ದ.ಕ.ಜಿಲ್ಲೆ : ಜೂ.1ರಿಂದ ಖಾಸಗಿ ಬಸ್ ಸಂಚಾರ ಪುನರಾರಂಭ

Update: 2020-05-28 16:47 GMT

ಮಂಗಳೂರು, ಮೇ 28: ಕೊರೋನ-ಲಾಕ್‌ಡೌನ್ ಹಿನ್ನೆಲೆಯಲ್ಲಿ ಮಾ.22ರಿಂದ ದ.ಕ.ಜಿಲ್ಲೆಯಲ್ಲಿ ಸ್ಥಗಿತಗೊಂಡಿದ್ದ ಖಾಸಗಿ ಬಸ್ ಸಂಚಾರವು ಜೂ.1ರಿಂದ ಆರಂಭಗೊಳ್ಳಲಿದೆ. ಆ ಮೂಲಕ 71 ದಿನಗಳ ಕಾಲ ಚಲಿಸದೆ ಇದ್ದ ಬಸ್‌ಗಳು ರೂಟ್‌ನಲ್ಲಿ ಕಾರ್ಯಾರಂಭ ಮಾಡಲಿದೆ.

ನಗರದ ಆರ್‌ಟಿಒ ಕಚೇರಿಯಲ್ಲಿ ವಿವಿಧ ಖಾಸಗಿ ಬಸ್‌ಗಳ ಮಾಲಕರ ಸಭೆ ನಡೆದು ರಾಜ್ಯ ಸರಕಾರ ಸೂಚಿಸಿದ ಮಾರ್ಗಸೂಚಿ ಪ್ರಕಾರ ಜೂ.1ರಿಂದ ಖಾಸಗಿ ಬಸ್‌ಗಳನ್ನು ಓಡಿಸುವ ಬಗ್ಗೆ ತೀರ್ಮಾನಿಸಲಾಯಿತು.

ಪ್ರಾರಂಭಿಕ ಹಂತದಲ್ಲಿ ಕೆಲವೇ ಬಸ್ಸುಗಳ ಓಡಾಟವನ್ನು ಪ್ರಾರಂಭಿಸಿ, ಪ್ರಯಾಣಿಕರ ಬೇಡಿಕೆಯ ಮೇರೆಗೆ ಮತ್ತು ಜನಸಂದಣಿ, ಸುರಕ್ಷಿತ ಅಂತರ ಕಾಪಾಡುವ ನಿಟ್ಟಿನಲ್ಲಿ ಬಸ್ಸುಗಳ ಸಂಖ್ಯೆ ಕ್ರಮೇಣ ಹೆಚ್ಚಿಸಲು ಖಾಸಗಿ ಬಸ್‌ಗಳ ಮಾಲಕರಿಗೆ ಆರ್‌ಟಿಒ ಸೂಚಿಸಿದೆ.

ಸರ್ವಜನಿಕರು ಸುರಕ್ಷಿತ ಅಂತರ, ಮಾಸ್ಕ್ ಹಾಗೂ ಕೈಗಳಿಗೆ ಸ್ಯಾನಿಟೈಜರ್ ಬಳಸುವುದು ಹಾಗೂ ತಮ್ಮದೇ ಆದ ಆಹಾರ, ನೀರು ಉಪಯೋಗಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಪ್ರತೀ ಬಸ್ಸಿನಲ್ಲಿ ಶೇ.50ರಷ್ಟು ಪ್ರಯಾಣಿಕರಿಗೆ ಮಾತ್ರ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ.

ಪ್ರಯಾಣಿಕರು ಗುರುತಿನ ಚೀಟಿ/ ಆಧಾರ ಕಾರ್ಡ್ ತಮ್ಮಲ್ಲಿಟ್ಟುಕೊಂಡು ಪ್ರಯಾಣಿಸಲು ಸೂಚಿಸಲಾಗಿದೆ. ವಾಹನಗಳ ಮಾರ್ಗಸೂಚಿ ಪ್ರಕಾರ ಬಸ್ ಸ್ಯಾನಿಟೈಜೇಶನ್, ಡ್ರೈವರ್/ಕಂಡೆಕ್ಟರ್ ಹ್ಯಾಂಡ್ ಗ್ಲೌಸ್ ಕಡ್ಡಾಯವಾಗಿ ಹಾಕಿಕೊಳ್ಳಬೇಕು ಹಾಗೂ ವೈದ್ಯಕೀಯ ಪರೀಕ್ಷೆ ಮಾಡಿಕೊಳ್ಳ ಬೇಕು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಆರ್.ಎಂ.ವರ್ಣೇಕರ್ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News