7 ದಿನಗಳ ಸಾಂಸ್ಥಿಕ ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿದವರು ಮನೆಗೆ

Update: 2020-05-30 05:04 GMT

ಉಡುಪಿ, ಮೇ 28: ಕೊರೋನ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸರಕಾರದ ನೀತಿನಿಯಮಗಳು ಪ್ರತಿದಿನವೆಂಬಂತೆ ಬದಲಾಗುತ್ತಿದ್ದು, ಇದರಿಂದ ಉಡುಪಿ ಜಿಲ್ಲೆಯಲ್ಲಿ ಕೋವಿಡ್-19ನ್ನು ಕಟ್ಟಿಹಾಕಲು ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ನಡೆಸುತ್ತಿರುವ ಅವಿರತ ಹೋರಾಟಕ್ಕೆ ಹಿನ್ನಡೆಯಾಗುತ್ತಿದೆ.

ಇವುಗಳಿಗೆಲ್ಲಾ ಕಲಶವಿಟ್ಟಂತೆ ಬುಧವಾರ ರಾಜ್ಯ ಸರಕಾರ ಎಲ್ಲಾ ಜಿಲ್ಲಾಡಳಿತಗಳಿಗೆ ಕಳುಹಿಸಿರುವ ಹೊಸ ಸುತ್ತೋಲೆ, ಕೋವಿಡ್-19 ವಿರುದ್ಧದ ಹೋರಾಟಕ್ಕೆ ಶಾಶ್ವತ ಇತಿಶ್ರೀ ಹಾಡಬಹುದಾಗಿದೆ. ಇದರ ಪ್ರಕಾರ ಈಗ ಹೊರದೇಶ, ಹೊರರಾಜ್ಯಗಳಿಂದ ಬಂದು ಜಿಲ್ಲೆಯ ವಿವಿಧ ಸಾಂಸ್ಥಿಕ ಕ್ವಾರಂಟೈನ್ ಕೇಂದ್ರಗಳಲ್ಲಿ ಏಳು ದಿನಗಳ ವಾಸ್ತವ್ಯವನ್ನು ಪೂರ್ಣಗೊಳಿಸಿದ ಎಲ್ಲರನ್ನೂ ಮನೆಗೆ ಕಳುಹಿಸಲಾಗಿದೆ.

ಇದಕ್ಕೆ ಇರುವ ಒಂದೇ ಒಂದು ಮಾನದಂಡವೆಂದರೆ ಮೇಲ್ನೋಟಕ್ಕೆ ಅವರಲ್ಲಿ ಯಾವುದೇ ಕೊರೋನ ರೋಗಲಕ್ಷಣಗಳು ಕಾಣಿಸಿಕೊಳ್ಳಬಾರದು ಅಷ್ಟೆ. ಇದರಿಂದ ಈಗಾಗಲೇ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗಾಗಿ ಕಳುಹಿಸಿ ಅದರ ಫಲಿತಾಂಶಕ್ಕಾಗಿ ಕಾಯುತ್ತಿರುವವರು ಕೇಂದ್ರದಲ್ಲಿ ಏಳು ದಿನಗಳ ವಾಸವನ್ನು ಮುಗಿಸಿದ್ದರೆ ಅವರು ಮನೆಗೆ ತೆರಳುವಂತಾಗಿದೆ. ಒಂದು ವೇಳೆ ಅವರ ಮಾದರಿ ಪಾಸಿಟಿವ್ ಆಗಿ ಬಂದರೆ, ಅವರನ್ನು ಮತ್ತೆ ಕರೆತಂದು ಆಸ್ಪತ್ರೆಗೆ ಸೇರಿಸಬೇಕಾಗಿದೆ. ಆದರೆ ಅದಾಗಲೇ ಅವರಿಂದ ಮನೆಮಂದಿಗೆಲ್ಲಾ ಉಚಿತವಾಗಿ ಸೋಂಕು ವಿತರಣೆಯಾಗಿರುವ ಸಾಧ್ಯತೆ ಇರುತ್ತದೆ ಎಂದು ಆರೋಗ್ಯ ಇಲಾಖೆಯ ಮೂಲಗಳು ಕಳವಳವ್ಯಕ್ತಪಡಿಸಿವೆ.

