ಕಂಟೈನ್‌ಮೆಂಟ್ ವಲಯಗಳಲ್ಲಿ ಕಟ್ಟುನಿಟ್ಟಿನ ನಿರ್ಬಂಧ: ರಾಜ್ಯಗಳಿಗೆ ಕೇಂದ್ರ ಸೂಚನೆ

Update: 2020-05-28 15:56 GMT

ಹೊಸದಿಲ್ಲಿ, ಮೇ. 28: ದೇಶಾದ್ಯಂತ ಹೇರಲಾಗಿರುವ ಲಾಕ್‌ಡೌನ್ ಅವಧಿ ಕೊನೆಗೊಳ್ಳಲು ಇನ್ನೂ ಮೂರು ದಿನಗಳು ಉಳಿದಿದ್ದು, ಕೇಂದ್ರ ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ ಅವರು, ಕೋವಿಡ್19 ಹಾವಳಿಯಿಂದ ತೀವ್ರವಾಗಿ ಬಾಧಿತವಾಗಿರುವ ಹಾಗೂ ಶೇ.71ರಷ್ಟು ಕೊರೋನ ವೈರಸ್ ಪ್ರಕರಣಗಳು ವರದಿಯಾಗಿರುವ13 ನಗರಗಳ ಮುನ್ಸಿಪಲ್ ಆಯುಕ್ತರು ಹಾಗೂ ಜಿಲ್ಲಾ ಮ್ಯಾಜಿಸ್ಟ್ರೇಟರುಗಳ ಜೊತೆ ಗುರುವಾರ ಮಾತುಕತೆ ನಡೆಸಿದರು.

ವಿಡಿಯೋಕಾನ್ಫರೆನ್ಸ್ ಮೂಲಕ ನಡೆದ ಈ ಸಭೆಯಲ್ಲಿ,ಅಧಿಕ ಸಂಖ್ಯೆಯಲ್ಲಿ ಸೋಂಕಿನ ಪ್ರಕರಣಗಳು ವರದಿಯಾಗಿರುವ ಕಂಟೈನ್‌ಮೆಂಟ್ ವಲಯಗಳನ್ನು ಸಂಪೂರ್ಣವಾಗಿ ಸೀಲ್‌ಡೌನ್ ಮಾಡಬೇಕಾದ ಅಗತ್ಯವನ್ನು ಒತ್ತಿ ಹೇಳಿದರು. ಕೊರೋನ ಹಾವಳಿಗೆ ಕಡಿವಾಣ ಹಾಕಲು ಜೂನ್ 1ರಿಂದ ಕೇಂದ್ರ ಸರಕಾರವು ಅನುಸರಿಸಬೇಕಾದ ಕಾರ್ಯತಂತ್ರದ ಬಗ್ಗೆ ನಿರ್ಧರಿಸಲು ರಾಜ್ಯಗಳ ಸಲಹೆಯನ್ನು ವರು ಕೋರಿದರು.

ಮುಂಬೈ,ಚೆನ್ನೈ,ದಿಲ್ಲಿ, ಅಹ್ಮದಾಬಾದ್, ಥಾಣೆ, ಪುಣೆ, ಹೈದರಾಬಾದ್, ಕೋಲ್ಕತಾ/ಹೌರಾ, ಇಂದೋರ್, ಜೈಪುರ, ಜೋಧಪುರ, ಚೆಂಗಲ್ಪಟ್ಟು ಹಾಗೂ ತಿರುವಲ್ಲೂರು ನಗರಗಳ 13 ಮಂದಿ ಮುನ್ಸಿಪಲ್ ಆಯುಕ್ತರು ವಿಡಿಯೋ ಕಾನ್ಫರೆನ್ಸ್‌ನಲ್ಲಿ ಪಾಲ್ಗೊಂಡಿದ್ದರು. ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಪ್ರಧಾನ ಕಾರ್ಯದರ್ಶಿ (ಆರೋಗ್ಯ)ಗಳು ಕೂಡಾ ಭಾಗವಹಿಸಿದ್ದರು.

ಕೋವಿಡ್-19 ಪ್ರಕರಣಗಳ ನಿರ್ವಹಣೆಯಲ್ಲಿ ಬಾಧಿತ ಪ್ರದೇಶಗಳ ಜಿಲ್ಲಾಡಳಿತ ಹಾಗೂ ನಗರಪಾಲಿಕೆಗಳು ಕೈಗೊಂಡಿರುವ ಕ್ರಮಗಳನ್ನು ರಾಜ್ಯಗಳು ವಿಡಿಯೋಕಾನ್ಫರೆನ್ಸ್‌ನಲ್ಲಿ ಮಾಹಿತಿ ನೀಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

‘‘ರಾಜ್ಯಗಳ ಸಲಹೆಗಳನ್ನು ಸಂಪುಟ ಕಾರ್ಯದರ್ಶಿಯವರು ಪರಿಶೀಲಿಸಲಿದ್ದಾರೆ ಹಾಗೂ ಅದನ್ನು ಆರೋಗ್ಯ, ಗೃಹ ಸಚಿವಾಲಯ ಹಾಗೂ ಪ್ರಧಾನಿ ಕಾರ್ಯಾಲಯದಂತಹ ಸಚಿವಾಲಯಗಳು ಮತ್ತಿತರ ಸಂಬಂಧಿತ ಇಲಾಖೆಗಳ ಜೊತೆ ಚರ್ಚಿಸಲಿದ್ದಾರೆ’’ ಎಂದು ಕೇಂದ್ರ ಸರಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಒಂದು ವೇಳೆ ಕೇಂದ್ರ ಸರಕಾರವು ಲಾಕ್‌ಡೌನ್‌ನ್ನು ಮೇ 31ರ ಬಳಿಕವೂ ವಿಸ್ತರಿಸಿದರೂ , ರಾಜ್ಯಗಳ ಬೇಡಿಕೆಯಂತೆ ನಿಯಮಾವಳಿಗಳನ್ನು ಇನ್ನಷ್ಟು ಸಡಿಲಗೊಳಿಸುವ ನಿರೀಕ್ಷೆಯಿದೆ. ಕರ್ನಾಟಕ ಹಾಊ ಗೋವಾ ಸರಕಾರಗಳು ಹೊಟೇಲ್ ಉದ್ಯಮವನ್ನು ತೆರೆಯಲು ಆಸಕ್ತಿ ವಹಿಸಿರುವುದಾಗಿ ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News