​ಉಡುಪಿ: ಗುರುವಾರ 29 ಮಂದಿಯಲ್ಲಿ ಕೊರೋನ ಸೋಂಕು

Update: 2020-05-28 15:32 GMT

ಉಡುಪಿ, ಮೇ 28: ಕೊರೋನ ವೈರಸ್ ಸೋಂಕಿನ ಪ್ರಕರಣಕ್ಕೆ ಉಡುಪಿ ಜಿಲ್ಲೆಯಲ್ಲಿ ಸದ್ಯಕ್ಕೆ ಬ್ರೇಕ್ ಬೀಳುವಂತೆ ಕಾಣುತ್ತಿಲ್ಲ. ಗುರುವಾರ ಪ್ರಕಟವಾದ ಕೋವಿಡ್-19 ಸೋಂಕಿತರ ಪಟ್ಟಿಯಲ್ಲಿ ಉಡುಪಿ ಜಿಲ್ಲೆಯ ಒಟ್ಟು 29 ಮಂದಿಯಲ್ಲಿ ಕೊರೋನ ಪಾಸಿಟಿವ್ ಅಂಶ ಕಂಡುಬಂದಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.

ಆರು ವರ್ಷದ ಹೆಣ್ಣು ಮಗು ಸೇರಿದಂತೆ ಜಿಲ್ಲೆಗೆ ಮಹಾರಾಷ್ಟ್ರದಿಂದ ಬಂದ 26 ಮಂದಿ ಕೊರೋನ ಸೋಂಕಿಗೆ ಪಾಸಿಟಿವ್ ಆಗಿದ್ದರೆ, ತೆಲಂಗಾಣ ದಿಂದ ಬಂದ ಇಬ್ಬರು ಹಾಗೂ ಕೇರಳದಿಂದ ಬಂದ ಒಬ್ಬರು ಇದೇ ಸಾಲಿನಲ್ಲಿದ್ದಾರೆ. ಸೋಂಕಿತರ ಪಟ್ಟಿಯಲ್ಲಿ ಪುರುಷರು 20 ಮಂದಿ, ಮಹಿಳೆಯರು ಎಂಟು ಮಂದಿ ಹಾಗೂ ಒಬ್ಬ ಬಾಲಕಿ ಸೇರಿದ್ದಾರೆ ಎಂದವರು ತಿಳಿಸಿದರು.

 46 ವರ್ಷ, 30,44, 38, 50, 34, 43, 19, 48, 41, 34, 34, 32, 39, 32, 48, 28, 27,47 ಮತ್ತು 42 ವರ್ಷ ಪ್ರಾಯದ ಪುರುಷ ರಲ್ಲಿ, 31, 24, 33, 30, 59, 29, 34, ಹಾಗೂ 34 ವರ್ಷ ಪ್ರಾಯದ ಮಹಿಳೆಯರಲ್ಲಿ ಅಲ್ಲದೇ 6ವರ್ಷದ ಬಾಲಕಿಯಲ್ಲಿ ಸೋಂಕು ಪತ್ತೆಯಾ ಗಿದೆ. ಇವರಲ್ಲಿ ಕುಂದಾಪುರ ತಾಲೂಕಿನವರು 23 ಮಂದಿ, ಕಾರ್ಕಳದ ಐವರು ಹಾಗೂ ಉಡುಪಿಯವರು ಒಬ್ಬರಿದ್ದಾರೆ ಎಂದು ಡಾ.ಸೂಡ ತಿಳಿಸಿದರು.

29ಪಾಸಿಟಿವ್, 298 ನೆಗೆಟಿವ್: ಕೋವಿಡ್ -19 ಸೋಂಕಿನ ಪರೀಕ್ಷೆಗಾಗಿ ಕಳುಹಿಸಿದ ಶಂಕಿತರ ಗಂಟಲು ದ್ರವದ ಮಾದರಿಗಳಲ್ಲಿ ಗುರುವಾರ 29 ಮಾದರಿಗಳು ಪಾಸಿಟಿವ್ ಫಲಿತಾಂಶವನ್ನು ನೀಡಿದ್ದರೆ, 298 ವರದಿಗಳು ನೆಗೆಟಿವ್ ಆಗಿವೆ. ಇಂದಿನ 29 ಪ್ರಕರಣಗಳು ಸೇರಿದಂತೆ ಜಿಲ್ಲೆಯಲ್ಲಿ ಈವರೆಗೆ 149 ಪಾಸಿಟಿವ್ ಫಲಿತಾಂಶ ಬಂದಿವೆ. ಇವುಗಳಲ್ಲಿ 145 ಈಗ ಸಕ್ರೀಯ ಪ್ರಕರಣಗಳಾದರೆ, ಮೂವರು ಗುಣಮುಖ ರಾಗಿದ್ದಾರೆ. ಒಬ್ಬರು ಮೃತಪಟ್ಟಿದ್ದಾರೆ ಎಂದು ಡಿಎಚ್‌ಓ ತಿಳಿಸಿದರು.

