ದಿಢೀರ್ ರದ್ದಾದ ರೈಲು: ಜೋಕಟ್ಟೆಯಲ್ಲಿ ಆಶ್ರಯ ಪಡೆದ ಕಾರ್ಮಿಕರು

Update: 2020-05-28 15:22 GMT

ಮಂಗಳೂರು, ಮೇ 28: ಕೊರೋನ-ಲಾಕ್‌ಡೌನ್ ಹಿನ್ನೆಲೆಯಲ್ಲಿ ದ.ಕ.ಜಿಲ್ಲೆಯ ವಿವಿಧ ಕಡೆಗಳಲ್ಲಿ ಅತಂತ್ರರಾಗಿರುವ ವಲಸೆ ಕಾರ್ಮಿಕರನ್ನು ಅವರ ಸ್ವಗ್ರಾಮಕ್ಕೆ ಕಳುಹಿಸಿಕೊಡುವ ಪ್ರಕ್ರಿಯೆಯನ್ನು ಜಿಲ್ಲಾಡಳಿತ ಮುಂದುವರಿಸುತ್ತಿದ್ದರೂ ಕೂಡ ‘ಕಾರ್ಮಿಕರ ಸ್ವಗ್ರಾಮ ಪ್ರಯಾಣದ ಬವಣೆ’ಯು ಮುಂದುವರಿದಿದೆ.

ಪಶ್ಚಿಮ ಬಂಗಾಳಕ್ಕೆ ತೆರಳಲು ಜಿಲ್ಲೆಯ ನೂರಾರು ಮಂದಿ ಸೇವಾಸಿಂಧು ಮೂಲಕ ಹೆಸರು ನೋಂದಾಯಿಸಿದ್ದರು. ಅದರಂತೆ ಗುರುವಾರದಿಂದ ರೈಲು ಪ್ರಯಾಣವಿದೆ ಎಂದು ಕಾರ್ಮಿಕರಿಗೆ ಸಂದೇಶ ಕಳುಹಿಸಿಲಾಗಿತ್ತು. ಅದನ್ನು ನಂಬಿದ ಕಾರ್ಮಿಕರು ಬಾಡಿಗೆ ಕೋಣೆಯ ಒಪ್ಪಂದ ರದ್ದುಗೊಳಿಸಿದ್ದಾರೆ. ಕೆಲವರು ಪಾತ್ರೆಪಗಡೆಗಳನ್ನು ಗುಜಿರಿಗೆ ಮಾರಿದ್ದಾರೆ. ಇನ್ನು ಕೆಲವರು ಅರ್ಧ ಬೆಲೆಗೆ ಮಾರಾಟ ಮಾಡಿದ್ದಾರೆ. ಒಟ್ಟಿನಲ್ಲಿ ಎಲ್ಲವನ್ನೂ ತೊರೆದು ಗುರುವಾರ ಮುಂಜಾನೆ ಸುರತ್ಕಲ್ ಸಮೀಪದ ಕಾನ, ಪಣಂಬೂರು, ಜೋಕಟ್ಟೆ ಮತ್ತಿತರ ಕಡೆ ಸಾವಿರಕ್ಕೂ ಅಧಿಕ ಮಂದಿ ರೈಲು ನಿಲ್ದಾಣಕ್ಕೆ ತೆರಳಲು ಬಸ್ಸಿಗಾಗಿ ಕಾದು ನಿಂತರು. ಅಷ್ಟರಲ್ಲೇ ಪಶ್ಚಿಮ ಬಂಗಾಳಕ್ಕೆ ತೆರಳುವ ರೈಲು ರದ್ದಾದ ಬಗ್ಗೆ ಮಾಹಿತಿ ಲಭಿಸಿತು. ಊರಿಗೆ ಹೋಗುವ ತವಕದಲ್ಲಿದ್ದ ವಲಸೆ ಕಾರ್ಮಿಕರು ಹತಾಶೆಗೊಂಡರು.ಆಕ್ರೋಶ ವ್ಯಕ್ತಪಡಿಸಿದರು. ನಡೆದುಕೊಂಡು ಊರಿಗೆ ಹೋಗುವುದಾಗಿ ಹೇಳಿಕೊಂಡರು. ಅಂತೂ ದಿಢೀರ್ ರೈಲು ರದ್ದತಿಯಿಂದ ಬಾಡಿಗೆ ಕೋಣೆಗಳನ್ನು ತೊರೆದು ಬಂದ ವಲಸೆ ಕಾರ್ಮಿಕರು ಅತ್ತ ಊರಿಗೆ ಹೋಗಲಾಗದೆ, ಇತ್ತ ಬಾಡಿಗೆ ಕೋಣೆಗೂ ತೆರಳಲಾಗದೆ ಅತಂತ್ರರಾಗಿ ಬೀದಿಯಲ್ಲಿ ಬೀಳುವಂತಾಗಿದೆ.

ಈ ಮಧ್ಯೆ ಡಿವೈಎಫ್‌ಐ ಮಾರ್ಗದರ್ಶನದ ಜೋಕಟ್ಟೆಯ ನಾಗರಿಕ ಹೋರಾಟ ಸಮಿತಿಯು ಸುಮಾರು 20 ಮಹಿಳೆಯರ ಸಹಿತ 100 ಮಂದಿಗೆ ಊಟ ಹಾಗೂ ತಾತ್ಕಾಲಿಕ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಎಂದಿನಂತೆ ಗ್ರಾಪಂ ಸದಸ್ಯ ಅಬೂಬಕರ್ ಬಾವಾ ಮತ್ತಿತರರು ವಲಸೆ ಕಾರ್ಮಿಕರ ನೆರವಿಗೆ ಧಾವಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News