್ನು ಹಾಗೂ ತಮ್ಮ ಕುಟುಂಬವನ್ನು ರಕ್ಷಿಸಿಕೊಂಡು ಇಡೀ ಸಮುದಾಯವನ್ನು ಕೋವಿಡ್-19ರಿಂದ ಪಾರು ಮಾಡುತ್ತಾರೆಂಬುದನ್ನು ಕಾದು ನೋಡಬೇಕಾಗಿದೆ.

ಉಡುಪಿಯಲ್ಲಿ ಪಾಸಿಟಿವ್ ಕಾಣಿಸಿಕೊಂಡವರ ವಿವರ

1. ಮಹಾರಾಷ್ಟ್ರದಿಂದ ಬಂದವರು 122
2. ವಿದೇಶಗಳಿಂದ ಬಂದವರು 12
3. ತೆಲಂಗಾಣದಿಂದ ಬಂದವರು 06
4. ಕೇರಳದಿಂದ ಬಂದವರು 03
5.ಸ್ಥಳೀಯರು (ಪೊಲೀಸರು+ಇತರ2) 06

ಒಟ್ಟು  149

ಜಿಲ್ಲೆಯಲ್ಲಿ ಪಾಸಿಟಿವ್ ಕೇಸು ಕಾಣಿಸಿಕೊಂಡ ವಿವರ
ಮಾರ್ಚ್ 24-1(ದುಬೈ), ಮಾರ್ಚ್ 29-2(ದುಬೈ+ಕೇರಳ), ಮೇ 15-6 (ಎಲ್ಲರೂ ದುಬೈ), ಮೇ 16-1(ಮುಂಬೈ), ಮೇ-18-1 (ಮುಂಬೈ), ಮೇ 19-4(ಮುಂಬೈ), ಮೇ 20-6(ಮುಂಬೈ), ಮೇ 21-26 (ಮಹಾರಾಷ್ಟ್ರ 21, ತೆಲಂಗಾಣ 3, ಕೇರಳ 1, ದುಬೈ 1).
ಮೇ 22-3(ಮಹಾರಾಷ್ಟ್ರ), ಮೇ 23-3 (ಮಹಾರಾಷ್ಟ್ರ), ಮೇ 24-23 (ಮಹಾರಾಷ್ಟ್ರ17, ತೆಲಂಗಾಣ1, ಯುಎಇ1, ಸ್ಥಳೀಯರು 4), ಮೇ 25- 32 (ಮಹಾರಾಷ್ಟ್ರ 28, ಸೌದಿ ಅರೇಬಿಯಾ 2, ಸ್ಥಳೀಯರು 2), ಮೇ 26-3 (ಮಹಾರಾಷ್ಟ್ರ), ಮೇ 27- 9 (ಮಹಾರಾಷ್ಟ್ರ), ಮೇ 28-29 (ಮಹಾರಾಷ್ಟ್ರ 26, ತೆಲಂಗಾಣ 2, ಕೇರಳ 1).

ಸದ್ಯ ಹಬ್ಬಿಲ್ಲ, ಮುಂದೆ ಹೇಳೊಕ್ಕಾಗಲ್ಲ

ಸದ್ಯಕ್ಕಂತೂ ಉಡುಪಿ ಜಿಲ್ಲೆಯಲ್ಲಿ ಕೋವಿಡ್-19 ಸಮುದಾಯದ ಮಧ್ಯೆ ಹಬ್ಬಿಲ್ಲ. ಆದರೆ ಮುಂದಿನದನ್ನು ಈಗಲೇ ಹೇಳೊಕ್ಕಾಗಲ್ಲ. ಎಲ್ಲವೂ ಜನರ ಹೊಣೆಗಾರಿಕೆಯಾಗಿದೆ. ಸದ್ಯ ಸರಕಾರ ಎಲ್ಲರನ್ನೂ ಬಿಟ್ಟಿದೆ. ಅವರ ಮೇಲೆ ಎಲ್ಲಾ ಜವಾಬ್ದಾರಿಗಳಿವೆ. ಪರಿಸ್ಥಿತಿ ಎದುರಿಸಲು ನಾವು ಸಿದ್ಧರಾಗಿದ್ದೇವೆ.

-ಜಿ.ಜಗದೀಶ್, ಉಡುಪಿ ಜಿಲ್ಲಾಧಿಕಾರಿ

ಜನರಲ್ಲಿ ಜಾಗೃತಿ ಮುಖ್ಯ

ಕ್ವಾರಂಟೈನ್‌ನಲ್ಲಿದ್ದವರನ್ನು ನಾವು ಮನೆಗೆ ಕಳುಹಿಸಿದ್ದೇವೆ. ಇನ್ನು ಜನರೇ ಜಾಗೃತಿ ಮಾಡಬೇಕಾಗಿದೆ. ಮನೆಗೆ ಹೋದವರು ಶೀತ, ಜ್ವರ, ಕೆಮ್ಮು, ಉಸಿರಾಟದ ತೊಂದರೆ ಕಾಣಿಸಿಕೊಂಡರೆ ತಕ್ಷಣ ಫೀವರ್ ಕ್ಲಿನಿಕ್ ‌ಬಂದು ಪರೀಕ್ಷೆ ಮಾಡಿಸಿಕೊಳ್ಳಬೇಕು. ಎಲ್ಲಾ ಮನೆಯವರು ಈ ಜಾಗೃತಿ ವಹಿಸಲೇಬೇಕು. ಕೋವಿಡ್ ನಿಯಂತ್ರಣಕ್ಕೆ ಅನ್ಯಮಾರ್ಗವಿಲ್ಲ. ಮಾಸ್ಕ್, ಸುರಕ್ಷತಾ ಅಂತರ ಕಡ್ಡಾಯ ಪಾಲಿಸಬೇಕು.
-ಡಾ.ಸುಧೀರ್‌ಚಂದ್ರ ಸೂಡ, ಡಿಎಚ್‌ಒ ಉಡುಪಿ.

Writer - ಬಿ.ಬಿ. ಶೆಟ್ಟಿಗಾರ್

contributor

Editor - ಬಿ.ಬಿ. ಶೆಟ್ಟಿಗಾರ್

contributor

Similar News