ಜಿಲ್ಲೆಯಲ್ಲಿ ಈವರೆಗೆ ಸಂಗ್ರಹಿಸಿದ ಗಂಟಲುದ್ರವ ಮಾದರಿಗಳ ಸಂಖ್ಯೆ ಈಗ 10965 ಆಗಿದೆ. ಇವುಗಳಲ್ಲಿ 4258ರ ಪರೀಕ್ಷಾ ವರದಿ ಮಾತ್ರ ಬಂದಿವೆ. ಇವುಗಳಲ್ಲಿ 4109 ನೆಗೆಟಿವ್ ಆಗಿದ್ದರೆ, ಒಟ್ಟು 120 ಸ್ಯಾಂಪಲ್‌ಗಳು ಪಾಸಿಟಿವ್ ಆಗಿ ಬಂದಿವೆ. ಇನ್ನೂ 6707 ಸ್ಯಾಂಪಲ್ ವರದಿ ಬರಬೇಕಾಗಿದೆ ಎಂದು ಡಾ.ಸೂಡ ತಿಳಿಸಿದರು.

ಜಿಲ್ಲೆಯಲ್ಲಿ ಗುರುವಾರ ಕೊರೋನ ಸೋಂಕಿನ ಗುಣ ಲಕ್ಷಣಗಳನ್ನು ಹೊಂದಿರುವ ಕೇವಲ 20 ಮಂದಿಯ ಗಂಟಲು ದ್ರವ ಮಾದರಿಗಳನ್ನು ಆರೋಗ್ಯ ಇಲಾಖೆ ಪರೀಕ್ಷೆಗಾಗಿ ಕಳುಹಿಸಿದೆ. ಇವುಗಳಲ್ಲಿ 18ಸ್ಯಾಂಪಲ್‌ಗಳನ್ನು ಕೊರೋನ ಹಾಟ್‌ಸ್ಪಾಟ್ ಎನಿಸಿದ ಪ್ರದೇಶಗಳಿಂದ ಬಂದವರಿಂದ ಹಾಗೂ ಇಬ್ಬರು ಶೀತಜ್ವರದಿಂದ ಬಳಲುವವರಿಂದ ಪಡೆಯಲಾಗಿದೆ ಎಂದು ಡಿಎಚ್‌ಓ ತಿಳಿಸಿದರು.

ಶಂಕಿತ ನೋವೆಲ್ ಕೊರೋನ ಸೋಂಕಿನ ಪರೀಕ್ಷೆಗಾಗಿ ಇಂದು 9 ಮಂದಿ ಆಸ್ಪತ್ರೆಗಳ ಐಸೋಲೇಶನ್ ವಾರ್ಡಿಗೆ ದಾಖಲಾಗಿದ್ದಾರೆ. ಇವರಲ್ಲಿ 7 ಮಂದಿ ಪುರುಷ ಹಾಗೂ ಇಬ್ಬರು ಮಹಿಳೆಯರಿದ್ದಾರೆ.ಮೂವರು ಕೊರೋನ ಶಂಕಿತರು, ನಾಲ್ವರು ತೀವ್ರತರದ ಉಸಿರಾಟ ತೊಂದರೆಯವರು ಹಾಗೂ ಇಬ್ಬರು ಶೀತಜ್ವರದ ಬಾಧೆಯ ಪರೀಕ್ಷೆಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ವಿವಿಧ ಆಸ್ಪತ್ರೆಗಳ ಐಸೋಲೇಶನ್ ವಾರ್ಡಿನಿಂದ ಇಂದು 29 ಮಂದಿ ಬಿಡುಗಡೆಗೊಂಡಿದ್ದು, 74 ಮಂದಿ ಇನ್ನೂ ವೈದ್ಯರ ನಿಗಾದಲ್ಲಿದ್ದಾರೆ. ಇದುವರೆಗೆ 678 ಮಂದಿ ಚಿಕಿತ್ಸೆ ಪಡೆದು ಐಸೋಲೇಶನ್ ವಾರ್ಡಿನಿಂದ ಬಿಡುಗಡೆಗೊಂಡಿದ್ದಾರೆ ಎಂದರು.

ಜಿಲ್ಲೆಯಲ್ಲಿ ಕೊರೋನ ಸೋಂಕಿನ ಗುಣಲಕ್ಷಣದ 31 ಇಂದು ನೊಂದಣಿ ಗೊಂಡಿದ್ದು, ಈ ಮೂಲಕ ಜಿಲ್ಲೆಯಲ್ಲಿ ಈವರೆಗೆ ಒಟ್ಟು 4910 ಮಂದಿಯನ್ನು ಕೊರೋನ ತಪಾಸಣೆಗಾಗಿ ನೋಂದಣಿ ಮಾಡಿಕೊಂಡಂತಾಗಿದೆ. ಜಿಲ್ಲೆಯಲ್ಲಿ ಈಗಲೂ 65 ಮಂದಿ ಹೋಮ್ ಕ್ವಾರಂಟೈನ್ ‌ನಲ್ಲೂ, 8168 ಮಂದಿ ವಿವಿಧ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಹಾಗೂ 84 ಮಂದಿ ಆಸ್ಪತ್ರೆ ಕ್ವಾರಂಟೈನ್‌ನಲ್ಲಿದ್ದಾರೆ ಎಂದು ಡಾ.ಸುಧೀರ್‌ಚಂದ್ರ ಸೂಡ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News