ಬಾಲಕನಿಗೆ ಹಲ್ಲೆ, ಜೀವ ಬೆದರಿಕೆ ಪ್ರಕರಣ : ಬಜರಂಗದಳದ ಮುಖಂಡ ಸಹಿತ ನಾಲ್ವರ ವಿರುದ್ಧ ಪ್ರಕರಣ ದಾಖಲು

Update: 2020-05-28 15:19 GMT

ಬಂಟ್ವಾಳ, ಮೇ 28: ಬಾಲಕನೊಬ್ಬನಿಗೆ ಅವಾಚ್ಯವಾಗಿ ನಿಂದಿಸಿ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿ, ಹಣವನ್ನು ದೋಚಿದ ಆರೋಪದಲ್ಲಿ ಬಜರಂಗದಳದ ಮುಖಂಡ ಸಹಿತ ನಾಲ್ವರ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕನ್ಯಾನ ನಿವಾಸಿ, ಭಜರಂಗದಳದ ಮುಖಂಡ ದಿನೇಶ್ ಹಾಗೂ ಕೊಳ್ನಾಡು ಗ್ರಾಮದ 16 ವರ್ಷ ಪ್ರಾಯದ ಇಬ್ಬರು ಮತ್ತು ಕನ್ಯಾನ ಗ್ರಾಮದ 17 ವರ್ಷ ಪ್ರಾಯದ ಓರ್ವ ಹಲ್ಲೆ ನಡೆಸಿರುವ ಆರೋಪಿಗಳು. ಕುಡ್ತಮುಗೇರು ನಿವಾಸಿ, ಪ್ರಥಮ ಪಿಯುಸಿ ವಿದ್ಯಾರ್ಥಿ ಹಲ್ಲೆಗೊಳಗಾದ ಬಾಲಕ. 

ಎಪ್ರಿಲ್ 21ರಂದು 11 ಗಂಟೆ ಸುಮಾರಿಗೆ ನಾಲ್ವರು ಆರೋಪಿಗಳು ಬಾಲಕನನ್ನು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿರುವುದಲ್ಲದೆ ಮೋಟಾರು ಸೈಕಲಿನಲ್ಲಿ ಕುಳ್ಳಿರಿಸಿ ಕಾಡುಮಠ ಪ್ರೌಢ ಶಾಲೆಯ ಮೈದಾನಕ್ಕೆ ಕರೆದುಕೊಂದು ಹೋಗಿ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ್ದಾರೆ. ಅಲ್ಲದೆ ಜೈ ಶ್ರೀರಾಮ್ ಹೇಳುವಂತೆ ಬಲವಂತ ಪಡಿಸಿರುವುದಲ್ಲದೆ ಬಾಲಕನ ಕಿಸೆಯಲ್ಲಿದ್ದ ಹಣವನ್ನು ದೋಚಿದ್ದಾರೆ ಎಂದು ಬಾಲಕ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ಪೊಲೀಸರಿಗೆ ದೂರು ನೀಡದಂತೆ ಹಲ್ಲೆಗೊಳಗಾದ ಬಾಲಕನಿಗೆ ಆರೋಪಿಗಳು ಬೆದರಿಕೆ ಹಾಕಿದ ಹಿನ್ನೆಯಲ್ಲಿ ಭಯಗೊಂಡ ಬಾಲಕ ಹಲ್ಲೆ ನಡೆಸಿರುವ ವಿಷಯವನ್ನು ಯಾರಿಗೂ ತಿಳಿಸಿರಲಿಲ್ಲ. ಆದರೆ ಆರೋಪಿಗಳು ಹಲ್ಲೆ ನಡೆಸಿದ ಸಂದರ್ಭದಲ್ಲಿ ಮಾಡಿರುವ ವಿಡಿಯೋ ಬುಧವಾರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಬಳಿಕ ಬಾಲಕ ವಿಟ್ಲ ಠಾಣೆಗೆ ದೂರು ನೀಡಿದ್ದಾನೆ.

ಪೊಲೀಸ್ ವರಿಷ್ಠಾಧಿಕಾರಿ ಡಾ. ಲಕ್ಷ್ಮೀ ಪ್ರಸಾದ್ ಮಾರ್ಗದರ್ಶನದಲ್ಲಿ ಡಿವೈಎಸ್‍ಪಿ ವೆಲೆಂಟನ್ ಡಿಸೋಜ್, ವೃತ್ತ ನಿರೀಕ್ಷಕ ಟಿ. ಡಿ. ನಾಗರಾಜ್ ನಿರ್ದೇನದಂತೆ ಡಿಸಿಐಬಿ ಪಿಐ ಚೆಲುವರಾಜ್, ಉದಯ ರೈ, ತಾರಾನಾಥ, ಪ್ರವೀಣ್ ರೈ, ಸೋನ್ಸ್, ಸುರೇಶ್ ಹಾಗೂ ಬಂಟ್ವಾಳ ಸಂಚಾರಿ ಠಾಣೆಯ ಉಪನಿರೀಕ್ಷಕ ರಾಜೇಶ್ ಕೆ.ವಿ. ಅವರ ತಂಡ ಕಾರ್ಯಾಚರಣೆಯಲ್ಲಿ ಭಾಗವಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News