ಆದರೆ ಹೀಗೆ ಕಳುಹಿಸುವ ಮುನ್ನ ಎಲ್ಲರ ಮೆಡಿಕಲ್ ಚೆಕ್‌ಅಪ್, ಥರ್ಮಲ್ ಸ್ಕೃಿನಿಂಗ್ ನಡೆಸಬೇಕು. 60 ವರ್ಷ ಮೇಲ್ಪಟ್ಟ ಎಲ್ಲಾ ಹಿರಿಯ ನಾಗರಿಕರನ್ನು ಹೋಮ್ ಕ್ವಾರಂಟೈನ್‌ಗೆ ಕಳುಹಿಸುವ ಮುನ್ನ ಅವರ ಸಂಪೂರ್ಣ ಕ್ಲಿನಿಕಲ್ ಟೆಸ್ಟ್ ನಡೆಸಬೇಕು. ಕಳುಹಿಸುವ ಮುನ್ನ ಅವರ ಕೈಗೆ ಕೊರೋನ ಸ್ಟಾಂಪ್ ಹಾಕಿರಬೇಕು. ಹಾಗೂ ಕ್ವಾರಂಟೈನ್ ವಾಚ್ ಆ್ಯಪ್‌ನಲ್ಲಿ ಹೆಸರು ನೋಂದಾಯಿಸಿರಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಕೇಂದ್ರದಲ್ಲಿ ಒಂದು ವಾರ ಇದ್ದ ಎಲ್ಲರೂ ಇಲ್ಲಿಂದ ತೆರಳಿದ ಬಳಿಕ ಕಡ್ಡಾಯವಾಗಿ ಒಂದು ವಾರ ಹೋಂ ಕ್ವಾರಂಟೈನ್‌ನಲ್ಲಿರಬೇಕು. ಒಂದು ವೇಳೆ 14 ದಿನ ಕೇಂದ್ರದಲ್ಲಿದ್ದರೆ ಅವರು ನೇರವಾಗಿ ಮನೆಗೆ ತೆರಳಬಹುದಾಗಿದೆ. ಈ ಮಾನದಂಡದ ಪ್ರಕಾರ, ಈಗ ಜಿಲ್ಲೆಯ ವಿವಿಧ ಸ್ಥಾಂಸ್ಥಿಕ ಕ್ಯಾರಂಟೈನ್ ನಲ್ಲಿರುವ 8168 ಮಂದಿಯಲ್ಲಿ ಶೇ.60ಕ್ಕೂ ಅಧಿಕ ಮಂದಿ ಈಗಾಗಲೇ ಮನೆಗಳಿಗೆ ತೆರಳಿಯಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.

ಮನೆಗಳಿಗೆ ತೆರಳಿದ ಬಳಿಕ 14 ದಿನಗಳ ಕಾಲ ಅವರು ‘ವರದಿ’ ಅವಧಿಯ ಲ್ಲಿದ್ದು, ಆರೋಗ್ಯದ ಬಗ್ಗೆ ವಿವರಗಳನ್ನು ನೀಡಬೇಕು. ಅವರಲ್ಲಿ ಯಾವುದೇ ರೋಗಲಕ್ಷಣ ಕಾಣಿಸಿಕೊಂಡರೆ ತಕ್ಷಣ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಅಥವಾ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಬೇಕಿದ್ದು, ತಕ್ಷಣ ಅವರನ್ನು ಪರೀಕ್ಷೆಗೊಳಪಡಿಸಿ ಪಾಸಿಟಿವ್ ಬಂದರೆ ಕೋವಿಡ್ ಆಸ್ಪತ್ರೆಗೆ ಸೇರಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ಆದುದರಿಂದ ಹೋಮ್ ಕ್ವಾರಂಟೈನ್‌ನಲ್ಲಿರುವವರು ಎಲ್ಲಾ ನಿಯಮಗಳನ್ನು ಪಾಲಿಸಬೇಕು. ಯಾವುದೇ ಕಾರಣಕ್ಕೆ ನಿಯಮ ಉಲ್ಲಂಘಿಸಿದರೆ ಅವರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಸಿದ್ದಾರೆ.

ಎಲ್ಲರೂ ಕಡ್ಡಾಯವಾಗಿ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕಿದ್ದು, ಅದರಲ್ಲಿ ಜಿಯೋ ಫೆನ್ಸಿಂಗ್ ಮಾಡಿ ಅವರ ಮೇಲೆ ಒಂದು ಕಣ್ಣಿಡಲಾಗುವುದು. ಅವರು ನಿಯಮ ಉಲ್ಲಂಘಿಸಿ ಮನೆಯ ಹೊರಗೆ ಬಂದರೆ ತಕ್ಷಣ ಮಾಹಿತಿ ಸಿಕ್ಕಿ ಮೊದಲು ಎಚ್ಚರಿಕೆ ನೀಡಲಾಗುವುದು. ಅದು ಪುನರಾವರ್ತನೆಯಾದರೆ ಅವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಜಗದೀಶ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News